ಭಾನುವಾರ, ಮೇ 22, 2022
21 °C

ಯಾವುದೇ ಕ್ಷಣ ವಿಮಾನ ಹಾರಾಟ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್/ಟ್ರಿಪೊಲಿ (ಪಿಟಿಐ): ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಪದಚ್ಯುತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳು ನಾಗರಿಕ ಸಮರವಾಗಿ ಬದಲಾಗುವ ಲಕ್ಷಣ ಕಾಣಿಸುತ್ತಿದ್ದು, ದೇಶದ ಮೇಲೆ ಯಾವುದೇ ವಿಮಾನ ಹಾರಾಟಕ್ಕೆ ನಿಷೇಧ ಹೇರುವ ಮೂಲಕ ಸೇನಾ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಬ್ರಿಟನ್ ಒಡ್ಡಿದೆ. ಪ್ರತಿಭಟನೆ  ತೀವ್ರಗೊಂಡಂತೆ ತನ್ನ ಜನರ ವಿರುದ್ಧವೇ ವಾಯುದಾಳಿ ನಡೆಸಲು ಗಡಾಫಿ ಅವರು ಆದೇಶ ನೀಡುವ ಸಾಧ್ಯತೆ ಇದೆ.ಇದು ನಡೆಯದಂತೆ ನೋಡಿಕೊಳ್ಳಲು ಲಿಬಿಯಾ ಆಗಸದಲ್ಲಿ ವಿಮಾನ ಹಾರಾಟ ನಿಷೇಧ ವಿಧಿಸಿ ಬ್ರಿಟನ್ ಮತ್ತು ಮಿತ್ರ ರಾಷ್ಟ್ರಗಳ ಯುದ್ಧ ವಿಮಾನಗಳು ಇಲ್ಲಿ ಕಣ್ಗಾವಲು ಇರಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಸಂಸತ್ ಸದಸ್ಯರಿಗೆ ತಿಳಿಸಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ಗಡಾಫಿ ಅವರು ತಮ್ಮ ಜನರ ಮೇಲೆಯೇ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲಿಕ್ಕಾಗಿ ಲಿಬಿಯಾದ ಯಾವುದೇ ವಿಮಾನವೂ ಆಗಸಕ್ಕೆ ನೆಗೆದರೆ ಅದನ್ನು ಹೊಡೆದು ಉರುಳಿಸಲು ಈ ನಿಷೇಧ ಹೇರುವ ಚಿಂತನೆ ನಡೆಸಲಾಗಿದೆ. ಬ್ರಿಟನ್ ಈಗಾಗಲೇ ತನ್ನ ಮಿತ್ರ ರಾಷ್ಟ್ರಗಳ ಜತೆಗೆ ಈ ಬಗ್ಗೆ ಸಮಾಲೋಚನೆ ನಡೆಸಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಲಿಬಿಯಾದಲ್ಲಿ ಹೋರಾಟದಲ್ಲಿ ನಿರತರಾಗಿರುವ ಬಂಡುಕೋರರಿಗೂ ಶಸ್ತ್ರಾಸ್ತ್ರ ನೀಡಲು ಬ್ರಿಟನ್ ಮತ್ತು ಅಮೆರಿಕಗಳು ಚಿಂತನೆ ನಡೆಸಿವೆ. ಅದರ ಸುತ್ತಮುತ್ತ ಅಮೆರಿಕ ಮತ್ತು ನ್ಯಾಟೊ ಪಡೆಗಳು ಜಮಾಯಿಸುತ್ತಿವೆ ಎಂದು  ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.ಇಷ್ಟೆಲ್ಲ ಅಂತರರಾಷ್ಟ್ರೀಯ ಒತ್ತಡ ಇದ್ದರೂ ಗಡಾಫಿ ಅವರು ತಮ್ಮ ಕುರ್ಚಿಗೆ ಗಟ್ಟಿಯಾಗಿಯೇ ಅಂಟಿಕೊಂಡಿದ್ದು, ‘ಜನರು ನನ್ನನ್ನು ಪ್ರೀತಿಸುತ್ತಾರೆ, ಅವರು ನನಗಾಗಿ ಸಾಯಲೂ ಸಿದ್ಧರಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ಭಾರತೀಯರು ಸೇರಿದಂತೆ ಹಲವು ದೇಶಗಳ ನಾಗರಿಕರು ದೇಶದಿಂದ ನಿರ್ಗಮಿಸಿದ ನಂತರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಂತರರಾಷ್ಟ್ರೀಯ ಸಮುದಾಯ ನಿರ್ಧರಿಸಿದೆ ಎಂದು ಹೇಳಲಾಗಿದೆ.