ಗುರುವಾರ , ಜೂನ್ 4, 2020
27 °C

ರವಿಕೆಗೂ ಗ್ಲಾಮರಸ್ ಸ್ಪರ್ಶ

ಸಂದರ್ಶನ: ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ರವಿಕೆಗೂ ಗ್ಲಾಮರಸ್ ಸ್ಪರ್ಶ

ಈ  ಹೆಣ್ಣುಮಗಳನ್ನು ವಸ್ತ್ರ ವಿನ್ಯಾಸಕಿ ಎಂದು ಒಂದು ಸಾಲಿನಲ್ಲಿ  ಪರಿಚಯಿಸಿ ಬಿಡಬಹುದು. ಆದರೆ ಅಂಜಲಿ ಶರ್ಮ ಎಂಬ ಎರಡು ಪದಗಳನ್ನು ಸರ್ಚ್‌ಎಂಜಿನ್‌ನಲ್ಲಿ ಹಾಕಿದ ಕ್ಷಣದೊಳಗೆ ಅವರ ವಿನ್ಯಾಸಲೋಕ ತೆರೆದುಕೊಳ್ಳುತ್ತದೆ.ಅಂಜಲಿ ಶರ್ಮ ಕಳೆದೊಂದು ದಶಕದಿಂದ ಭಾರತದ ಮುಂಚೂಣಿ ವಸ್ತ್ರವಿನ್ಯಾಸಕರ ಸಾಲಿನಲ್ಲಿ ನಿಂತಿರುವ ಪ್ರಯೋಗಶೀಲ ಪ್ರತಿಭೆ. ಬೆಂಗಳೂರಿನಲ್ಲಿ 2005ರಿಂದಲೂ ಡಿಸೈನಿಂಗ್ ಸ್ಟುಡಿಯೊ ನಡೆಸುತ್ತಿರುವ ಅವರು, ಸೀರೆಯ ರವಿಕೆಗೆ ಗ್ಲಾಮರಸ್ ಸ್ಪರ್ಶ ಕೊಟ್ಟು ವಿನ್ಯಾಸ ಜಗತ್ತಿಗೆ ಹೊಸ ಸಾಧ್ಯತೆಯನ್ನು ಪರಿಚಯಿಸಿದ್ದಾರೆ. ಇದೇ ನೆಪದಲ್ಲಿ `ಮೆಟ್ರೊ'ದೊಂದಿಗೆ ಮಾತನಾಡಿದ್ದಾರೆ.ಅಂಜಲಿ ಶರ್ಮ ಎಂಬ ವಸ್ತ್ರ ವಿನ್ಯಾಸಕಿಯ ಪರಿಚಯ...

ನಾನು ನವದೆಹಲಿಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿನಿ. ಸ್ವಲ್ಪ ಕಾಲ ನಿಫ್ಟ್‌ನಲ್ಲಿ ಉಪನ್ಯಾಸ ವೃತ್ತಿ ಮಾಡಿದ ಬಳಿಕ ನನ್ನದೇ ಡಿಸೈನಿಂಗ್ ಸ್ಟುಡಿಯೊ- ಫ್ರೆಂಚ್ ಕರ್ವ್- ತೆರೆದೆ. ಬೆಂಗಳೂರು ಸ್ಟುಡಿಯೊ ರಿಚ್ಮಂಡ್ ಟೌನ್‌ನ ಕ್ಯಾಸಲ್ ಸ್ಟ್ರೀಟ್‌ನಲ್ಲಿದೆ. ಅಂತರರಾಷ್ಟ್ರೀಯ ಬ್ರಾಂಡ್‌ಗಳಿಗೂ, ಫ್ಯಾಷನ್ ಸಪ್ತಾಹಗಳಿಗೂ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದೇನೆ.`ಫ್ರೆಂಚ್ ಕರ್ವ್' ಹೆಸರೇ ವಿಶಿಷ್ಟವಾಗಿದೆಯಲ್ಲ?

