ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ಕೇದಾರನಾಥ ಪ್ರದೇಶದ ಯಾತ್ರಾ ಸ್ಥಳಗಳಲ್ಲಿ ಪ್ರಳಯರೂಪಿ ಮಳೆಯ ಪ್ರವಾಹಕ್ಕೆ ಸಿಲುಕಿ ಅತಂತ್ರರಾಗಿದ್ದ 12,000 ಜನರನ್ನು ಭಾನುವಾರ ರಕ್ಷಿಸಲಾಗಿದೆ. ಇನ್ನೂ ಏನಿಲ್ಲವೆಂದರೂ 10,000 ಜನರು ಅತಂತ್ರರಾಗಿದ್ದು ಪ್ರತಿಕೂಲ ಹವಾಮಾನದ ಭೀತಿ ಅವರ ರಕ್ಷಣೆಯ ಬಗ್ಗೆ ಕಳವಳ ಮೂಡಿಸಿದೆ.

`ಸಂತ್ರಸ್ತರನ್ನೆಲ್ಲಾ ರಕ್ಷಿಸಲು ಇನ್ನೂ ಕನಿಷ್ಠ 15 ದಿನಗಳು ಬೇಕಾಗಬಹುದು' ಎಂದು ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಹೇಳಿದ್ದಾರೆ.

`ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದವರ ಸಂಖ್ಯೆ 5,000 ಮೀರಬಹುದು. ಕೇದಾರನಾಥ ಕಣಿವೆಯಲ್ಲೇ ಅತಿ ಹೆಚ್ಚು ಜೀವಹಾನಿ ಆಗಿದೆ' ಎಂದು ರಾಜ್ಯದ ವಿಪತ್ತು ನಿರ್ವಹಣಾ ಸಚಿವ ಯಶಪಾಲ್ ಆರ್ಯ ಹೇಳಿದ್ದಾರೆ. ಸಂತ್ರಸ್ತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ವಾಪಸಾದ ನಂತರ ಸುದ್ದಿಗಾರರ ಬಳಿ ಹೀಗೆ ಹೇಳಿದರು. ಇದಕ್ಕೆ ಮುನ್ನ ಶನಿವಾರ ಅಧಿಕೃತ ಅಂಕಿ-ಅಂಶಗಳ ಪ್ರಕಾರ 668 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು.

ಮಳೆ ಅಡ್ಡಿ: ಈ ಮಧ್ಯೆ ಉತ್ತರಾಖಂಡದಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಒಂದು ಗಂಟೆ ಕಾಲ ಸ್ಥಗಿತಗೊಂಡಿತ್ತು. ಉತ್ತರಾಖಂಡದಲ್ಲಿ ಮೋಡಗಳು ದಟ್ಟೈಸಿದ್ದು, ಜೂನ್ 25ರಿಂದ ಮೂರು ದಿನಗಳ ಕಾಲ ಪುನಃ ಭಾರಿ ಮಳೆ ಸುರಿಯುವ ಹಾಗೂ ಜೂನ್ 24ರಿಂದಲೇ ಪ್ರತಿಕೂಲ ಹವಾಮಾನ ಉಂಟಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈವರೆಗೆ ಒಟ್ಟು 80,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ 10,000 ಜನ ಅತಂತ್ರ ಸ್ಥಿತಿಯಲ್ಲಿ ಸಿಲುಕಿರಬಹುದು ಎಂದು ಮಾಧ್ಯಮ ಮಾಹಿತಿ ಬ್ಯೂರೋದ ಮಹಾ ನಿರ್ದೇಶಕ ನೀಲಮ್ ಕಪೂರ್ ದೆಹಲಿಯಲ್ಲಿ ತಿಳಿಸಿದ್ದಾರೆ.

