ಶನಿವಾರ, ಮೇ 28, 2022
28 °C

ಯೆಮನ್‌ಗೂ ಹರಡಿದ ಪ್ರತಿಭಟನೆ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾನಾ (ಐಎಎನ್‌ಎಸ್): ನಿರಂಕುಶ ಆಡಳಿತದ ವಿರುದ್ಧ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಮತ್ತೊಂದು ಅರಬ್ ದೇಶ ಯೆಮನ್‌ಗೂ ವ್ಯಾಪಿಸಿದೆ. ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲೆ ಅವರ ಪದಚ್ಯುತಿಗೆ ಆಗ್ರಹಿಸಿ 20 ಸಾವಿರಕ್ಕೂ ಅಧಿಕ ಉದ್ರಿಕ್ತ ನಾಗರಿಕರು ಬೀದಿಗಿಳಿದು ಗುರುವಾರ ಪ್ರತಿಭಟನೆ ನಡೆಸಿದರು.1978ರಿಂದ ದೇಶದ ಆಡಳಿತವನ್ನು ಕೈಯಲ್ಲಿರಿಸಿಕೊಂಡಿರುವ 64 ವರ್ಷದ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲೆ ಅಧಿಕಾರಾವಧಿ 2013ರಲ್ಲಿ ಮುಕ್ತಾಯಗೊಳ್ಳಲಿದೆ. ತಮ್ಮ ಅಧಿಕಾರಾವಧಿ ಮುಕ್ತಾಯದ ನಂತರ ಮತ್ತೊಂದು ಅವಧಿಗೆ ಸ್ಪರ್ಧಿಸುವುದಿಲ್ಲ ಎಂದು ಬುಧವಾರ ಹೇಳಿಕೆ ನೀಡಿರುವ ಸಾಲೆ, ಜೀವನಪರ್ಯಂತ ಅಧ್ಯಕ್ಷನಾಗಿ ಮುಂದುವರಿಯಲು ಸಾಧ್ಯವಾಗುವಂತೆ ಸಂವಿಧಾನದಲ್ಲಿ ತಿದ್ದುಪಡಿ ತರುವ ಯೋಜನೆ ಕೈಬಿಟ್ಟಿರುವುದಾಗಿ ಹೇಳಿದ್ದರು.ರಾಷ್ಟ್ರೀಯ ಐಕ್ಯ ಒಕ್ಕೂಟವನ್ನು ಸೇರುವಂತೆ ವಿರೋಧ ಪಕ್ಷಗಳಿಗೆ ಅವರು ಮನವಿ ಮಾಡಿದ್ದರು.ಸಾನಾ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ಬೃಹತ್ ಸಂಖ್ಯೆಯಲ್ಲಿ ಗುಂಪುಗೂಡಿದ್ದ ಪ್ರತಿಭಟನಾಕಾರರು ಈ ದಿನವನ್ನು ‘ಆಕ್ರೋಶದ ದಿನ’ವೆಂದು ಕರೆದು ಸಾಲೆ ಪದಚ್ಯುತಿಗೆ ಆಗ್ರಹಿಸಿ ಘೋಷಣೆ ಕೂಗಿದರು. ನಗರದ ಕೇಂದ್ರ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಗುಂಪು ಅಧ್ಯಕ್ಷರಿಗೆ ಬೆಂಬಲ ಸೂಚಿಸಿತು.ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಸಾಲೆ ಅವರ ಮೇಲೆ ಒತ್ತಡ ಹೇರಲು ಪ್ರತಿಭಟನಾಕಾರರನ್ನು ಸಂಘಟಿಸಿ ಬೀದಿಗಳಿಗೆ ಕರೆದೊಯ್ದ ವಿರೋಧ ಪಕ್ಷದ ಮುಖಂಡರು, ಈ ದಿನವನ್ನು ‘ಆಕ್ರೋಶದ ದಿನ’ ಎಂದು ಆಚರಿಸಲು ತೀರ್ಮಾನಿಸಲಾಗಿದೆ. ಆದರೆ ಅಧಿಕಾರದಲ್ಲಿ ಮುಂದುವರೆಯುವ ಕುರಿತು ಸಾಲೆ ಅವರ ಇತ್ತೀಚಿನ ಹೇಳಿಕೆಗಳನ್ನು ಸಹ ಅಧ್ಯಯನ ಮಾಡಲಾಗುತ್ತದೆ ಎಂದರು.