ಹೌದು. ಹೆಸರಷ್ಟೇ ಅಲ್ಲ. ನಮ್ಮ ಪ್ರತಿ `ಕಟಿಂಗ್' ವಿಶಿಷ್ಟ. ವಸ್ತ್ರವಿನ್ಯಾಸಕರು ಬಳಸುವ ಒಂದು ಸಲಕರಣೆ ಅದು. ಉಡುಪು ಹೊಲಿಯುವಾಗ ಕಂಕುಳ (ಮೆಶರಿಂಗ್ ಅಂಡರ್‌ಆರ್ಮ್‌ ) ಭಾಗವನ್ನು ಸೂಚಿಸುವ ಸಲಕರಣೆ. ವಿದ್ಯಾರ್ಥಿ ಜೀವನದ್ಲ್ಲಲೇ ಆ ಹೆಸರು ನನ್ನನ್ನು ಆಕರ್ಷಿಸಿತ್ತು. ಹಾಗಾಗಿ ನನ್ನ ಕನಸಿನ ಡಿಸೈನಿಂಗ್ ಸ್ಟುಡಿಯೊಗೆ ಆ ಹೆಸರನ್ನಿಟ್ಟೆ.ಪುರಾಣ ಕಾಲದಿಂದಲೂ ಶಿಸ್ತಿನ ಉಡುಗೆಯಾಗಿ ಪರಿಗಣಿಸಲಾದ ಸೀರೆಗೆ ಈಗ ಗ್ಲಾಮರಸ್ ಸ್ಪರ್ಶ ಸಿಕ್ಕಿದೆ. ಇದು ಸೂಕ್ತವೇ?

ನಿಜ. ಸೀರೆಗೆ ಅದರದ್ದೇ ಆದ ಒಂದು ಸಾಂಪ್ರದಾಯಿಕ, ಸಾಂಸ್ಕೃತಿಕ ಆಯಾಮವಿದೆ. ಆದರೆ ಸೀರೆಯ ಪರಿಕಲ್ಪನೆಯೂ ಆಯಾ ಸಂದರ್ಭಕ್ಕೆ ತಕ್ಕುದಾಗಿ ಬದಲಾಗುತ್ತಾ ಬಂದಿದೆ. ರವಿಕೆ ಧರಿಸದೆ ಸೀರೆ ಉಡುವ ಕಾಲವೊಂದಿತ್ತು. ಬಟ್ಟೆಯ ತುಂಡೊಂದನ್ನು ರವಿಕೆಯಂತೆ ಕಟ್ಟಿಕೊಳ್ಳುವ ಕ್ರಮ ರೂಢಿಗೆ ಬಂತು. ಕ್ರಮೇಣ ರವಿಕೆಗೊಂದು ಸ್ಪಷ್ಟ ರೂಪ ಬಂತು. ಹಾಗೆಯೇ ಸೀರೆಯೂ ಬಡ್ತಿ ಹೊಂದುತ್ತಲೇ ಬಂದಿದೆ.ನಿಮ್ಮ ವಿನ್ಯಾಸದ ಬಗ್ಗೆ ಹೇಳಿ...

ಸೀರೆ, ಲೆಹೆಂಗಾ, ಬ್ರೈಡಲ್‌ವೇರ್, ಪಾಶ್ಚಾತ್ಯ ಉಡುಗೆಗಳು ಮತ್ತು ರವಿಕೆಗಳೆಂಬ ಮೇಲುಡುಗೆಗಳನ್ನು ನಮ್ಮ ಸ್ಟುಡಿಯೊದಲ್ಲಿ ಸಿದ್ಧಪಡಿಸುತ್ತೇವೆ. ಫ್ಯಾಬ್ರಿಕ್‌ನ ಆಯ್ಕೆಗಾಗಿ ದೆಹಲಿಯ ಯಾವುದೇ ಗಲ್ಲಿಗಾಗಲಿ ನಾನೇ ಸ್ವತಃ ಸುತ್ತಾಡುತ್ತೇನೆ. ಪ್ರತಿ ಹೊಲಿಗೆಯಲ್ಲೂ, ಕಸೂತಿಯಲ್ಲೂ, ಎಳೆಯಲ್ಲೂ `ಫ್ರೆಂಚ್‌ಕರ್ವ್'ನ ಛಾಪು ಕಾಣಬೇಕು ಎಂಬುದು ನಮ್ಮ ಉದ್ದೇಶ.ನಿಮ್ಮ ವೈಶಿಷ್ಟ್ಯವೇನು?