ಕೇದಾರಾನಾಥ ಕಣಿವೆಯಲ್ಲಿ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಹನುಮಾನ್ ಛತ್ತಿಗೆ ರಸ್ತೆ ಸಂಪರ್ಕ ಕಲ್ಪಿಸಲು ಯಶಸ್ವಿಯಾದ ನಂತರ ಬದರಿನಾಥದಲ್ಲಿ ಸಿಲುಕಿದ್ದ 2,500 ಜನರನ್ನು ರಕ್ಷಿಸಲಾಯಿತು. ಇವರು 10 ಕಿ.ಮೀ. ಕಾಲ್ನಡಿಗೆಯಲ್ಲಿ ಗೋವಿಂದ ಘಾಟ್ ತಲುಪಿ, ಅಲ್ಲಿಂದ ಮುಂದೆ ಜೋಶಿಮಠಕ್ಕೆ ಕಾರುಗಳಲ್ಲಿ ತೆರಳಬೇಕು. ಜೋಶಿಮಠದಿಂದ ಮುಂದಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಭಾನುವಾರ 45 ಹೆಲಿಕಾಪ್ಟರ್ಗಳು 250 ಬಾರಿ ಸಂಚರಿಸಿ 3,200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದವು ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ಕಾರ್ಯಾಚರಣೆ ಪಡೆಯು (ಎನ್ಡಿಆರ್ಎಫ್) ಮಾನವ ರಹಿತ ವೈಮಾನಿಕ ಸಾಧನವಾದ `ನೇತ್ರ'ದ ನೆರವಿನಿಂದ ದುರ್ಗಮ ಪ್ರದೇಶಗಳಲ್ಲಿ ಸಿಲುಕಿರುವವರ ಪತ್ತೆಗಾಗಿ ಶ್ರಮಿಸುತ್ತಿದೆ ಎಂದು ಪಡೆಯ ಮಹಾ ನಿರ್ದೇಶಕ ಎಸ್.ಎಸ್.ಗುಲೇರಿಯಾ ತಿಳಿಸಿದ್ದಾರೆ.

ಹರಿದು ಬರುತ್ತಿರುವ ದೇಣಿಗೆ
ನವದೆಹಲಿ (ಐಎಎನ್ಎಸ್): ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಮ್ಮ ಒಂದು ತಿಂಗಳ ವೇತನದ ಮೊತ್ತ ರೂ.1.5 ಲಕ್ಷವನ್ನು ನೀಡಲಿದ್ದಾರೆ.

ಸತತ ಮಳೆ ಹಾಗೂ ಭೂಕುಸಿತದಿಂದ ಭಾರಿ ಸಾವು ನೋವು ಉಂಟಾಗಿದ್ದು ಪರಿಹಾರ ಕಾರ್ಯಚರಣೆಯನ್ನು ಚುರುಕುಗೊಳಿಸಲಾಗಿದೆ ಎಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ವೇಣು ರಾಜಮನಿ ತಿಳಿಸಿದ್ದಾರೆ.

ರಾಷ್ಟ್ರೀಯ ದುರಂತ ಘೋಷಣೆಗೆ ಒತ್ತಾಯ
ಲಖನೌ (ಪಿಟಿಐ): ಉತ್ತರಾಖಂಡ ಪ್ರವಾಹ ಸ್ಥಿತಿಯನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸಲು ಸಮಾಜವಾದಿ ಪಕ್ಷ ಒತ್ತಾಯಿಸಿದ್ದು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ಅಲ್ಲಿಯ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದೆ.

