ಮಂಗಳವಾರ, ಜೂನ್ 15, 2021
21 °C

ಮ್ಯಾನ್‌ಹೋಲ್‌ಗೆ ಇಳಿದ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಖಾಸಗಿ ಲಾಡ್ಜ್‌ನ ಶೌಚಾಲಯವನ್ನು ಶುಚಿಗೊಳಿಸಲು ಮ್ಯಾನ್‌ಹೋಲ್‌ಗೆ ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.ನಗರದ ಡಿ. ದೇವರಾಜ ಕಾಲೊನಿಯ ನಿವಾಸಿ ಸುಬ್ರಹ್ಮಣ್ಯ ಎಂಬುವವರ ಪುತ್ರ ಕುಮಾರ (26) ಮೃತ ವ್ಯಕ್ತಿ.

ಭಾನುವಾರ ಲಾಡ್ಜ್‌್ ಶೌಚಾಲಯ ಕಟ್ಟಿಕೊಂಡಿದೆ. ಇದನ್ನು ಶುಚಿಗೊಳಿಸಲು ಲಾಡ್ಜ್‌ ಸಿಬ್ಬಂದಿ ಕುಮಾರ ಅವರನ್ನು ಕರೆತಂದಿದ್ದಾರೆ. ಶೌಚಾಲಯದ ಅನತಿ ದೂರದಲ್ಲಿದ್ದ ಎಂಟು ಅಡಿ ಆಳದ ಮ್ಯಾನ್‌ಹೋಲ್‌ಗೆ ಕುಮಾರ ಏಣಿ ಹಾಕಿಕೊಂಡು ಇಳಿದರು. ಕೋಲಿನ ಸಹಾಯದಿಂದ ಶೌಚಾಲಯದ ಕೊಳವೆಯನ್ನು ತಿವಿದರು. ಆಗ ಕಟ್ಟಿಕೊಂಡದ್ದ ಕೊಳವೆಯಿಂದ ಏಕಾಏಕಿ ನೀರು ನುಗ್ಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‘ಮ್ಯಾನ್‌ಹೋಲ್‌ನಲ್ಲಿ ಮನುಷ್ಯರನ್ನು ಇಳಿಸುವಂತಿಲ್ಲ ಎಂಬ ಕಾನೂನು ಇದೆ. ಆದರೆ, ಕಲ್ಪನಾ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಲಾಡ್ಜ್‌ನ ಮ್ಯಾನೇಜರ್‌ ವಿರುದ್ಧ ದೇವರಾಜ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದು ದೇವರಾಜ ಉಪ ವಿಭಾಗದ ಎಸಿಪಿ ಜೈಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಕೌಟುಂಬಿಕ ಕಲಹ: ಗೃಹಿಣಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.ತೊಣಚಿಕೊಪ್ಪಲಿನ ಸೋಮಶೇಖರ್‌ ಎಂಬುವವರ ಪತ್ನಿ ಇಂದಿರಾ (25) ಮೃತ ಮಹಿಳೆ.

ನಿವೇಶನದ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗಿತ್ತು. ಈ ಸಂಬಂಧ ಫೆ. 23ರಂದು ಗಲಾಟೆ ಕೂಡ ನಡೆದಿತ್ತು. ಇದರಿಂದ ಮನನೊಂದ ಇಂದಿರಾ ಫೆ. 24ರಂದು ಮನೆಯಲ್ಲಿ ನೇಣಿ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.ಇದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಬೆಳಿಗ್ಗೆ ಇಂದಿರಾ ಮೃತಪಟ್ಟಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು: ಏಳು ಮಂದಿ ಬಂಧನ

ನಗರದ ಹೊರವಲಯದ ಬನ್ನೂರು ರಸ್ತೆಯ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ದಕ್ಷಿಣ ಠಾಣೆಯ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ರೂ 2,900 ವಶಪಡಿಸಿಕೊಂಡಿದ್ದಾರೆ.ಮಹೇಶ್‌, ಕಾರ್ತೀಕ್‌, ರಾಮು, ರಾಜೇಂದ್ರ, ಪ್ರವೀಣ್‌, ಶೇಖರ್‌ ಮತ್ತು ನಾರಾಯಣರಾವ್‌ ಬಂಧಿತರು. ರಾತ್ರಿ 2 ಗಂಟೆಯ ಸಮಯದಲ್ಲಿ ಪಿಎಸ್‌ಐ ಮಂಜುನಾಥ್‌ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.