ಶುಕ್ರವಾರ, ಜೂನ್ 18, 2021
27 °C

ಮೊಳಗಿದ ಉಧೋ ಉಧೋ; ನಿದ್ರಿಸದ ನಗರ

ಪ್ರಜಾವಾಣಿ ವಾರ್ತೆ/ ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ದಾವಣಗೆರೆ: ಮೈಮೇಲೆ ಬೇವಿನುಡುಗೆ... ಅವರನ್ನು ಸುತ್ತುವರಿದ ಕುಟುಂಬಸ್ಥರು... ಕೈಯಲ್ಲಿ ಕಳಸ; ಬಾಯಲ್ಲಿ ಉಧೋ... ಉಧೋ... ಜಪ.  ಹೀಗೆ ನಗರದ ಬಹುತೇಕ ಭಕ್ತರು ಮಂಗಳವಾರ ರಾತ್ರಿಯಿಡೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.ಬೇವಿನುಡುಗೆ ತೊಟ್ಟವರು ದೇವರೇ ಮೈಮೇಲೆ ಬಂದವರಂತೆ ಹೆಜ್ಜೆ ಹಾಕಿದರು. ಉಡುಗೆ ಕಳಚಿಬೀಳದಂತೆ ಸಂಬಂಧಿಕರು ನೋಡಿಕೊಂಡರು. ಕೊಡ ಹಿಡಿದು ದೇವಸ್ಥಾನದ ಸುತ್ತ ಉರುಳು ಸೇವೆ ಮಾಡುವವರ ಮೈಮೇಲೆ ತಣ್ಣೀರು ಸುರಿಯುತ್ತಿದ್ದರೆ, ಅತ್ತ ಬೇವಿನುಡುಗೆ ತೊಟ್ಟ ಪುಟ್ಟಪುಟ್ಟ ಮಕ್ಕಳು ಬೆಳಿಗ್ಗೆಯ ಚಳಿಗೆ `ಚಿಳ್ಳ್~ ಎನ್ನುತ್ತಿದ್ದರು. ಆದರೂ, ಅವರ ಅಪ್ಪ, ಅಮ್ಮ ಬಿಡದೇ ದೇವರಿಗೆ ಪ್ರದಕ್ಷಿಣೆ ಹಾಕಿಸಿ, ಹರಕೆ ತೀರಿಸಿದ ಸಂತೃಪ್ತಭಾವದಲ್ಲಿ ಮಿಂದರು.ದುರ್ಗಾಂಬಿಕಾ ದೇವಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಹಬ್ಬದಲ್ಲಿ ಬೇವಿನುಡುಗೆ ಸೇವೆ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷವೂ ಮಂಗಳವಾರ ರಾತ್ರಿಯಿಂದ ಬುಧವಾರವಿಡೀ ನಿರಾತಂಕವಾಗಿ ನಡೆಯಿತು.ಉಧೋ... ಉಧೋ... ಸದ್ದು, ಹಬ್ಬದ ಸಡಗರಕ್ಕೆ ಬಹುತೇಕ ಬಡಾವಣೆಯ ಮಂದಿ ಮಂಗಳವಾರ ರಾತ್ರಿಯಿಡೀ ನಿದ್ರಿಸಲೇ ಇಲ್ಲ! ಇನ್ನೂ ಬುಧವಾರ ಬಾಡೂಟದ ಜತೆಗೆ `ಮದ್ಯ~ ಅವರನ್ನು ಮಲಗಲೂ ಬಿಡಲಿಲ್ಲ. ಹೀಗೆ ವಿವಿಧೆಡೆಯಿಂದ ನೆಂಟರಿಷ್ಟರು ಆಗಮಿಸಿ, ಜಾತ್ರೆಯ `ಸವಿ~ ಸವಿದರು. ಮಕ್ಕಳಿಲ್ಲದವರು ಮಕ್ಕಳಿಗೆ, ಉದ್ಯೋಗಕ್ಕಾಗಿ, ಭೂಮಿ ವಿವಾದ ಸೇರಿದಂತೆ ಹಲವಾರು ಸಮಸ್ಯೆ ಇತ್ಯರ್ಥಪಡಿಸಿದ ದೇವಿಗೆ ಹರಕೆ ತೀರಿಸಿ ಕೃತಾರ್ಥರಾದರು.ನಗರದ ವಿವಿಧ ಬಡಾವಣೆಗಳಿಂದ ಆಮಿಸಿದ ಭಕ್ತರು ದೇಗುಲದ ಸಮೀಪ ವ್ಯವಸ್ಥೆ ಮಾಡಿದ್ದ ನೀರಿನಲ್ಲಿ ಮಿಂದು ಉರುಳು ಸೇವೆ ಮಾಡಿದರು. ಕಾಯಿಲೆ-ಕಸಾಲೆ ಗುಣವಾಗಲಿ ಎಂದು ಈ ಸೇವೆ ಮಾಡುವುದು ಎಷ್ಟುಸರಿ. ಕೆಲವು ಪದವೀಧರರೂ, ಉದ್ಯೋಗಸ್ಥರೂ ಮೌಢ್ಯದಲ್ಲಿ ಹೊರಾಳಾಡಿದ್ದು ಮಾತ್ರ ದುರಂತ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.ಸಮಸ್ಯೆ ಬಂದಾಗ ಈ ಶಕ್ತಿ ದೇವತೆಗೆ ಹರಕೆ ಕಟ್ಟಿಕೊಂಡರೆ ಎಲ್ಲವೂ ಸುಗಮವಾಗಿ ನೆರವೇರುತ್ತವೆ. ಅದೇ ಕಾರಣಕ್ಕೆ ಹರಕೆ ತೀರಿಸಲು ಬಂದಿದ್ದೇನೆ. ಕೆಲವರು ಮೂರು ಹಬ್ಬದಲ್ಲಿ ಈ ಸೇವೆ ತೀರುಸುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಹಬ್ಬದಲ್ಲಿ ಬೇವಿನುಡುಗೆ ಸೇವೆ ನಡೆಸುತ್ತಾರೆ. ಅದು ಅವರವರ ಇಚ್ಛೆಗೆ ಬಿಟ್ಟವಿಚಾರ~ ಎಂದು ಹರಿಹರದಿಂದ ಬಂದಿದ್ದ ಭಕ್ತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.