ಗುರುವಾರ , ಮೇ 19, 2022
20 °C

ರಂಗೇರಿದ ಮೈಸೂರು ದಸರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಗರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸೋಮವಾರ ಬೆಳಿಗ್ಗೆಯಿಂದ ರಾತ್ರಿ ತನಕ ಹತ್ತು ಹಲವು  ವೈವಿಧ್ಯಮಯ ಕಾರ್ಯಕ್ರಮಗಳು, ಕ್ರೀಡೆಗಳು ನಡೆದವು.ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ದಸರಾ ಯುವ ಕವಿಗೋಷ್ಠಿ ನಡೆಯಿತು.ಇದರಲ್ಲಿ 30 ಕವಿಗಳು, ಕವಯತ್ರಿಯರು ಭಾಗವಹಿಸಿ ಕವಿತೆಗಳನ್ನು ವಾಚಿಸುವ ಮೂಲಕ ಭರವಸೆ ಮೂಡಿಸಿದರು. ಕವಿಗೋಷ್ಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದು ಕವಿತೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು.ಸಂಜೆ ಹೊತ್ತಿಗೆ ಅರಮನೆ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ತಂಡ ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಾರಾಜ ಕಾಲೇಜು ಮೈದಾನದಲ್ಲಿ ಬಾಲಿವುಡ್‌ನ ಖ್ಯಾತ ಗಾಯಕ ಉದಿತ್‌ನಾರಾಯಣ್ ಮಧುರ ಕಂಠಕ್ಕೆ ಸಾವಿರಾರು ಸಂಗೀತ ಪ್ರೇಮಿಗಳು ಮನಸೋತರು. ಕೆಲವು ಹಾಡುಗಳಿಗೆ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.ಕಾಡಾ ಕಚೇರಿ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳವು ಸೆ.28 ರಿಂದಲೂ ತುಂಬಿತುಳುಕಾಡುತ್ತಿದೆ. ಸಾಯಂಕಾಲ 4 ಗಂಟೆಯಿಂದಲೇ ಆಹಾರ ಮೇಳ ಭರ್ತಿಯಾಗಿರುತ್ತದೆ. ಇಲ್ಲಿ ಬಗೆ ಬಗೆಯ ಸಸ್ಯಾಹಾರ ಮತ್ತು ಮಾಂಸಹಾರದ ತಿಂಡಿ ತಿನಿಸುಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. 

ಕರ್ಜನ್ ಪಾರ್ಕ್‌ನಲ್ಲಿ ನೂರಾರು ಜಾತಿಯ ಹೂವುಗಳು, ಹಣ್ಣು ತರಕಾರಿಗಳು ಮನಸೂರೆಗೊಳ್ಳುತ್ತಿವೆ. 25 ಸಾವಿರ ಗುಲಾಬಿ ಹೂವುಗಳನ್ನು ಬಳಸಿ ಚಾಮರಾಜ ವೃತ್ತದ ಪ್ರತಿಕೃತಿಯನ್ನು ನಿರ್ಮಿಸಲಾಗಿದ್ದು ಈ ಬಾರಿಯ ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಕಲಾವಿದೆ ಗೌರಿ ಮರಳಿನಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ರೂಪಿಸಿದ್ದಾರೆ.ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ, ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಮುಕ್ತಾಯಗೊಂಡಿತು. ಇಷ್ಟೇ ಅಲ್ಲದೆ ಜಗನ್ಮೋಹನ ಅರಮನೆ, ಗಾನ ಭಾರತೀ, ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.