`ಉತ್ತರಾಖಂಡ್ ಮಳೆ ದುರಂತ ನಿಜಕ್ಕೂ ರಾಷ್ಟ್ರೀಯ ದುರಂತ ಎನಿಸಿದ್ದು, ಅಲ್ಲಿ ಇನ್ನೂ ಸಿಕ್ಕಿಹಾಕಿಕೊಂಡವರನ್ನು ತಕ್ಷಣಕ್ಕೆ ಪಾರು ಮಾಡಬೇಕು ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಇದು ತೀವ್ರಗತಿಯಲ್ಲಿ ಸಾಗುತ್ತಿಲ್ಲ' ಎಂದು ಪಕ್ಷದ ವರಿಷ್ಠ ನಾಯಕ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಈಗಾಗಲೆ ಸಂತ್ರಸ್ತರಿಗಾಗಿ ರೂ.25 ಕೋಟಿ ನೀಡಿದ್ದು, ಜತೆಗೆ ಸಿಕ್ಕಿಹಾಕಿಕೊಂಡವನ್ನು ಕರೆತರಲು ಬಸ್ಗಳನ್ನು ಒದಗಿಸಿದೆ ಎಂದು ತಿಳಿಸಿದರು.

ಸಂತ್ರಸ್ತರಿಗೆ ನೆರವಾಗಿ: ಚಿರಂಜೀವಿ ಮನವಿ
ವಿಜಯವಾಡ (ಪಿಟಿಐ): ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗಾಗಿ ನೆರವಾಗಲು ಕೇಂದ್ರದ ಪ್ರವಾಸೋದ್ಯಮ ಸಚಿವ, ನಟ ಚಿರಂಜೀವಿ ಆಂಧ್ರಪ್ರದೇಶದ ಜನರಲ್ಲಿ ಮನವಿಮಾಡಿಕೊಂಡಿದ್ದಾರೆ.

ದಾನಿಗಳು ತಮ್ಮ ನೆರವನ್ನು ಚಿರಂಜೀವಿ ದತ್ತಿ ಟ್ರಸ್ಟ್ಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ತಿಳಿಸಿದ್ದಾರೆ. ಉತ್ತರಾಖಂಡ ದುರಂತದಲ್ಲಿ ಕಣ್ಮರೆಯಾದ ಯಾತ್ರಿಯೊಬ್ಬರ ಇಲ್ಲಿಯ ನಿವಾಸಕ್ಕೆ ಭೇಟಿ ನೀಡಿದ ನಟ, ಕುಟುಂಬದವರಿಗೆ ಸಾಂತ್ವನ ಹೇಳಿದರು. ತಮ್ಮ ಸಂಸದರ ನಿಧಿಯಿಂದ ಸಂತ್ರಸ್ತರಿಗಾಗಿ ರೂ.1 ಕೋಟಿಯ ಜತೆಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಒಂದು ತಿಂಗಳ ಸಂಬಳವನ್ನೂ ನೀಡುತ್ತಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ತಮಿಳುನಾಡಿನಿಂದ ರೂ.5 ಕೋಟಿ
ಚೆನ್ನೈ (ಪಿಟಿಐ): ಉತ್ತರಾಖಂಡ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಅನುಕೂಲ ಆಗಲು ತಮಿಳುನಾಡು ರಾಜ್ಯ ಸರ್ಕಾರದಿಂದ ರೂ. 5 ಕೋಟಿ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಜಯಲಲಿತಾ ತಿಳಿಸಿದ್ದಾರೆ.

ಹಣಕಾಸು ನೆರವಿನ ಜತೆಯಲ್ಲಿ ಬೇರೆ ರೀತಿಯ ನೆರವು ನೀಡಲು ಸಹ ರಾಜ್ಯ ಸರ್ಕಾರ ಸಿದ್ಧವಿದ್ದು, ಕೇದಾರನಾಥ ಹಾಗೂ ಬದರಿಯಲ್ಲಿ ಸಿಕ್ಕಿಹಾಕಿಕೊಂಡ 275 ಯಾತ್ರಿಗಳನ್ನು ಶನಿವಾರ ಚನ್ನೈಗೆ ಕರೆತರಲಾಗಿದೆ ಎಂದು ತಿಳಿಸಿದರು.

