ಸೋಮವಾರ, ಮೇ 23, 2022
22 °C

ರಕ್ತ ದಾನದ ಸಂಕಲ್ಪ

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

ಗರ್ಭಕೋಶದ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿದ್ದ ಅನಸೂಯಳ ರಕ್ತದ ಹೀಮೋಗ್ಲೋಬಿನ್ ಅಂಶ ಕೇವಲ 6 ಗ್ರಾಂ ಇತ್ತು. ನಾನು ಆಕೆಯ ಪತಿಯನ್ನು ಕರೆದು  `ನಿಮ್ಮ ಪತ್ನಿಗೆ ರಕ್ತ ಕೊಡಬೇಕಾಗಿದೆ, ರಕ್ತನಿಧಿಯ ನಿಯಮದ ಪ್ರಕಾರ, ಬದಲಿಗಾಗಿ ನೀವು ರಕ್ತದಾನ ಮಾಡಬೇಕಾಗುತ್ತದೆ~  ಎಂದು ವಿವರಿಸಿದ್ದೆ.ನನ್ನ ಮಾತು ಮುಗಿಯುವ ಮುನ್ನವೇ ಆತ ತನ್ನ ಅಂಗಿಯ ಗುಂಡಿಗಳನ್ನು ಬಿಚ್ಚಿ, ತನ್ನ ಹೊಟ್ಟೆಯ ಮೇಲಿದ್ದ (ಸುಮಾರು ಹತ್ತು ವರ್ಷಗಳ ಹಿಂದೆ ನಡೆದಿದ್ದ) ಶಸ್ರ್ತಚಿಕಿತ್ಸೆಯ ಗುರುತನ್ನು ನನಗೆ ತೋರಿಸುತ್ತಾ `ನನಗೇ ಆಪರೇಷನ್ ಆಗಿದೆ, ನಾನು ರಕ್ತ ಹೇಗೆ ಕೊಡುವುದು ಮೇಡಂ~  ಎಂದಿದ್ದ.  ಆತನಿಗೆ ಅರ್ಥೈಸಿ ಹೇಳುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಅದನ್ನು ಅರಿತಿದ್ದ ನಾನು ಮೌನಕ್ಕೆ ಶರಣಾಗಿದ್ದೆ.  ಇದು ಒಂದು ಉದಾಹರಣೆಯಷ್ಟೆ. ಇಂತಹ ಪ್ರಸಂಗಗಳು ದಿನನಿತ್ಯವೂ ಆಸ್ಪತ್ರೆಗಳಲ್ಲಿ ಹಾಗೂ ರಕ್ತಭಂಡಾರಗಳಲ್ಲಿ ಸರ್ವೇ ಸಾಮಾನ್ಯ.ಪ್ರತಿ ವರ್ಷವೂ ಜೂನ್ 14 ರಂದು `ವಿಶ್ವ ರಕ್ತದಾನಿಗಳ ದಿನ~ವನ್ನು ಆಚರಿಸುತ್ತೇವೆ. ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ರಕ್ತದಾನಿಗಳನ್ನು ಗುರುತಿಸಿ, ಗೌರವಿಸುವುದು ಈ ದಿನದ ಮುಖ್ಯ ಧ್ಯೆಯಗಳಾಗಿವೆ.

 

ಆದರೆ, ಈ ಆಚರಣೆ ನಿಜಕ್ಕೂ ಅರ್ಥಪೂರ್ಣವಾಗಿದೆಯೇ ಎಂಬುದರ ಕುರಿತು ಚಿಂತನೆ ನಡೆಸಿದರೆ ಅಲ್ಲೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡುತ್ತದೆ. ಹೌದು, ನಮ್ಮ ಸುತ್ತಮುತ್ತಲಿನ ಶೇಕಡಾ 50ಕ್ಕಿಂತಲೂ ಹೆಚ್ಚು ಜನರಿಗೆ ರಕ್ತದಾನದ ಮಹತ್ವವೇ ತಿಳಿದಿಲ್ಲ.ತಪ್ಪು ಕಲ್ಪನೆಗಳೇನು?