ವಿದೇಶಿ ನಾಗರಿಕರು ದೇಶದಿಂದ ನಿರ್ಗಮಿಸುವ ಕಾರ್ಯ ಮಂಗಳವಾರ ಕೊನೆಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ವಿಮಾನ ಹಾರಾಟ ನಿಷೇಧ ಯಾವುದೇ ಕ್ಷಣ ಜಾರಿಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ಇರಾಕ್ ಮತ್ತು ಬೋಸ್ನಿಯಾಗಳಲ್ಲಿ ವಿಮಾನ ಹಾರಾಟ ನಿಷೇಧ ವಿಧಿಸಲಾಗಿತ್ತು. ಬ್ರಿಟನ್ ಮಾತ್ರವಲ್ಲ ಯುರೋಪ್‌ನ ಹಲವು ರಾಷ್ಟ್ರಗಳು ಗಡಾಫಿ ಆಡಳಿತದ ಮೇಲೆ ವ್ಯಾಪಕ ರೀತಿಯ ದಿಗ್ಬಂಧನ ಹೇರಿವೆ.ಅಮೆರಿಕ ಸಹ ಲಿಬಿಯಾ ಮೇಲಿನ ತನ್ನ ಒತ್ತಡ ತೀವ್ರಗೊಳಿಸಿದ್ದು, ಗಡಾಫಿ ಆಡಳಿತದ 1,38,000ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ದಿಗ್ಬಂಧನ ಹಾಕಿದ ಸಂದರ್ಭದಲ್ಲಿ ಒಂದು ದೇಶದ ಆಸ್ತಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಮುಟ್ಟುಗೋಲು ಹಾಕಿಕೊಂಡದ್ದು ಇದೇ ಮೊದಲು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜತೆಗೆ ಲಿಬಿಯಾ ಸಮೀಪಕ್ಕೆ ಅಮೆರಿಕದ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳು ತೆರಳಿವೆ ಎಂದೂ ಅವರು ತಿಳಿಸಿದ್ದಾರೆ.ಯಾವುದೇ ವಿಳಂಬ ಮಾಡದೆ ತಕ್ಷಣ ಪದತ್ಯಾಗ ಮಾಡಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ತಾಕೀತು ಮಾಡಿದ್ದಾರೆ. ಪ್ರತಿರೋಧ: ಗಡಾಫಿ ವಿರೋಧಿಗಳು ದೇಶದ ಬಹುತೇಕ ಕಡೆಗಳಲ್ಲಿ ಮೇಲುಗೈ ಸಾಧಿಸಿರುವಂತೆಯೇ ಗಡಾಫಿ ನಿಷ್ಠರೂ ತೀವ್ರ ಪ್ರತಿರೋಧ ತೋರಿಸತೊಡಗಿದ್ದಾರೆ. ಟ್ರಿಪೊಲಿಯಿಂದ 25 ಕಿ.ಮೀ. ದೂರದಲ್ಲಿ ಟ್ಯಾಂಕ್‌ಗಳನ್ನು ಮತ್ತು ಯುದ್ಧವಿಮಾನ ನಿಗ್ರಹ ವ್ಯವಸ್ಥೆಗಳನ್ನು ಅಣಿಗೊಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ದೇಶದ ಪಶ್ಚಿಮ ಭಾಗದಲ್ಲಿ ಈಗಲೂ ಹೋರಾಟ ಮುಂದುವರಿದಿದೆ. ಅಲ್-ಜವಿಯಾ ನಗರವನ್ನು ಮತ್ತೆ ಕೈವಶ ಮಾಡಿಕೊಳ್ಳಲು ಸೇನೆ ಯತ್ನಿಸುತ್ತಿದೆ. ದೇಶದ ಮೂರನೇ ದೊಡ್ಡ ನಗರ ಮಿಸುರಟದಲ್ಲಿ ವಿಮಾನವೊಂದನ್ನು ಪ್ರತಿಭಟನಾಕಾರರು ಹೊಡೆದು ಉರುಳಿಸಿದ್ದಾರೆ. ದೇಶದ ಪೂರ್ವ ಭಾಗ ಈಗಾಗಲೇ ಪ್ರತಿಭಟನಾಕಾರರ ಕೈಗೆ ಬಂದಿದೆ. ಇದೀಗ ಟ್ರಿಪೊಲಿ ನಗರದಲ್ಲಿ  ಮಾತ್ರ ಗಡಾಫಿ ಅವರ ಅಧಿಕಾರ ಇದೆ.ಗಡಾಫಿ ಅವರು 1969ರಲ್ಲಿ ನಡೆದ ಕ್ಷಿಪ್ರಕ್ರಾಂತಿಯ ಬಳಿಕ ದೇಶದ ಸರ್ವಾಧಿಕಾರಿಯಾಗಿಯೇ ಉಳಿದಿದ್ದಾರೆ. ಟ್ಯುನೇಶಿಯಾ ಮತ್ತು ಈಜಿಪ್ಟ್‌ಗಳಲ್ಲಿ ಜನರ ಪ್ರತಿಭಟನೆಗೆ ಯಶಸ್ಸು ದೊರೆತ ಬಳಿಕ ಫೆ.15ರಂದು ಲಿಬಿಯಾದ ಪೂರ್ವ ಭಾಗದ ನಗರ ಬೆಂಘಾಜಿಯಲ್ಲಿ ಗಡಾಫಿ ಪದಚ್ಯುತಿಗೆ ಆಗ್ರಹಿಸಿ ಪ್ರತಿಭಟನೆ ಆರಂಭವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.