'ಪುನರ್ನಿರ್ಮಾಣಕ್ಕೆ ದೀರ್ಘಾವಧಿ ಯೋಜನೆ'
ಡೆಹ್ರಾಡೂನ್ (ಪಿಟಿಐ): ಪ್ರವಾಹದಿಂದ ತೀವ್ರ ಹಾನಿಗೆ ಒಳಗಾಗಿರುವ ಉತ್ತರಾಖಂಡ್ದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಕೇಂದ್ರ ಸರ್ಕಾರ ದೀರ್ಘಾವಧಿ ಯೋಜನೆ ಹಾಕಿಕೊಂಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ತಿಳಿಸಿದ್ದಾರೆ.

ಇಂತಹ ಸಂಕಷ್ಟಮಯ ಸ್ಥಿತಿಯಲ್ಲಿ ಇಡೀ ದೇಶ ಉತ್ತರಾಖಂಡ ಜನತೆಯ ಜತೆಗಿದ್ದು ಕೇದಾರನಾಥ ಮತ್ತಿತರ ಮಳೆ, ಪ್ರವಾಹದಿಂದ ಹಾಳಾದ ಸ್ಥಳಗಳಲ್ಲಿ ಪುನರ್ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಂವಹನಕ್ಕೆ ಸ್ಯಾಟಲೈಟ್ ಫೋನ್
ಡೆಹ್ರಾಡೂನ್ (ಪಿಟಿಐ, ಐಎಎನ್ಎಸ್): ರಕ್ಷಣಾ ಕಾರ್ಯಾಚರಣೆ ವೇಳೆ ನಿರಂತರ ಸಂವಹನಕ್ಕಾಗಿ ಗೃಹ ಇಲಾಖೆಯು 25 ಸ್ಯಾಟಲೈಟ್ ಫೋನ್ಗಳ ಪೂರೈಸಿದೆ. ಇನ್ನೂ 50 ಸ್ಯಾಟಲೈಟ್ ಫೋನ್ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಭಾರತೀಯ ವಾಯುಪಡೆಯು (ಐಎಎಫ್) ರುದ್ರಪ್ರಯಾಗದ ಗುಪ್ತಕಾಶಿಯಲ್ಲಿ ವೈದ್ಯಕೀಯ ಶಿಬಿರ ಸ್ಥಾಪಿಸಿ, ಆಘಾತಕ್ಕೊಳಗಾದವರ ಆರೈಕೆಯಲ್ಲಿ ತೊಡಗಿಸಿಕೊಂಡಿದೆ.

ಮುಖ್ಯ ಕಮಾಂಡರ್ ಆತಂಕ: ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಸೇನಾಪಡೆಯ ಮುಖ್ಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಲ್ ಚೈತ್ ಅವರು, ಮತ್ತೆ ಭಾರಿ ಮಳೆ ಸುರಿಯುವ ಸಾಧ್ಯತೆ ಹಾಗೂ ಸಂಭಾವ್ಯ ಪ್ರತಿಕೂಲ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

`ಜೂನ್ 25ರಿಂದ ಮತ್ತೆ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಾತಾವಾರಣದ ಹಲವಾರು ಸ್ತರಗಳಲ್ಲಿ ಮೋಡ ಕಟ್ಟುವುದರಿಂದ ಹೆಲಿಕಾಪ್ಟರ್ಗಳ ಹಾರಾಟ ಅಸಾಧ್ಯವಾಗಲಿದೆ. ಅಲ್ಲದೇ, ಸೇನಾ ಹೆಲಿಕಾಪ್ಟರ್ನಿಂದ ಒಂದು ಬಾರಿಗೆ ಏಳು ಅಥವಾ ಎಂಟು ಜನರನ್ನು ಮಾತ್ರ ರಕ್ಷಿಸಲು ಸಾಧ್ಯ' ಎಂದು ಅವರು ಹೇಳಿದ್ದಾರೆ.