ಅತ್ಯಾಧುನಿಕ ಶೈಲಿಯ ರವಿಕೆ `ಫ್ರೆಂಚ್ ಕರ್ವ್'ನ ವೈಶಿಷ್ಟ್ಯ. ನಮ್ಮಲ್ಲಿ ವಿನ್ಯಾಸಗೊಳ್ಳುವ ರವಿಕೆಗಳ ಮೂಲಪರಿಕಲ್ಪನೆ ನಮ್ಮದೇ. ರವಿಕೆಯ ನೂರಾರು ಬಗೆಯ ವಿನ್ಯಾಸ ನಮ್ಮಲ್ಲಿವೆ. ರವಿಕೆಗೂ ಒಂದು ಒಳಉಡುಪು ಇರುತ್ತದೆ ಅಲ್ವಾ? ನಾವು ಆ ಒಳಉಡುಪನ್ನು ರವಿಕೆಯಲ್ಲೇ ವಿನ್ಯಾಸಗೊಳಿಸುವ ಕಾರಣ ಅದನ್ನು ಪ್ರತ್ಯೇಕವಾಗಿ ಧರಿಸುವ ಅಗತ್ಯವಿರುವುದಿಲ್ಲ!ರವಿಕೆಗಳಿಗೆ ಗ್ಲಾಮರಸ್ ಸ್ಪರ್ಶ ಅಗತ್ಯವೇ?

ಫ್ಯಾಷನ್ ಜಗತ್ತಿನಲ್ಲಿ ಸೀರೆಯಂತೆ ರವಿಕೆಯ ಟ್ರೆಂಡ್ ಸಹ ಬದಲಾಗುತ್ತಿದೆ. ರವಿಕೆಯನ್ನು ನಾವು ಬಹೂಪಯೋಗಿ ಬಳಕೆ ಮಾಡುವಂತೆ ವಿನ್ಯಾಸ ಮಾಡುತ್ತೇವೆ. ಅಂದರೆ ಪಾರದರ್ಶಕ ಶರ್ಟ್‌ನೊಳಗಾಗಲಿ, ಲೆಹೆಂಗಾದ ಜತೆಗಾಗಲಿ ಬಳಸಬಹುದು. ಪಾರದರ್ಶಕ ಕುರ್ತಾದೊಳಗೆ ಧರಿಸಬಹುದು!ಸೂಕ್ಷ್ಮ ಕಸೂತಿ ಕೆಲಸದ ಸೀರೆ, ರವಿಕೆ ಅಥವಾ ಲೆಹೆಂಗಾ ಸುಂದರ ಆಭರಣದಂತೆ ಕಾಣುತ್ತದೆ ಅಲ್ವೇ?

ಹರಳುಗಳಿಂದ ಕೂಡಿದ ರವಿಕೆಯನ್ನಾಗಲಿ, ಅಸಲಿ ಮುತ್ತು, ಜುಮುಕಿಗಳಿಂದ ವಿನ್ಯಾಸಗೊಂಡಿರುವ ಲೆಹೆಂಗಾವನ್ನಾಗಲಿ ನೋಡಿದರೆ ಹಾಗನ್ನಿಸುವುದು ಸಹಜ. ಕೆಲವರು ಗೋಂದು/ಅಂಟು ಬಳಸಿ ಹರಳುಗಳನ್ನು ಕೂರಿಸುತ್ತಾರೆ. ನನ್ನ ಸ್ಟುಡಿಯೊದಲ್ಲಿ ದಾರದ ಕಸೂತಿಯಿಂದಲೇ ಹರಳುಗಳನ್ನು ಕೂರಿಸಲಾಗುತ್ತದೆ. ಇದು, ರವಿಕೆಯ ಬಾಳ್ವಿಕೆಯ ಪ್ರಶ್ನೆ. ಯಾವುದೇ ಉಡುಗೆಯನ್ನೇ ತೆಗೆದು ನೋಡಿ, ನಮ್ಮಲ್ಲಿ ಫಿನಿಶಿಂಗ್‌ಗೆ ಬಹಳ ಮುಖ್ಯ ಆದ್ಯತೆ ಕೊಡುತ್ತೇವೆ.ಆರ್ಡರ್ ಕೊಡುವುದು ಹೇಗೆ?

