ಗುರುವಾರ , ಮಾರ್ಚ್ 4, 2021
29 °C
ವ್ಯಕ್ತಿ ಸ್ಮರಣೆ

ಮೌಸ್ ಜನಕ ಡಗ್ಲಾಸ್ ಕಾರ್ಲ್ ಎಂಗಲ್‌ಬರ್ಟ್

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

ಮೌಸ್ ಜನಕ ಡಗ್ಲಾಸ್ ಕಾರ್ಲ್ ಎಂಗಲ್‌ಬರ್ಟ್

ಈ ತಿಂಗಳ 2ರಂದು ನಿಧನರಾದ 88 ವರ್ಷದ ಅಮೆರಿಕದ ಎಂಜಿನಿಯರ್ ಡಗ್ಲಾಸ್ ಕಾರ್ಲ್ ಎಂಗಲ್‌ಬರ್ಟ್, `ಮೌಸ್ ಜನಕ' ಎಂದೇ ಖ್ಯಾತ. ಇಂಟರ್‌ನೆಟ್ ಮತ್ತು ಇ-ಮೇಲ್ ಸೌಲಭ್ಯ ಅಭಿವೃದ್ಧಿಗೊಳ್ಳುವ ದಶಕದ ಮುನ್ನವೇ ಕಂಪ್ಯೂಟರ್ ಮೌಸ್ ಆವಿಷ್ಕರಿಸಿದ್ದ ಅವರ ಸಾಧನೆ ಕಂಪ್ಯೂಟರ್ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು. ಅವರು ಮೌಸ್ ಕಂಡುಹಿಡಿದದ್ದು 1963ರಲ್ಲಿ. ಅದೊಂದು ರೋಚಕ ಕಥೆ.ಆಗಿನ್ನೂ ಪರ್ಸನಲ್ ಕಂಪ್ಯೂಟರ್‌ಗಳು ಅಭಿವೃದ್ಧಿಗೊಳ್ಳುತ್ತಿದ್ದ ಕಾಲ. ಕಂಪ್ಯೂಟರ್‌ಗಳೆಂದರೆ ಕೋಣೆಯಷ್ಟು ಗಾತ್ರದ ಬೃಹತ್ ಯಂತ್ರಗಳು. ಕೇವಲ ಲೆಕ್ಕ ಮಾಡಲು ಮಾತ್ರ ಇವುಗಳನ್ನು ಉಪಯೋಗಿಸಲಾಗುತ್ತಿತ್ತು. ಕಾರ್ಯನಿರ್ವಹಣೆಯಲ್ಲಿ ಇದು ಎಷ್ಟು ನಿಧಾನವಾಗಿತ್ತು ಎಂದರೆ ಲೆಕ್ಕವೊಂದನ್ನು ಬಿಡಿಸಲು 8ರಿಂದ 10 ಗಂಟೆ ತೆಗೆದುಕೊಳ್ಳುತ್ತಿತ್ತು. ಎಂಜಿನಿಯರ್‌ಗಳು ಈ ಯಂತ್ರವನ್ನು ಚಾಲನೆಗೊಳಿಸಿ ರಾತ್ರಿ ಪೂರ್ತಿ ಚೆನ್ನಾಗಿ ನಿದ್ರೆ ಮಾಡುತ್ತಿದ್ದರಂತೆ. ಬೆಳಗ್ಗಿನ ಹೊತ್ತಿಗೆ ಕಂಪ್ಯೂಟರ್ ಲೆಕ್ಕ ಮಾಡಿ ಮುಗಿಸಿರುತ್ತಿತ್ತು!ಒರೆಗಾನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ಡಗ್ಲಾಸ್ ತಲೆಯ ತುಂಬಾ ಕಂಪ್ಯೂಟರ್‌ನ ಅನನ್ಯ  ಸಾಧ್ಯತೆಯ ಕುರಿತಾಗಿಯೇ ಚಿಂತನೆ. ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯ ಮೂಲಕ ಇಡೀ ಪ್ರಪಂಚವನ್ನೇ ಪರಸ್ಪರ ಬೆಸೆಯಬಹುದು ಎನ್ನುವುದರ ಬಗ್ಗೆ ಅವರು ಅಪಾರ ವಿಶ್ವಾಸ ಹೊಂದಿದ್ದರು. ಈ ಎಲ್ಲ ಆವಿಷ್ಕಾರಗಳಿಗೆ ತಾಯಿ ಬೇರಾಗಿ ಕಂಪ್ಯೂಟರ್ ಮತ್ತು ಮನುಷ್ಯನ ನಡುವೆ ಸಂಪರ್ಕ ಕಲ್ಪಿಸುವ ಉಪಕರಣವೊಂದನ್ನುಅಭಿವೃದ್ಧಿಪಡಿಸಬೇಕು ಎಂದೂ ಕನಸು ಕಾಣುತ್ತಿದ್ದರು.ಅದು ಎರಡನೆಯ ಮಹಾಯುದ್ಧದ ಸಮಯ. ಡಗ್ಲಾಸ್‌ಗೆ ಫಿಲಿಪ್ಪೀನ್ಸ್‌ನಲ್ಲಿ ರೆಡಾರ್ ತಂತ್ರಜ್ಞನಾಗಿ ಕೆಲಸ ಮಾಡುವಂತೆ ಸೇನೆಯಿಂದ ಆದೇಶ ಬರುತ್ತದೆ. ಓದನ್ನು ಅರ್ಧಕ್ಕೆ ನಿಲ್ಲಿಸಿ ಅವರು ಯುದ್ಧಭೂಮಿಗೆ ಹೊರಡುತ್ತಾರೆ. ಅಲ್ಲಿ ರೆಡಾರ್ ವ್ಯವಸ್ಥೆ ನಿಯಂತ್ರಿಸಲು ಲೈಟ್ ಪೆನ್ ಬಳಸುತ್ತಿದ್ದುದನ್ನು ಕಂಡ ಅವರು, ಯಾಕೆ ಇದೇ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಮತ್ತು ಮನುಷ್ಯನ ನಡುವೆ ಸಂಪರ್ಕ ಕಲ್ಪಿಸಬಾರದು ಎಂದು ಯೋಚಿಸುತ್ತಾರೆ.ಆಗ ಪ್ರಸಿದ್ಧ ವಿಜ್ಞಾನಿ ವಾನ್ನೆವರ್ ಬುಷ್ ಬರೆದ `ಆ್ಯಸ್ ವಿ ಮೇ ಥಿಂಕ್' ಎಂಬ ಲೇಖನಅವರ ಗಮನ ಸೆಳೆಯುತ್ತದೆ. ಬುಷ್ ತಮ್ಮ ಲೇಖನದಲ್ಲಿ `ಮೆಮೆಕ್ಸ್' ಎನ್ನುವ ಕಾಲ್ಪನಿಕ ಉಪಕರಣದ ಮೂಲಕ ಕಂಪ್ಯೂಟರ್ ಜತೆಗೆ ಸಂವಾದ ನಡೆಸಬಹುದು ಎಂಬ ಸಾಧ್ಯತೆಯ ಕುರಿತು ಬರೆದಿರುತ್ತಾರೆ.  ಇದನ್ನು ಓದಿದ ಡಗ್ಲಾಸ್ ತಲೆಯಲ್ಲಿ `ಮೌಸ್'ನ ಅಸ್ಪಷ್ಟ ಚಿತ್ರಣವೊಂದು ಮೂಡುತ್ತದೆ.ಯುದ್ಧ ಮುಗಿದ ನಂತರ ಡಗ್ಲಾಸ್ ಅರ್ಧಕ್ಕೆ ನಿಂತಿದ್ದ ತಮ್ಮ ಓದನ್ನು ಮುಂದುವರಿಸುತ್ತಾರೆ. 1950ರಲ್ಲಿ ಕ್ಯಾಲಿಫೋರ್ನಿಯಾ ವಿವಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಳ್ಳುತ್ತಾರೆ. ಒಂದಿಷ್ಟು ಕಾಲ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಾರೆ. ಆದರೆ, ಕಂಪ್ಯೂಟರ್ ಬಗ್ಗೆ ಅವರಿಗಿದ್ದ ಅಪಾರ ಜ್ಞಾನ ಅವರನ್ನು ಸಂಶೋಧನಾ ಕ್ಷೇತ್ರಕ್ಕೆ ಕರೆತರುತ್ತದೆ.1956ರಲ್ಲಿ ಅವರು ಸ್ಟ್ಯಾನ್‌ಫೋರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೇರುತ್ತಾರೆ. ಕಂಪ್ಯೂಟರ್ ಜತೆಗೆ ಸಂವಾದ ನಡೆಸಬಲ್ಲ ಉಪಕರಣವೊಂದನ್ನು ಅಭಿವೃದ್ಧಿಪಡಿಸಲು ಆಗ್‌ಮೆಂಟೇಷನ್ ರಿಸರ್ಚ್ ಸೆಂಟರ್‌ನ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಹಲವು ಪ್ರಯತ್ನಗಳ ನಂತರ 1963ರಲ್ಲಿ ತಮ್ಮ 38ನೇ ವಯಸ್ಸಿನಲ್ಲಿ `ಎಕ್ಸ್ ವೈ ಪೊಸಿಷನಿಂಗ್ ಇಂಡಿಕೇಟರ್' ಎಂಬ ಉಪಕರಣ ತಯಾರಿಸುತ್ತಾರೆ. ಇದೇ ಪ್ರಪಂಚದ ಮೊಟ್ಟ ಮೊದಲ `ಮೌಸ್'.ಡಗ್ಲಾಸ್ ಮರದಿಂದ ಈ ಮೌಸ್ ತಯಾರಿಸಿದ್ದರು. ಒಂದು ಚೌಕಾಕಾರದ ಪೆಟ್ಟಿಗೆ. ಅದರ ಕೆಳಗೆ ಒಂದು ಚಕ್ರ. ಮೇಲೆ ಒಂದು ಕೆಂಪು ಗುಂಡಿ. ಹಿಂದೆ ಇಲಿಯ ಬಾಲದ ಹಾಗೆ ತಂತಿ ಜೋಡಿಸಲಾಗಿತ್ತು. 1970ರಲ್ಲಿ `ಎಸ್‌ಆರ್‌ಐ' ಇಂಟರ್‌ನ್ಯಾಷನಲ್ ಸಂಸ್ಥೆ ಈ ಮೌಸ್‌ನ ಹಕ್ಕುಸ್ವಾಮ್ಯ ಪಡೆದುಕೊಂಡಿತು. ಮೌಸ್‌ನ ಆವಿಷ್ಕಾರ ಕಂಪ್ಯೂಟರ್ ತಂತ್ರಜ್ಞರ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಕಂಪ್ಯೂಟರ್ ಜತೆ ಸಂವಾದ ನಡೆಸಲು ಸಾಧ್ಯ ಎನ್ನುವುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸುವಂತೆ ಡಗ್ಲಾಸ್‌ಗೆ ಸವಾಲು ನೀಡಲಾಯಿತು.          1968ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಸಮ್ಮೇಳನದಲ್ಲಿ ಸಾವಿರಕ್ಕೂ ಹೆಚ್ಚು ಕಂಪ್ಯೂಟರ್ ಎಂಜಿನಿಯರ್‌ಗಳಿಗೆ ಅವರು ತಮ್ಮ ಸಂಶೋಧನೆಯ ಪ್ರಾತ್ಯಕ್ಷಿಕೆ ನೀಡಿದರು. ಇದನ್ನು ಕಂಪ್ಯೂಟರ್‌ಗೆ ಸಂಬಂಧಿಸಿದ `ಎಲ್ಲ ಪ್ರಾತ್ಯಕ್ಷಿಕೆಗಳ ತಾಯಿ' ಎಂದೇ ಕರೆಯಲಾಗುತ್ತದೆ. ಯಾಕೆಂದರೆ ಇದು ಕೇವಲ ಮೌಸ್ ಬಳಕೆಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಮಾತ್ರವಾಗಿರಲಿಲ್ಲ. ಕಂಪ್ಯೂಟರ್ ವ್ಯವಸ್ಥೆಯ ಭವಿಷ್ಯವನ್ನೇ ಅವರು  ತೆರೆದಿಟ್ಟಿದ್ದರು. ಇಂದಿನ `ವರ್ಕ್ ಸ್ಟೇಷನ್' ಕಲ್ಪನೆಯನ್ನು ಡಗ್ಲಾಸ್ 50 ವರ್ಷಗಳ ಹಿಂದೆಯೇ ಅನಾವರಣಗೊಳಿಸಿದ್ದರು!ಮೋಡೆಮ್ ಮೂಲಕ ತಮ್ಮ ಪ್ರಯೋಗಾಲಯಕ್ಕೆ ಸಂಪರ್ಕ ಕಲ್ಪಿಸಿ ಇಂದು ನಾವು ಕರೆಯುವ `ಆನ್‌ಲೈನ್ ವ್ಯವಸ್ಥೆ'ಯನ್ನು ಪ್ರದರ್ಶಿಸಿದ್ದರು. ಈ ಪ್ರಾತ್ಯಕ್ಷಿಕೆ ನೀಡಿದ ನಂತರ ಅವರು ವಿಡಿಯೊ ಟೆಲಿ ಕಾನ್ಫರೆನ್ಸಿಂಗ್, ಕಂಪ್ಯೂಟರ್‌ನಲ್ಲಿ ಮಲ್ಟಿ ವಿಂಡೊ ಬಳಸುವ ಸಂಶೋಧನೆ, ಡಿಸ್‌ಪ್ಲೇ ಎಡಿಟಿಂಗ್, ಆನ್‌ಲೈನ್ ಪ್ರೊಸೆಸಿಂಗ್, ಹೈಪರ್ ಮೀಡಿಯಾ ಸೇರಿದಂತೆ ಹಲವು ಹೊಸ ಸಂಶೋಧನೆಗಳನ್ನು ಮಾಡಿ ಪರ್ಸನಲ್ ಕಂಪ್ಯೂಟರ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು.ಆ್ಯಪಲ್ ಕಂಪೆನಿ 1984ರಲ್ಲಿ ಮ್ಯಾಕಿಂತೋಷ್ ಕಂಪ್ಯೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವವರೆಗೆ ಮೌಸ್ ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿರಲಿಲ್ಲ. ಮ್ಯಾಕಿಂತೋಷ್ ಕಂಪ್ಯೂಟರ್‌ಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಡಗ್ಲಾಸ್ ಅಭಿವೃದ್ಧಿಪಡಿಸಿದ ಮೌಸ್‌ಗಳಿಗೆ ವಾಣಿಜ್ಯ ಬೇಡಿಕೆ ಬಂತು. ಇಂತಹ ಸಾವಿರಾರು ಮೌಸ್‌ಗಳನ್ನು ಆ್ಯಪಲ್ ಕಂಪೆನಿಯೊಂದೇ ಖರೀದಿಸಿತು. 40 ಸಾವಿರ ಡಾಲರ್‌ಗಳಿಗೆ `ಎಸ್‌ಆರ್‌ಐ' ಸಂಸ್ಥೆಯು ಮೌಸ್‌ನ ಪರವಾನಗಿಯನ್ನು `ಆ್ಯಪಲ್' ಕಂಪೆನಿ ನೀಡಿತು. ಆದರೆ, ಮೌಸ್ ಅಭಿವೃದ್ಧಿಪಡಿಸಿದ ಡಗ್ಲಾಸ್‌ಗೆ ಗೌರವಧನವಾಗಿ ಸಿಕ್ಕಿದ್ದು ಕೇವಲ 10 ಸಾವಿರ ಡಾಲರ್.