ಬುಧವಾರ, ಜೂನ್ 16, 2021
26 °C
ಐಪಿಎಲ್‌: ಮುಂಬೈ– ಕೋಲ್ಕತ್ತ ನಡುವೆ ಮೊದಲ ಹಣಾಹಣಿ

ಯುಎಇನಲ್ಲಿ ಮೊದಲ ಹಂತದ ಪಂದ್ಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ/ಐಎಎನ್‌ಎಸ್‌): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ 7ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳನ್ನು ಎಲ್ಲಿ ಆಯೋಜಿಸಬೇಕು ಎಂಬ  ಗೊಂದಲಕ್ಕೆ ತೆರೆಬಿದ್ದಿದೆ. ಈ ಹಂತದ 20 ಪಂದ್ಯಗಳ ಆತಿಥ್ಯ ಯುಎಇ ಪಾಲಾಗಿದ್ದು,  ಮಂಗಳವಾರ ಚೆನ್ನೈನಲ್ಲಿ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಏಪ್ರಿಲ್‌ 16ರಿಂದ ಜೂನ್‌ 1ರ ವರೆಗೆ ಒಟ್ಟು ಮೂರು ಹಂತಗಳಲ್ಲಿ ಐಪಿಎಲ್‌ ಟೂರ್ನಿ ನಡೆಯಲಿದೆ.  ಭಾರತದಲ್ಲಿ ಏಪ್ರಿಲ್‌ 7 ರಿಂದ ಮೇ 12ರವರೆಗೆ ಲೋಕಸಭಾ ಚುನಾವಣೆ ನಡೆಯಲಿದೆ. ಈ ಅವಧಿಯಲ್ಲಿ ಟೂರ್ನಿಗೆ ಭದ್ರತೆ ಒದಗಿಸಲು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ  ಮೊದಲ ಹಂತದ ಪಂದ್ಯಗಳನ್ನು ಯುಎಇನಲ್ಲಿ ಏ.16 ರಿಂದ 30ರವರೆಗೆ ನಡೆಸಲು ಐಪಿಎಲ್‌ ಆಡಳಿತ ಮಂಡಳಿ ನಿರ್ಧರಿಸಿದೆ.ಟೂರ್ನಿಯ  20 ಪಂದ್ಯಗಳು ಶೇಖ್‌ ಜಾಯೇದ್‌ ಕ್ರೀಡಾಂಗಣ (ಅಬುಧಾಬಿ), ಶಾರ್ಜಾ ಕ್ರೀಡಾಂಗಣ ಮತ್ತು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗಲಿದೆ. ಏ.16 ರಂದು ನಡೆಯುವ ಟೂರ್ನಿಯ ಮೊದಲ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.ಭಾರತದಲ್ಲಿ 2 ಮತ್ತು 3ನೇ ಹಂತದ ಪಂದ್ಯಗಳು: ಟೂರ್ನಿಯ ಎರಡು ಮತ್ತು ಮೂರನೇ ಹಂತದ ಪಂದ್ಯಗಳನ್ನು ಭಾರತದಲ್ಲೇ ಆಯೋಜಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೇ.1 ರಿಂದ 12ರವರೆಗೆ ಎರಡನೇ ಹಂತದ ಪಂದ್ಯಗಳು ನಡೆಯಲಿದ್ದು, ಈ ಅವಧಿಯಲ್ಲಿ ಕೆಲ ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಂಡಿರುತ್ತದೆ. ಈ ರಾಜ್ಯಗಳಿಂದ ಪಂದ್ಯಗಳಿಗೆ ಭದ್ರತೆ ಒದಗಿಸುವ ಭರವಸೆ ದೊರೆತರೆ ಪಂದ್ಯಗಳನ್ನು ಭಾರತದಲ್ಲೇ ನಡೆಸಲು ತೀರ್ಮಾನಿಸಲಾಗಿದೆ  . ಒಂದು ವೇಳೆ ರಾಜ್ಯ ಸರ್ಕಾರಗಳಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಈ ಹಿಂದೆ ನಿರ್ಧರಿಸಿರುವಂತೆ ಬಾಂಗ್ಲಾದೇಶದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.‘ ಎರಡನೇ ಹಂತದ ಪಂದ್ಯಗಳ ಆತಿಥ್ಯ ವಹಿಸಲು ಕೆಲ ರಾಜ್ಯಗಳು ಆಸಕ್ತಿ ತೋರಿವೆ. ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಯನ್ನು ಆಧರಿಸಿ ಮೇ ಮೊದಲ ವಾರದಿಂದಲೇ ಪಂದ್ಯಗಳನ್ನು ಭಾರತದಲ್ಲಿ ನಡೆಸಲಾಗುತ್ತದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ತಿಳಿಸಿದ್ದಾರೆ.ಮೂರು ಹಾಗೂ ಅಂತಿಮ ಹಂತದ ಪಂದ್ಯಗಳು ಮೇ.13 ರಿಂದ ಜೂನ್ 1ರವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ಚುನಾವಣೆ ಮುಕ್ತಾಯಗೊಂಡಿರುತ್ತದೆ. ಹೀಗಾಗಿ ಈ ಹಂತದಲ್ಲಿ ನಡೆಯುವ ಪ್ಲೇ ಆಫ್‌ , ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ಭಾರತದಲ್ಲೇ ನಡೆಯಲಿವೆ.ಈ ಬಾರಿ ತಂಡಗಳ ಸಂಖ್ಯೆ ಕಡಿಮೆಯಾ ಗಿರುವುದರಿಂದ ಟೂರ್ನಿಯ ಅವಧಿಯನ್ನು 47 ದಿನಕ್ಕೆ ಇಳಿಕೆ ಮಾಡಲಾಗಿದೆ. ಜೊತೆಗೆ ಪಂದ್ಯಗಳ ಸಂಖ್ಯೆಯೂ 60ಕ್ಕೆ ಇಳಿದಿದೆ. ಹೋದ ವರ್ಷ ನಡೆದ ಆರನೇ ಆವೃತ್ತಿಯ ಟೂರ್ನಿಯು ಒಟ್ಟು 54 ದಿನಗಳ ಕಾಲ ನಡೆದಿತ್ತು. ಈ ಅವಧಿಯಲ್ಲಿ 76 ಪಂದ್ಯಗಳು ಜರುಗಿದ್ದವು.