ರಕ್ತದಾನದ ಬಗೆಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಸತ್ಯಾಂಶಗಳು ಈ ಕೆಳಗಿನಂತಿವೆ :  -ರಕ್ತದಾನವೆಂದರೆ ಅಪಾಯ, ಅದು ದಾನಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಸತ್ಯಾಂಶ: ರಕ್ತದಾನವು  ಸಂಪೂರ್ಣ ಸುರಕ್ಷಿತವಾಗಿದ್ದು, ವ್ಯಕ್ತಿಯ ಆರೋಗ್ಯದ ಮೇಲೆ ಯಾವುದೇ ಹಾನಿಯಾಗುವುದಿಲ್ಲ.-ರಕ್ತದಾನ ಮಾಡುವುದರಿಂದ ದಾನಿಯ ರಕ್ತದ ಹೀಮೋಗ್ಲೋಬಿನ್ ಅಂಶವು ಕಡಿಮೆಯಾಗುತ್ತಾ ಹೋಗುತ್ತದೆ.ಸತ್ಯಾಂಶ: ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿಲಿ ರಕ್ತ ತೆಗೆಯುವುದರಿಂದ, ದಾನಿಯ ಹೀಮೋಗ್ಲೋಬಿನ್ ಅಂಶದಲ್ಲಿ ಹೆಚ್ಚಿನ ಬದಲಾವಣೆಯೇನಾಗುವುದಿಲ್ಲ. ಅಲ್ಲದೆ ಮೂರು ತಿಂಗೊಳಳಗಾಗಿ ರಕ್ತವು ಮರು ತಯಾರಾಗುತ್ತದೆ.-ರಕ್ತದಾನ ಮಾಡುವುದರಿಂದ ದಾನಿಗೆ ಸೋಂಕು ತಗುಲಬಹುದು.ಸತ್ಯಾಂಶ: ರಕ್ತದಾನ ಪ್ರಕ್ರಿಯೆಯಲ್ಲಿ ಸಂಸ್ಕರಿಸಿದ ಸೂಜಿ, ರಕ್ತ ಸಂಗ್ರಹಣಾ ಚೀಲ, ಶುದ್ದವಾದ ಸಲಕರಣೆಗಳನ್ನು ಉಪಯೋಗಿಸುವುದರಿಂದ ದಾನಿಗೆ ಯಾವುದೇ ಸೋಂಕು ತಗಲುವ ಅಪಾಯವಿಲ್ಲ.-ರಕ್ತದಾನ ಪ್ರಕ್ರಿಯೆಯು ಬಹಳ ದೀರ್ಘಸಮಯದ್ದಾಗಿರುತ್ತದೆಸತ್ಯಾಂಶ: ದಾನಿಯನ್ನು ಪರೀಕ್ಷಿಸಿ, ರಕ್ತ ತೆಗೆಯುವ ಕ್ರಿಯೆಯು ಒಂದು ತಾಸಿಗಿಂತಲೂ ಕಡಿಮೆ ಅವಧಿಯಲ್ಲಿ ಮುಗಿಯುತ್ತದೆ.-ತುರ್ತು ಪರಿಸ್ಥಿತಿಗಳಲ್ಲಿ ರೋಗಿಗೆ ರಕ್ತದ ಬದಲಾಗಿ ಬೇರೆ ಔಷಧಗಳನ್ನು ಕೊಡಬಹುದು.ಸತ್ಯಾಂಶ: ತುರ್ತುಪರಿಸ್ಥಿತಿಗಳಲ್ಲಿ ರಕ್ತಕ್ಕೆ ಸರಿಸಮಾನವಾದ ವಸ್ತು ಮತ್ತೊಂದಿಲ್ಲ, ಅದು ಅಮೂಲ್ಯವಾದದ್ದು.-ಯುವಕರು ಮಾತ್ರ ರಕ್ತದಾನ ಮಾಡಬಹುದು.ಸತ್ಯಾಂಶ: 18 ರಿಂದ 50 ವರ್ಷ ಒಳಗಿನ ಪ್ರತಿಯೊಬ್ಬ ಆರೋಗ್ಯವಂತ ಪುರುಷ ಹಾಗೂ ಮಹಿಳೆ ರಕ್ತದಾನ ಮಾಡಲು ಅರ್ಹರು.-ರಕ್ತದಾನ ಮಾಡಿದ ನಂತರ ವ್ಯಕ್ತಿಗೆ ಕೆಲದಿನಗಳ ವಿಶ್ರಾಂತಿ ಹಾಗೂ ಸೂಕ್ತ ಔಷಧಗಳ ಅಗತ್ಯವಿದೆ.ಸತ್ಯಾಂಶ: ರಕ್ತದಾನ ಮಾಡಿ ಹೆಚ್ಚೆಂದರೆ 2 ಗಂಟೆಗಳ ಕಾಲ ವಿಶ್ರಾಂತಿ ಬೇಕಾಗಬಹುದು. ಯಾವುದೇ ವಿಶೇಷವಾದ ಔಷಧದ ಅಗತ್ಯವಿರುವುದಿಲ್ಲ. ಇಂದಿಗೂ ಬಹಳಷ್ಟು ಜನರು ರಕ್ತದಾನದ ಬಗೆಗೆ ತಪ್ಪು ವಿಚಾರಗಳನ್ನೇ ಗ್ರಹಿಸಿರುವುದು ದುರ್ದೈವವೇ ಸರಿ.  ಸಾರ್ವಜನಿಕರ ಮನದಲ್ಲಿ ಬೇರೂರಿರುವ, ಸತ್ಯಕ್ಕೆ ದೂರವಾಗಿರುವ ಈ ವಿಚಾರಗಳನ್ನು ಕಿತ್ತೊಗೆದು, ರಕ್ತದಾನದ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕು. ರಕ್ತದಾನಕ್ಕೆ ಜೀವದಾನದ ಶಕ್ತಿಯಿದೆ ಎಂಬ ಅಂಶ ನಮ್ಮ ಜನರಿಗೆ ಮನವರಿಕೆಯಾಗಬೇಕು. ಈ ನಿಟ್ಟಿನಲ್ಲಿ, ಆರೋಗ್ಯ ಇಲಾಖೆ, ರಕ್ತನಿಧಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕೊಂಚ ಶ್ರಮ ವಹಿಸಬೇಕು. ಶಾಲಾ ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ರಕ್ತದಾನದ ಮಹತ್ವದ ಕುರಿತು ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸಬೇಕು.

 

ಆ ಮೂಲಕ  ರಕ್ತದಾನಕ್ಕೆ ಯಾರು ಅರ್ಹರು, ಯಾರು ಅನರ್ಹರು, ಅಲ್ಲದೆ ರಕ್ತದಾನವು ಸಂಪೂರ್ಣ ಸುರಕ್ಷಿತವಾದದ್ದು, ಅದರಿಂದ ಯಾವುದೇ ಅಪಾಯವಿಲ್ಲ  ಎಂಬ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿ ಹೇಳಬೇಕು. ಆಗ ಮಾತ್ರವೇ ಹೆಚ್ಚು ಹೆಚ್ಚು ಜನರು ರಕ್ತದಾನದ ಬಗ್ಗೆ ಆಸಕ್ತಿ ತೋರಬಹುದು ಮತ್ತು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರಹುದು. ಹೀಗಾದಾಗ ಮಾತ್ರವೇ  ವಿಶ್ವರಕ್ತದಾನಿಗಳ ದಿನದ ಆಚರಣೆಗೊಂದು ಅರ್ಥ ಬಂದು, ರಕ್ತ ನಿಧಿಗಳು ಸಾರ್ಥಕತೆ ಕಾಣಲು ಸಾಧ್ಯವಾದೀತೇನೋ.ರಕ್ತ ದಾನದಿಂದ ಯಾವುದೇ ಹಾನಿಯಿಲ್ಲ


ಆರೋಗ್ಯವಂತ ವ್ಯಕ್ತಿಯಿಂದ ರಕ್ತವನ್ನು ಪಡೆಯುವುದು ರಕ್ತದಾನವಾದರೆ, ಅದನ್ನು       ಅವಶ್ಯಕತೆ ಇರುವವರಿಗೆ ವರ್ಗಾಯಿಸುವುದೇ  ರಕ್ತ ವರ್ಗಾವಣೆ.  50 ಕೆ.ಜಿ ಗಿಂತಲೂ ಜಾಸ್ತಿ ತೂಕವಿರುವ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ಯಿಂದ 6 ಲೀಟರ್ ರಕ್ತವಿರುತ್ತದೆ. ರಕ್ತದಾನದಲ್ಲಿ ಸಾಮಾನ್ಯವಾಗಿ 350 ಮಿಲೀ ರಕ್ತವನ್ನು ಮಾತ್ರವೇ ತೆಗೆಯಲಾಗುತ್ತದೆ. ಆದ್ದರಿಂದ ಆತನ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಸಂಭವಿಸುವುದಿಲ್ಲ. ದಾನಿಯ ಶರೀರದಲ್ಲಿ ಪ್ರಚೋದಿಸಲ್ಪಟ್ಟ ಅಸ್ಥಿಮಜ್ಜೆಯು ಹೊಸ ರಕ್ತ ಕಣಗಳನ್ನು ತಯಾರಿಸಲು ಕೂಡಲೇ ಅಣಿಯಾಗುತ್ತದೆ. ದಿನಕ್ಕೆ 3 ಮಿಲಿ ಲೀಟರ್‌ನಂತೆ ಕೇವಲ 90 ದಿನಗೊಳಗಾಗಿ, ದಾನ ಮಾಡಿದ ರಕ್ತವು ದೇಹದಲ್ಲಿ ಮರು ತಯಾರಾಗುತ್ತದೆ.ರಕ್ತ ನಿಧಿಯಲ್ಲಿ


ರಕ್ತ ನಿಧಿಯಲ್ಲಿ, ದಾನಿಯನ್ನು ಪರೀಕ್ಷಿಸಿ ಆತನ ರಕ್ತದೊತ್ತಡ, ಹೀಮೋಗ್ಲೋಬಿನ್ ಅಂಶ, ತೂಕ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಮಾಡಿ, ನಂತರವೇ ನುರಿತ, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ, ಸಂಸ್ಕರಿಸಿದ ಉಪಕರಣಗಳ ನೆರವಿನಿಂದ ರಕ್ತವನ್ನು ತೆಗೆಯಲಾಗುತ್ತದೆ.ಸಾಮಾನ್ಯವಾಗಿ ಒಬ್ಬ ದಾನಿಯಿಂದ 300 ಅಥವಾ 450 ಮಿಲೀ ರಕ್ತವನ್ನು ಪಡೆದು, ಹೆಪ್ಪುರೋಧಕ ದ್ರವಗಳಿರುವ ಚೀಲಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಈ ರಕ್ತವನ್ನು, ರಕ್ತದ ಮೂಲಕ ಹರಡಬಹುದಾದ ಸೋಂಕುಗಳಾದ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ,  ಎಚ್.ಐ. ವಿ,  ಮಲೇರಿಯಾ, ಮತ್ತು ಸಿಫಿಲಿಸ್ ರೋಗಾಣುಗಳಿಗಾಗಿ ಪರೀಕ್ಷಿಸಿ,  ರೋಗಾಣುಗಳಿಂದ  ಮುಕ್ತವಾದ  ರಕ್ತವನ್ನು ಮಾತ್ರವೇ  ವಿಶೇಷವಾದ ರೆಫ್ರಿಜರೇಟರ್‌ಗಳಲ್ಲಿ ಸೂಕ್ತ ಉಷ್ಣತೆಯಲ್ಲಿ ಶೇಖರಿಸಿಡಲಾಗುತ್ತದೆ. ಈ ರೀತಿಯಾಗಿ ಪರೀಕ್ಷಿಸಿ, ಸಂಗ್ರಹಿಸಿದ ರಕ್ತವನ್ನು  21 ರಿಂದ 35 ದಿನಗಳವರೆಗೆ ಉಪಯೋಗಿಸಲಾಗುತ್ತದೆ.ಯಾರು ಅನರ್ಹರು?

-ಯಕೃತ್ತು, ಮೂತ್ರಪಿಂಡ, ಹೃದಯ ಸಂಬಂಧೀ ಕಾಯಿಲೆಗಳಿಂದ  ಬಳಲುತ್ತಿರುವವರು

-ಅಧಿಕ ರಕ್ತದೊತ್ತಡ,  ನಿಯಂತ್ರಣವಿಲ್ಲದ ಮಧುಮೇಹದಿಂದ ಬಳಲುವವರು

-ಮೂರ್ಛೆ ರೋಗ, ಕ್ಷಯರೋಗದಿಂದ ಬಳಲುತ್ತಿರುವವರು

-ಕ್ಯಾನ್ಸರ್ ಕಾಯಿಲೆ ಇರುವವರು

-ಋತು ಸ್ರಾವವಾದಲ್ಲಿರುವ ಮಹಿಳೆಯರು

-ಗರ್ಭಿಣಿ ಸ್ತ್ರೀಯರು

-ಮಗುವಿಗೆ ಹಾಲುಣಿಸುವ ತಾಯಂದಿರು

-ರಕ್ತ ಹೀನತೆಯಿರುವವರು.

-ಅಸಾಮಾನ್ಯ  ರಕ್ತಸ್ರಾವದಿಂದ ಬಳಲುವವರು.

