ಸೋಮವಾರ, ಮೇ 17, 2021
30 °C

ರಂಗಕಲಾವಿದರಿಗೆ ನುಡಿ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಡಾ.ಎಸ್.ಸುಬ್ರಮಣ್ಯ, ಪೌರಾಣಿಕ ರಂಗ ಕಲಾವಿದ ಮಾ.ನರಸಿಂಹಮೂರ್ತಿ ಹಾಗೂ ನಟಿ ಶೋಭಾ ಮೈನಾ ಅವರ ನಿಧನಕ್ಕೆ ರಂಗಭೂಮಿಯ ಹಲವು ಗಣ್ಯರು ನಗರದಲ್ಲಿ ನುಡಿ ನಮನ ಸಲ್ಲಿಸಿದರು.ಪ್ರಯೋಗ ರಂಗ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಲಾವಿದರು ಮತ್ತು ಬರಹಗಾರರು, `ರಂಗ ತರಬೇತಿ ಶಾಲೆ, ರಂಗಪ್ರಪಂಚ ಪತ್ರಿಕೆ, ಮಕ್ಕಳ ರಂಗಭೂಮಿಗೆ ಸುಬ್ರಮಣ್ಯ ಅವರಿಗಿದ್ದ ಬದ್ಧತೆಯನ್ನು ಸ್ಮರಿಸಿದರು. ಲಂಕೇಶ್ ನಾಟಕಗಳ ಕುರಿತು ಸಂಶೋಧನೆ ನಡೆಸಿದ ಸುಬ್ರಮಣ್ಯ, ಲಂಕೇಶ್ ಅವರ ಬಹುತೇಕ ಎಲ್ಲ ನಾಟಕಗಳನ್ನು ಪ್ರಯೋಗ ಮಾಡಿಸಿದರು. ಕಿರುತೆರೆ ಕಲಾವಿದರೂ ಆಗಿದ್ದ ಸುಬ್ರಮಣ್ಯ ಹಲವು ಹೊಸಬರನ್ನು ಕಿರುತೆರೆಗೆ ಪರಿಚಯಿಸಿದ್ದರು' ಎಂದು ಸ್ಮರಿಸಿದರು.`ಪೌರಾಣಿಕ ನಾಟಕಗಳಲ್ಲಿ ದೊಡ್ಡ ಹೆಸರು ಮಾಡಿದ್ದ ಮಾರಪ್ಪ ಅವರ ಪುತ್ರ ಮಾ.ನರಸಿಂಹಮೂರ್ತಿ (ಮಾ.ನ.ಮೂರ್ತಿ) ಪೌರಾಣಿಕ ನಾಟಕಗಳ ಹೆಸರಾಂತ ಕಲಾವಿದರಾಗಿದ್ದರು. ಸೊಗಸಾಗಿ ರಂಗಗೀತೆ ಹಾಡುತ್ತಿದ್ದರು. ಪೌರಾಣಿಕ ನಾಟಕಗಳ ಅಬ್ಬರದ ಅಭಿನಯ ಕೈಬಿಟ್ಟು ಹಿತಮಿತವಾಗಿ ಅಭಿನಯಿಸುವ ಶ್ರೇಷ್ಠ ಕಲಾವಿದರಾಗಿದ್ದರು' ಎಂದು ಅವರು ಹೇಳಿದರು.`ಎರಡು ವರ್ಷಗಳ ಹಿಂದೆ ನಿಧನರಾದ ಮೈನಾ ಚಂದ್ರಶೇಖರ್ ಅವರ ಪತ್ನಿ ಶೋಭಾ ಅವರೂ ದೀರ್ಘ ಕಾಲದ ಕಾಯಿಲೆಯಿಂದ ನಿಧನರಾದರು. ಈ ಮೂವರನ್ನು ಕಳೆದುಕೊಂಡು ರಂಗಭೂಮಿ ಬಡವಾಗಿದೆ' ಎಂದು ಅವರು ಸ್ಮರಿಸಿಕೊಂಡರು.ಸಮಾರಂಭದಲ್ಲಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಪ್ರಯೋಗರಂಗದ ಸಂಚಾಲಕ ಕೆ.ವಿ.ನಾಗರಾಜ ಮೂರ್ತಿ, ಪತ್ರಕರ್ತ ಗುಡಿಹಳ್ಳಿ ನಾಗರಾಜ, ರಾಧಿಕಾ ರಂಜನಿ, ಪ್ರೊ.ಸರ್ವೋದಯ ಕಾಮತ್, ಸಂಸ ಸುರೇಶ್, ತಿಮ್ಮಯ್ಯ, ನಾಗೇಂದ್ರ ಶಾ, ಚಂದ್ರಕುಮಾರ ಸಿಂಗ್, ಕೆ.ಎಸ್.ಡಿ.ಎಲ್.ಚಂದ್ರು ಮುಂತಾದವರು ಮಾತನಾಡಿದರು. ಜಿತೂರಿ ರಂಗಗೀತೆ ಹಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.