ಐದು ಪಂದ್ಯ ಆಡಲಿರುವ ಆರ್‌ಸಿಬಿ: ವಿಜಯ ಮಲ್ಯ ಒಡೆತನದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಯುಎಇನಲ್ಲಿ ನಡೆಯುವ ಮೊದಲ ಹಂತದ ಟೂರ್ನಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಿದೆ.ಏಪ್ರಿಲ್‌ 17ರಂದು ಶಾರ್ಜಾ ದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದ ಆರ್‌ಸಿಬಿ ಡೆಲ್ಲಿ ಡೇರ್‌ಡೆವಿಲ್ಸ್‌ ಸವಾಲನ್ನು ಎದುರಿಸಲಿದೆ.

ಆರ್‌ಸಿಬಿ ವೇಳಾಪಟ್ಟಿ

ಏಪ್ರಿಲ್‌ 17. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು–ಡೆಲ್ಲಿ ಡೇರ್‌ಡೆವಿಲ್ಸ್‌ (ಶಾರ್ಜಾ), ಏ.19, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು –ಮುಂಬೈ ಇಂಡಿಯನ್ಸ್‌ (ದುಬೈ), ಏ.24, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು–ಕೋಲ್ಕತ್ತ ನೈಟ್‌ರೈಡರ್ಸ್‌ (ಶಾರ್ಜಾ), ಏ.26.ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು–ರಾಜಸ್ತಾನ ರಾಯಲ್ಸ್‌ (ಅಬುಧಾಬಿ), ಏ.28. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು–ಕಿಂಗ್ಸ್‌ ಇಲೆವನ್‌ ಪಂಜಾಬ್‌ (ದುಬೈ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.