ಅತ್ಯಂತ ದೊಡ್ಡ ದುರಂತ: `ನನ್ನ ಸೇವಾವಧಿಯಲ್ಲೇ ನಾನು ಕಂಡ ಅತ್ಯಂತ ದೊಡ್ಡ ದುರಂತ ಇದು' ಎಂದಿರುವ ಚೈತ್, ಈವರೆಗಿನ ಕಾರ್ಯಾಚರಣೆಯಿಂದ ಗಂಗೋತ್ರಿ, ಜೋಶಿಮಠ, ಬದರಿನಾಥ, ಕೇದಾರನಾಥ ಮತ್ತು ಪಿಂದರಿ ನೀರ್ಗಲ್ಲು ಪ್ರದೇಶಗಳಲ್ಲಿ ಸಿಲುಕಿದ್ದ 18,000 ಜನರನ್ನು ರಕ್ಷಿಸಲಾಗಿದೆ ಎಂದಿದ್ದಾರೆ.

ಸಶಸ್ತ್ರ ಪಡೆಗಳು ಇದುವರೆಗೆ ನಡೆಸಿರುವ ಕಾರ್ಯಚರಣೆಗಳಲ್ಲೇ `ಇದು ಅತ್ಯಂತ ದೊಡ್ಡ ರಕ್ಷಣಾ ಕಾರ್ಯಾಚರಣೆ' ಎಂದೂ ಹೇಳಲಾಗಿದೆ.

ವಾಯುಪಡೆ ಯೋಜನೆ: ಹವಾಮಾನ ಪ್ರತಿಕೂಲವಾಗದಿದ್ದರೆ ಎರಡು ಸಿ-130ಜೆ ವಿಮಾನಗಳ ಮೂಲಕ ವೈದ್ಯಕೀಯ ತಂಡ ಹಾಗೂ ಸಾಧನ-ಸಲಕರಣೆಗಳನ್ನು ಕೇದಾರನಾಥಕ್ಕೆ ರವಾನಿಸಿ `ಮಿನಿ ಆಸ್ಪತ್ರೆ' ಸ್ಥಾಪಿಸಲಾಗುವುದು ಎಂದು ಐಎಎಸ್ ವಕ್ತಾರೆ ಪ್ರಿಯಾ ಜೋಶಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೀತಿ: ಕೇದಾರನಾಥ ಹಾಗೂ ಇತರ ಯಾತ್ರಾಸ್ಥಳಗಳ ಪ್ರದೇಶಗಳಲ್ಲಿ ನೂರಾರು ಮನೆಗಳು ಕುಸಿದಿರುವುದರಿಂದ ಹಾಗೂ ಪ್ರವಾಹದೊಂದಿಗಿನ ಕೆಸರ ಹೊಡೆತಕ್ಕೆ ಸಿಲುಕಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಭಕ್ತಾದಿಗಳು ಸಾವಿಗೀಡಾಗಿರುವ ಸಾಧ್ಯತೆ ಇದೆ. ಹೀಗಾಗಿ, ಸಾವಿಗೀಡಾದವರ ಸಂಖ್ಯೆ 5000ಕ್ಕೂ ಹೆಚ್ಚಾಗಬಹುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಭೀತಿ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತ ಪ್ರದೇಶಗಳಿಗೆ ಸಾಗುವ ಬಹುತೇಕ ರಸ್ತೆಗಳು ಧ್ವಂಸವಾಗಿರುವುದರಿಂದ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಏನಿಲ್ಲವೆಂದರೂ 15 ದಿನಗಳು ಹಿಡಿಯಬಹುದು ಎಂದು ಬಹುಗುಣ ಅವರು ಟಿ.ವಿ. ಚಾನೆಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಪಾಯ ಮಟ್ಟಕ್ಕೆ ನದಿಗಳು
ಲಖನೌ : ಉತ್ತರ ಪ್ರದೇಶದಲ್ಲಿ ಗಂಗಾ, ಶಾರದಾ, ಗಾಗ್ರಾ ಮತ್ತಿತರ ಪ್ರಮುಖ ನದಿಗಳಲ್ಲಿನ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ಅಪಾಯದ ಮಟ್ಟ ಸಮೀಪಿಸಿವೆ.