-ರಕ್ತದಾನ ಮಾಡಿದ ವ್ಯಕ್ತಿಯು ಮೂರು ತಿಂಗಳವರೆಗೂ

-ರಕ್ತವರ್ಗಾವಣೆ ಮಾಡಿಸಿಕೊಂಡವರು ಆರು ತಿಂಗಳವರೆಗೂ

-ಶಸ್ತ್ರಚಿಕಿತ್ಸೆಗೊಳಗಾದವರು  ಒಂದು ವರ್ಷದವರೆಗೂ

-ಮಲೇರಿಯಾ, ಟೈಫಾಯ್ಡ ಹಾಗೂ ಜಾಂಡೀಸ್‌ನಿಂದ ಬಳಲಿದವರು  ಆರು ತಿಂಗಳವರೆಗೂ ರಕ್ತದಾನ ಮಾಡಲು ಅನರ್ಹರಾಗಿರುತ್ತಾರೆ. -ಅಲ್ಲದೆ, ಯಾವುದೇ ಸೋಂಕಿನ ಕಾಯಿಲೆಯ ವಿರುದ್ಧ ಲಸಿಕೆಗಳನ್ನು ಹಾಕಿಸಿಕೊಂಡವರು ವೈದ್ಯರ ಮಾರ್ಗದರ್ಶನದಂತೆ ಕೆಲ ಕಾಲ ರಕ್ತದಾನ ಮಾಡುವಂತಿರುವುದಿಲ್ಲ.ದಾನಿಗೆ ಸೂಚನೆಗಳೇನು?

ವ್ಯಕ್ತಿಯು ಉಪವಾಸ, ನಿದ್ರಾಹೀನತೆ ಅಥವಾ ಆಯಾಸದಿಂದ ಬಳಲುತ್ತಿದ್ದರೆ ರಕ್ತದಾನವನ್ನು ಮುಂದಿನ ದಿನಕ್ಕೆ ಮುಂದೂಡಿದರೆ ಉತ್ತಮ. ರಕ್ತದಾನದ ದಿನದಂದು ವ್ಯಕ್ತಿಯು ಸಮರ್ಪಕವಾದ ಆಹಾರ ಸೇವಿಸಿರಬೇಕು ಹಾಗೂ ಸಾಕಷ್ಟು ನಿದ್ದೆ ಮಾಡಿರಬೇಕು. ರಕ್ತದಾನ ಮಾಡಿ ಕೇವಲ 2 ಗಂಟೆಗಳ ನಂತರ ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸಬಹುದು.  ಆ ದಿನ ಮಾತ್ರ ಆತ ಹೆಚ್ಚು ನೀರನ್ನು  ಕುಡಿಯಬೇಕಾಗಬಹುದು. ತದನಂತರದ ದಿನಗಳಲ್ಲಿ ಆತನಿಗೆ ಯಾವುದೇ ಬಗೆಯ ಔಷಧವಾಗಲೀ, ವಿಶ್ರಾಂತಿಯಾಗಲೀ ಅನಗತ್ಯ. ರಕ್ತದಾನದ ಸಂಕಲ್ಪ ಮಾಡೋಣ


 ‘Every blood donor is a hero’ ಎಂಬುದು  ಈ ಬಾರಿಯ ವಿಶ್ವ ರಕ್ತದಾನಿಗಳ ದಿನದ ಧ್ಯೇಯವಾಕ್ಯ. ವಿಶ್ವ ರಕ್ತದಾನಿಗಳ ದಿನದ ಆಚರಣೆಯು ಅರ್ಥಪೂರ್ಣವಾಗಲು ಹೆಚ್ಚು ಹೆಚ್ಚು ಜನರು ರಕ್ತದಾನದ ಸಂಕಲ್ಪ ಮಾಡಬೇಕು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡುವ ಮೂಲಕ ಜನ್ಮದಿನವನ್ನು ಅಥವಾ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುವುದರ ಬಗ್ಗೆ ಚಿಂತಿಸಬೇಕು.ಬನ್ನಿ, ಇಂದೇ ರಕ್ತದಾನದ ಸಂಕಲ್ಪ  ಮಾಡೋಣ.  ನಿರಾತಂಕವಾಗಿ ರಕ್ತದಾನ ಮಾಡೋಣ, ಆ ಮೂಲಕ ಮತ್ತೊಬ್ಬ ವ್ಯಕ್ತಿಗೆ ಬದುಕುವ ಅವಕಾಶ ಮಾಡಿಕೊಡೋಣ ಹಾಗೂ ಮತ್ತೊಂದು ಕುಟುಂಬದ ಸಂತಸ - ನೆಮ್ಮದಿಗೆ ಕಾರಣರಾಗೋಣ. 

 (ಲೇಖಕರ ಮೊಬೈಲ್ : 9844083284)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.