ಗುರುವಾರ , ಮೇ 19, 2022
20 °C

ರಜನಿ... ಶೀರ್ಷಿಕೆಯಲ್ಲಿ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್‌ಸ್ಟಾರ್ ರಜನೀಕಾಂತ್ ಗೆಳೆಯ ರಾವ್ ಬಹದ್ದೂರ್ ಕ್ಲಾಪ್ ಬೋರ್ಡ್ ಹಿಡಿದು ನಿಲ್ಲಲು ಕಾರಣವಿತ್ತು. ಕ್ಲಾಪ್‌ಬೋರ್ಡ್ ಮೇಲೆ ಬರೆದಿದ್ದ ಶೀರ್ಷಿಕೆ `ರಜನೀಕಾಂತ~. ಇಂಥದೊಂದು ಶೀರ್ಷಿಕೆಗೆ ಸಾಕ್ಷಾತ್ ರಜನೀಕಾಂತ್ ಅವರ ಅನುಮತಿಯ ಅವಶ್ಯಕತೆ ಇತ್ತು. ಅದನ್ನು ಕೊಡಿಸಿದವರು ರಾವ್ ಬಹದ್ದೂರ್.ಯಾವ ನಾಯಕನಿಗೆ ಈ ಶೀರ್ಷಿಕೆ ಎಂದು ರಜನೀಕಾಂತ್ ಕೇಳಿದರಂತೆ. `ದುನಿಯಾ~ ಚಿತ್ರದಲ್ಲಿ ನಟಿಸಿದ್ದ ವಿಜಯ್ ಎಂದೊಡನೆ ಅವರಿಗೆ ಖುಷಿಯಾಯಿತಂತೆ.ಆ ಹುಡುಗ ಚೆನ್ನಾಗಿ ಅಭಿನಯಿಸುತ್ತಾನೆ ಎಂದು ಶಹಬ್ಬಾಸ್‌ಗಿರಿ ಸಮೇತ ಶೀರ್ಷಿಕೆಗೆ ಅನುಮತಿಯನ್ನೂ ರಜನಿ ದಯಪಾಲಿಸಿದ್ದಾರೆ.ವಿಜಯ್ ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಮೊದಲ ಚಿತ್ರವಿದು. ಪ್ರದೀಪ್ ರಾಜ್ ಇದರ ನಿರ್ದೇಶಕ. ಬಂಡವಾಳ ಹೂಡುತ್ತಿರುವ ನಿರ್ಮಾಪಕ ಕೆ.ಮಂಜು. ಈ ಮೂವರ ಇತ್ತೀಚಿನ ಚಿತ್ರಗಳು ಗೆದ್ದಿರುವುದು ಕಾಕತಾಳೀಯ. `ಜಾನಿ ಮೇರಾ ನಾಮ್~ ಗೆಲುವಿನಿಂದ ವಿಜಯ್‌ಗೆ ಹುಮ್ಮಸ್ಸು ಬಂದಿದೆ.`ಕಿರಾತಕ~ಕ್ಕೆ ಸಂದ ಪ್ರತಿಕ್ರಿಯೆ ಪ್ರದೀಪ್ ರಾಜ್ ಬಗ್ಗೆ ಭರವಸೆ ಮೂಡಿಸಿದೆ. `ಕಳ್ಳ ಮಳ್ಳ ಸುಳ್ಳ~ ಚಿತ್ರದ ಗೆಲುವಿನಿಂದ ಮಂಜು ಕೂಡ ಖುಷಿಯಲ್ಲಿದ್ದಾರೆ. ಚಿತ್ರದಲ್ಲಿ ರಜನೀಕಾಂತ್ ಅವರ ನಿಜ ಬದುಕಿನ ಯಾವ ಸಂಗತಿಗಳೂ ಇರುವುದಿಲ್ಲ.

 

ಅವರ ಮ್ಯಾನರಿಸಂನ ಅನುಕರಣೆಯೂ ಇರುವುದಿಲ್ಲ ಎಂಬುದು ವಿಜಯ್ ಸ್ಪಷ್ಟನೆ. ವಿಜಯ್ ಅಭಿನಯಿಸಲಿರುವ ಎರಡು ಪಾತ್ರಗಳಲ್ಲಿ ಒಂದರ ನಿರ್ವಹಣೆ ಬಹಳ ಕಷ್ಟವಿದ್ದು, ಅದಕ್ಕೆ ಬಹುತೇಕ ನಟರು ಒಪ್ಪದೇ ಇರುವ ಸಾಧ್ಯತೆ ಇದೆ.ಆದರೆ, ವಿಜಯ್ ಅದನ್ನು ಒಪ್ಪಿಕೊಂಡಿದ್ದು ಸಂತಸದ ವಿಷಯ ಎಂದು ಪ್ರದೀಪ್ ರಾಜ್ ಹೇಳಿಕೊಂಡರು. ಅನಾರೋಗ್ಯಕ್ಕೆ ತುತ್ತಾಗುವ ಪತ್ರಕರ್ತರಿಗೆ ನೆರವು ನೀಡಲು ಒಂದು ಲಕ್ಷ ರೂಪಾಯಿ ಮೀಸಲಿಡುವ ಹಾಗೂ ಕಡು ಬಡವನೊಬ್ಬನಿಗೆ ಆಟೋ ಕೊಡಿಸುವ ಘೋಷಣೆಯನ್ನು ವಿಜಯ್ ಇದೇ ಸಂದರ್ಭದಲ್ಲಿ ಮಾಡಿದರು.

 

ಮುಂದಿನ ಜನವರಿ 26ರಂದು ತಮ್ಮ ಹುಟ್ಟುಹಬ್ಬದ ದಿನ ಅರ್ಹ ವ್ಯಕ್ತಿಗೆ ಆಟೋ ಕೊಡಿಸುವುದು ಅವರ ಉದ್ದೇಶ. ಯಾವ ಪತ್ರಕರ್ತರಿಗೆ ನಿಜಕ್ಕೂ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದೆಯೋ ಅದನ್ನು ಸುದ್ದಿಮಿತ್ರರೇ ನಿರ್ಧರಿಸಬೇಕೆಂದೂ ಅವರು ಹೇಳಿದರು. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.