ಪ್ರತಿಭಟನಾಕಾರರು ಸೇರಲು ಉದ್ದೇಶಿಸಿದ್ದ ಅಲ್ ತಹ್ರೀರ್ ಸ್ಕ್ವೇರ್ ಸ್ಥಳದಲ್ಲಿ ಬುಧವಾರ ರಾತ್ರಿಯೇ ಗುಡಾರಗಳನ್ನು ನಿರ್ಮಿಸಿದ್ದ ಸಾಲೆ ಪರ ‘ಜನರಲ್ ಪೀಪಲ್ಸ್ ಕಾಂಗ್ರೆಸ್’ನ ಸಶಸ್ತ್ರಧಾರಿ ಬೆಂಬಲಿಗರು ಅಧ್ಯಕ್ಷರ ಚಿತ್ರಗಳನ್ನು ಹಿಡಿದು ಅವರಿಗೆ ಬೆಂಬಲ ಸೂಚಿಸಿದರು. ಇದರಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವ ವಿರೋಧ ಪಕ್ಷಗಳ ಮುಖಂಡರ ಯೋಜನೆಗೆ ಹಿನ್ನಡೆಯಾಯಿತು.ಪ್ರತಿಭಟನಾ ಸ್ಥಳ ಉದ್ದೇಶಿತ ಸ್ಥಳದಿಂದ ಎರಡು ಕಿ.ಮೀ. ದೂರದಲ್ಲಿರುವ ಸಾನಾ ವಿಶ್ವವಿದ್ಯಾನಿಲಯಕ್ಕೆ ಸ್ಥಳಾಂತರವಾದ ವಿಷಯವನ್ನು ಬೆಳಿಗ್ಗೆ ಪ್ರತಿಭಟನಾಕಾರರು ಬೀದಿ ಬೀದಿಗಳಲ್ಲಿ ಸಾರಿದರು. ಆಡಳಿತ ಪಕ್ಷದ ಸಶಸ್ತ್ರಧಾರಿ ಬೆಂಬಲಿಗರು ಅಲ್ ತಹ್ರೀರ್ ಆಕ್ರಮಿಸಿಕೊಂಡಿರುವುದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.ಸಾಲೆ ವಿರುದ್ಧದ ಪ್ರತಿಭಟನೆಗೆ ಸಂಸತ್ತಿನ ಐದು ವಿರೋಧ ಪಕ್ಷಗಳ ಒಕ್ಕೂಟವಾದ ‘ಸಾಮಾನ್ಯ   ವೇದಿಕೆ’ ಮುಖಂಡರು ಬೆಂಬಲ ನೀಡಿದರು. ಪ್ರತಿಭಟನಾಕಾರರು ‘ಸರ್ಕಾರದ ಬದಲಾವಣೆಯನ್ನು ಜನರು ಬಯಸಿದ್ದಾರೆ, ಸರ್ಕಾರ ವಂಶಪಾರಂಪರ್ಯವಲ್ಲ’ ಎಂಬ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು.  ಈಜಿಪ್ಟ್‌ನಲ್ಲಿ ಅಧ್ಯಕ್ಷ ಹೋಸ್ನಿ ಮುಬಾರಕ್ ಪದತ್ಯಾಗಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪ್ರತಿಭಟನಾಕಾರರು ನಿರಂಕುಶಾಧಿಕಾರಿ ಮುಬಾರಕ್ ವಿರುದ್ಧದ ಜನರ ಹೋರಾಟಕ್ಕೆ ದೇವರು ಸಹಕರಿಸಲಿ ಎಂದು ಹಾರೈಸಿದರು.ಅಲ್ ತಹ್ರೀರ್ ಸ್ಕ್ವೇರ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ್ದ ಸಾಲೆ ಬೆಂಬಲಿಗರು ‘ನಾವು ಸಾಲೆ ಅವರೊಂದಿಗಿದ್ದೇವೆ. ನಾವು ಯೆಮನ್ ಜೊತೆಗಿದ್ದೇವೆ’ ಎಂಬ ಘೋಷಣೆ ಕೂಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.