ಇಂಟರ್‌ನೆಟ್ ತಳಪಾಯ ಎಂದು ಕರೆಯಲಾಗುವ `ಅರ್ಪಾನೆಟ್' ರೂಪುಗೊಂಡಿದ್ದೇ ಡಗ್ಲಾಸ್ ಅವರ ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯ ಆಧಾರದ ಮೇಲೆ. `ಅರ್ಪಾನೆಟ್' ರೂಪುಗೊಳ್ಳುವಿಕೆಯಲ್ಲಿ `ಎಸ್‌ಆರ್‌ಐ' ಕೂಡ ಮಹತ್ವದ ಪಾತ್ರವಹಿಸಿತ್ತು. 1977ರಲ್ಲಿ `ಎಸ್‌ಆರ್‌ಐ' ಪ್ರಯೋಗಾಲಯವನ್ನು ಸ್ವಾಧೀನಪಡಿಸಿಕೊಂಡ ಟೈಮ್‌ಷೇರ್ ಎನ್ನುವ ಕಂಪೆನಿ, 1980ರಲ್ಲಿ ಪ್ರಯೋಗಾಲಯವನ್ನು `ಮ್ಯಾಕ್‌ಡೊನಲ್' ಎನ್ನುವ ಕಂಪೆನಿಗೆ ಮಾರಾಟ ಮಾಡಿತ್ತು. ಕಂಪೆನಿ ಒಡೆತನ ಬದಲಾದರೂ ಡಗ್ಲಾಸ್‌ನ ಸಂಶೋಧನೆಯ ಹಸಿವು ನೀಗಿರಲಿಲ್ಲ. ಆದರೆ, ಹಣದ ಕೊರತೆ ಅವರ ಸಂಶೋಧನೆಗೆ ಭಾರಿ ಪೆಟ್ಟು ನೀಡಿತ್ತು. ಕೊನೆಗೆ 1988ರಲ್ಲಿ ಅವರು ನಿವೃತ್ತರಾದರು.1963ರಲ್ಲೇ ಮೌಸ್ ಕಂಡುಹಿಡಿದರೂ ಡಗ್ಲಾಸ್ ಅವರ ಪ್ರತಿಭೆಯನ್ನು ಗುರುತಿಸಿದ್ದು 1990ರ ದಶಕದ ನಂತರ. ಕಂಪ್ಯೂಟರ್ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ 1997ರಲ್ಲಿ ಅವರಿಗೆ ಪ್ರಪಂಚದ ಅತ್ಯುತ್ತಮ ಪುರಸ್ಕಾರವಾದ 5 ಲಕ್ಷ ಡಾಲರ್ ಬಹುಮಾನದ `ಲೆಮ್ಸನ್ ಎಂಐಟಿ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು.  ಮೂರು ವರ್ಷಗಳ ನಂತರ `ಪರ್ಸನಲ್ ಕಂಪ್ಯೂಟರ್ ಕ್ಷೇತ್ರದ ಆವಿಷ್ಕಾರಗಳಿಗಾಗಿ ಅಮೆರಿಕ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತ್ತು. 2001ರಲ್ಲಿ ಬ್ರಿಟಿಷ್ ಕಂಪ್ಯೂಟರ್ ಸೊಸೈಟಿ ಕೂಡ ಅವರನ್ನು ಗೌರವಿಸಿತ್ತು.ಒರೆಗಾನ್ ಸಮೀಪದ ಪೋರ್ಟ್‌ಲ್ಯಾಂಡ್‌ನಲ್ಲಿ 1925ರ ಜನವರಿ 30ರಂದು ಜನಿಸಿದ ಡಗ್ಲಾಸ್ 88 ವರ್ಷಗಳ ಕಾಲ ಬದುಕಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.