ಮೊದಲ ಬಾರಿಗೆ ಆರ್ಡರ್ ಕೊಡುವ ಗ್ರಾಹಕರು ನಮ್ಮ ಸ್ಟುಡಿಯೊಗೆ ಸ್ವತಃ ಬರುವುದು ಕಡ್ಡಾಯ. ಅವರ  ಮುಖದ ಬಣ್ಣ, ಚರ್ಮದ ಬಣ್ಣ ಮತ್ತು ಗುಣಲಕ್ಷಣ, ಕಣ್ಣು, ಮೂಗು ಮತ್ತು ಒಟ್ಟು ಮುಖದ ಆಕಾರ, ಕತ್ತಿನ ಉದ್ದಳತೆ, ಅವರ ಗಾತ್ರ ಹೀಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ಗಮನಿಸಿ ಪಾಯಿಂಟ್ ಮಾಡಿಕೊಳ್ಳುವುದು ನಮ್ಮ ವಿಶೇಷ. ಪ್ರತಿ ಗ್ರಾಹಕರ ಹೆಸರಿನ ಫೈಲ್‌ನಲ್ಲಿ ಈ ಎಲ್ಲಾ ವಿವರಗಳು ದಾಖಲಾಗುತ್ತವೆ. ಆಮೇಲೆ ಯಾವ ಸಂದರ್ಭಕ್ಕೆ ಯಾವ ಉಡುಗೆ ಬೇಕು ಎಂದು ಅವರು ಹೇಳಿದರೆ ಅವರ ಬೇಡಿಕೆ ಮತ್ತು ಬಜೆಟ್‌ಗೆ ಹೊಂದುವಂತೆ ನಾವು ವಿನ್ಯಾಸ ಮಾಡುತ್ತೇವೆ. ಮುಂದಿನ ಸಲದಿಂದ ಗ್ರಾಹಕರು ದೂರವಾಣಿ/ ಇಮೆಲ್ ಮೂಲಕವೂ ಆರ್ಡರ್ ಕೊಡಬಹುದು. ದಪ್ಪ/ಸಣ್ಣ ಆಗಿದ್ದರೆ ತಿಳಿಸುವುದನ್ನು ಹೊರತು ಉಳಿದ ಯಾವ ವಿವರಗಳನ್ನೂ ಅವರು ಹೇಳಬೇಕಾಗಿಲ್ಲ.ಉಡುಪುಗಳಲ್ಲಿ ವೈವಿಧ್ಯಮಯ ಆಯ್ಕೆ ಈಗ ಲಭ್ಯ. ಹೀಗಿರುವಾಗ ಸೀರೆಯ ಬಗ್ಗೆ ಒಲವು ಹೆಚ್ಚಾಗಿದೆ ಅಂತೀರಲ್ಲ?

ಎಷ್ಟೇ ಬಗೆಯ, ಮಾದರಿಯ ಉಡುಪುಗಳು ಬಂದರೂ ಸೀರೆಯ ಮೌಲ್ಯ, ಆಕರ್ಷಣೆ ಕಡಿಮೆಯಾಗುವುದಿಲ್ಲ. ವಿನ್ಯಾಸದಲ್ಲಿ ಮಾತ್ರವಲ್ಲ ಬಹುಮುಖ್ಯವಾಗಿ ಫ್ಯಾಬ್ರಿಕ್‌ನಲ್ಲಿ ವಿಸ್ತೃತವಾದ ಆಯ್ಕೆ ನಮಗೀಗ ಲಭ್ಯ. ಪ್ರಾದೇಶಿಕತೆಗೂ ಉಡುಗೆ ತೊಡುಗೆಗಳಿಗೂ ನೇರ ಸಂಬಂಧವಿದೆ. ಈ ಅಂಶವನ್ನು ಬಿಟ್ಟುಕೊಡದೆ ಆಧುನಿಕ ಸ್ಪರ್ಶ ಕೊಡುವುದು ವಿನ್ಯಾಸಕರ ಜಾಣ್ಮೆ.ನಿಮ್ಮ ಗ್ರಾಹಕರು ಯಾರು?

ಷೋಡಶಿಯರಿಂದ ಹಿಡಿದು ಅಜ್ಜಿಯವರೆಗೂ ನಮ್ಮ ಗ್ರಾಹಕರಿದ್ದಾರೆ.ಬೆಂಗಳೂರಿನಲ್ಲಿ `ಫ್ರೆಂಚ್ ಕರ್ವ್'ಗೆ ಸ್ಪಂದನ ಹೇಗಿದೆ?

ಸಾಫ್ಟ್‌ವೇರ್ ಹಬ್ ಆಗಿದ್ದರೂ ಬೆಂಗಳೂರು ಅತ್ಯಾಧುನಿಕ ಜೀವನಶೈಲಿಯನ್ನು ಇನ್ನೂ ಒಗ್ಗಿಸಿಕೊಳ್ಳಬೇಕಾಗಿದೆ. ಫ್ಯಾಷನ್ ಜಗತ್ತಿಗೆ ಸ್ಪಂದಿಸಬೇಕಾದುದು ಸಾಕಷ್ಟಿದೆ. ಡಿಸೈನರ್‌ವೇರ್‌ಗಳಿಗೆ ಮಾರುಕಟ್ಟೆ ಈಗಷ್ಟೇ ಬೆಳೆಯುತ್ತದೆ.ಅಂಜಲಿ ಶರ್ಮ ಅವರ ಸಂಪರ್ಕಕ್ಕೆ: 4124 2231 / www.thefrenchcurve.com

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.