ಕನೌಜ್, ಕಾನ್ಪುರ, ಅಲಹಾಬಾದ್, ವಾರಾಣಸಿ ಮತ್ತಿತರ ಕಡೆ ಗಂಗಾ ನದಿ ತುಂಬಿ ಹರಿಯುತ್ತಿದ್ದು ಲಖಿಮ್ಪುರ ಜಿಲ್ಲೆಯಲ್ಲಿ ಶಾರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗದ ಮೂಲಗಳು ತಿಳಿಸಿವೆ.

ಗರ್ಭಿಣಿಯರಿಗೆ ನೆರವಾದ ಸೇನಾ ತಂಡ
ನವದೆಹಲಿ (ಪಿಟಿಐ): ಮಹಾಮಳೆಯಿಂದ ತತ್ತರಿಸಿರುವ ಉತ್ತರಾಖಂಡದ ಸಬೋಲಾ ಪ್ರದೇಶದ ತಾತ್ಕಾಲಿಕ ಪರಿಹಾರ ಕೇಂದ್ರವೊಂದರಲ್ಲಿ ಎರಡು ಶಿಶುಗಳ (ಗಂಡು ಮತ್ತು ಹೆಣ್ಣು) ಜನನಕ್ಕೆ ಸೇನೆಯ ವೈದ್ಯಕೀಯ ತಂಡವೊಂದು ನೆರವಾಗಿದೆ.

ತಂಡವು ಶನಿವಾರ ಸುಮಾರು 400 ಜನರಿರುವ ತೈಜನ್ ಗ್ರಾಮಕ್ಕೆ 15 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿದ ಸಂದರ್ಭದಲ್ಲಿ ಇಬ್ಬರು ಗರ್ಭಿಣಿಯರಿಗೆ ತುರ್ತು ವೈದ್ಯಕೀಯ ನೆರವು ಬೇಕಿದ್ದ ವಿಷಯ ತಿಳಿಯಿತು. ಕ್ಯಾಪ್ಟನ್ ಆರ್. ಪಾಟೀಲ್ ನೇತೃತ್ವದ ತಂಡ ಈ ನಿಟ್ಟಿನಲ್ಲಿ ನೆರವಾಯಿತು.

ಭಾನುವಾರ ಸೇನಾ ಮಹಿಳಾ ವೈದ್ಯೆ ಕ್ಯಾಪ್ಟನ್ ಫೆಬ್ಬಾ ಸುಸಾನ್ ಅವರನ್ನು ಸಮೀಪದ ಪ್ರದೇಶವೊಂದರಲ್ಲಿ ಹೆಲಿಕಾಪ್ಟರ್ ಮೂಲಕ ಇಳಿಸಿದ್ದು, ಅವರು ಸುಮಾರು 10 ಕಿ.ಮೀ. ಕಾಲ್ನಡಿಗೆ ಮೂಲಕ ಗ್ರಾಮವನ್ನು ತಲುಪಿದರು. ನಂತರ ಇಬ್ಬರು ಗರ್ಭಿಣಿಯರಿಗೆ ಹೆರಿಗೆ ಮಾಡಲು ನೆರವಾದರು.

ಈಗ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ತಾಯಂದಿರು ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ. ಸ್ಥಳೀಯರ ಜೊತೆ ಸೇನಾ ವೈದ್ಯಕೀಯ ತಂಡ ಇನ್ನೂ ನೆರವಾಗುತ್ತಿದೆ ಎಂದು ಸೇನಾ ಕಾರ್ಯಾಚರಣೆ ಡಿಜಿ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.