ಮಂಗಳವಾರ, ಮೇ 24, 2022
29 °C

ರಸ್ತೆ ತುಂಬ ತೆಗ್ಗ ಬಿದ್ದಾವ ನೋಡ್ರಿ...

ಚಿದಂಬರಪ್ರಸಾದ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: “ಈ ರಸ್ತೆದಾಗ ಓಡಾಡೂದ ಅಂದ್ರ ಮೈಸುತ್ತ ಬರತೈತಿ ನೋಡ್ರಿ. ಟೂ ವ್ಹೀಲರ್ ತಗೋಂಡ ಹೋಗಬೇಕಂದ್ರ ಸರ್ಕಸ್ ಮಾಡಬೇಕ್ರಿ. ಹಗ್ಗದ ಮ್ಯಾಲ ನಡದ್ಹಂಗ ಆಗತೈತಿ ಈ ರಸ್ತೆದಾಗ ಹೋಗುದಂದ್ರ. ರಸ್ತೆ ಎಲ್ಲಿ ಐತಿ ಅಂತ ಹುಡುಕಬೇಕ್ರಿ ಇಲ್ಲಿ”ನಗರದ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಹೇಳುವ ಮಾತಿದು. ಪ್ರಮುಖ ರಸ್ತೆಗಳೇ ಹದಗೆಟ್ಟು ಹೋಗಿದ್ದು, ವಾಹನಗಳಿರಲಿ, ಪಾದಚಾರಿಗಳೂ ಅಡ್ಡಾಡಲು ಆಗದಷ್ಟು ಹದಗೆಟ್ಟಿವೆ ನಮ್ಮೂರ ರಸ್ತೆಗಳು. ಇತ್ತೀಚೆಗಷ್ಟೇ ಚಿತ್ತಾಪುರ ರಸ್ತೆ, ಹೈದರಾಬಾದ್ ರಸ್ತೆ, ಸ್ಟೇಶನ್‌ಗೆ ಹೋಗುವ ಅರ್ಧ ರಸ್ತೆಗಳು ಡಾಂಬರ್ ಕಂಡಿದ್ದರೂ, ಪ್ರಮುಖವಾಗಿರುವ ಇನ್ನೂ ಕೆಲ ರಸ್ತೆಗಳು ದುರಸ್ತಿಗಾಗಿ ಕಾದು ಕುಳಿತಿವೆ.ಪ್ರಮುಖವಾಗಿ ನಗರದ ಚಿತ್ತಾಪುರ ರಸ್ತೆಯಿಂದ ಗಾಂಧಿ ವೃತ್ತದ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅಡಿ ಅಡಿಗೂ ದೊಡ್ಡ ಹೊಂಡಗಳು ಬಿದ್ದಿದ್ದು, ವಾಹನಗಳನ್ನು ಓಡಿಸುವುದಕ್ಕೆ ಚಾಲಕರು ಹರಸಾಹಸ ಮಾಡಬೇಕಾಗಿದೆ. ಸ್ವಲ್ಪ ಆಯ ತಪ್ಪಿದರೂ, ವಾಹನ ಸಮೇತ ನೆಲಕ್ಕೆ ಬೀಳುವುದು ನಿಶ್ಚಿತ.ಯಾದಗಿರಿ ನಗರದಿಂದ ಬಂದಳ್ಳಿ, ಯಡ್ಡಳ್ಳಿ, ಹತ್ತಿಕುಣಿ, ಮೋಟ್ನಳ್ಳಿ ಮಾರ್ಗವಾಗಿ ಸೇಡಂಗೆ ಹೋಗುವ ವಾಹನಗಳು, ಸದ್ಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ರಸ್ತೆಯ ಮೂಲಕ ಓಡಾಡುತ್ತಿವೆ. ಇದರಿಂದಾಗಿ ಜಿಲ್ಲಾ ಮಟ್ಟದ ಕಚೇರಿಗಳಿರುವ ಪ್ರದೇಶದಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗುತ್ತಲೇ ಇದೆ. ಚಿತ್ತಾಪುರ ರಸ್ತೆಯಿಂದ ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಮೂಲಕ ಸೇಡಂ ಹೋಗುವ ವಾಹನಗಳು ಸಂಚರಿಸಿದರೆ, ಕಚೇರಿಗಳ ಎದುರಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಸ್ವಲ್ಪ ಮಟ್ಟಿಗೆ ನಿವಾರಣೆ ಆಗಬಹುದು.ಬಸ್‌ನಿಲ್ದಾಣದಿಂದ ಪದವಿ ಕಾಲೇಜಿನ ಬಳಿ ಈ ರಸ್ತೆ ಸೇರಿದಂತೆ ನೇರವಾಗಿ ಮಹಾತ್ಮಾ ಗಾಂಧಿ ಉದ್ಯಾನಕ್ಕೆ ಹೋಗಬಹುದು. ಅಲ್ಲಿಂದ ಸೇಡಂ ಮತ್ತಿತರರ ಕಡೆಗಳಿಗೆ ವಾಹನಗಳು ಸಂಚರಿಸಬಹುದಾಗಿದೆ. ಆದರೆ ತೆಗ್ಗು ಬಿದ್ದಿರುವುದರಿಂದ ಯಾವುದೇ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದಿಲ್ಲ. ಪದೇ ಪದೇ ವಾಹನವನ್ನು ನಿಯಂತ್ರಿಸುವಷ್ಟರಲ್ಲಿ ಚಾಲಕರಿಗೆ ಸಾಕಾಗಿ ಹೋಗುತ್ತದೆ. ಹೀಗಾಗಿ ಸುತ್ತಿ ಬಳಸಿಯಾದರೂ, ಜಿಲ್ಲಾ ಕಚೇರಿಗಳ ಎದುರಿನ ರಸ್ತೆಯ ಮೂಲಕವೇ ವಾಹನಗಳು ಸಂಚರಿಸುತ್ತವೆ.ಅಟೋ ಹತ್ತಿದ ಶಾಸಕರು:

ನಗರದ ರಸ್ತೆಗಳ ದುಸ್ಥಿತಿಯ ಬಗ್ಗೆ ತಿಳಿಯಲು ಯಾದಗಿರಿಯ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರೇ ಸ್ವತಃ ಅಟೋ ರಿಕ್ಷಾ ಹತ್ತಿ ನಗರ ಪ್ರದಕ್ಷಿಣೆ ಹಾಕಿದರು. ರಸ್ತೆಗಳಲ್ಲಿನ ತೆಗ್ಗು ಗುಂಡಿಗಳನ್ನು ನೋಡಿ ಶಾಸಕರೂ ಬೇಸರ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಆಗುವ ತೊಂದರೆಯನ್ನು ಸ್ವತಃ ಅನುಭವಿಸಿದರು.ಈ ಘಟನೆ ನಡೆದು ಸುಮಾರು ಮೂರ‌್ನಾಲ್ಕು ತಿಂಗಳು ಕಳೆದಿದ್ದು, ಇದುವರೆಗೆ ಶಾಸಕರ ಬೇಸರ ಮಾತ್ರ ಅಧಿಕಾರಿಗಳಿಗೆ ಅರ್ಥವಾಗಿಲ್ಲ. ಜನರ ಕಷ್ಟಗಳಂತೂ ಈ ಅಧಿಕಾರಿಗಳಿಗೆ ಅರ್ಥವಾಗುವುದು ದೂರದ ಮಾತೇ. ಕನಿಷ್ಠ ಶಾಸಕರ ಬವಣೆಯನ್ನಾದರೂ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿತ್ತು ಎನ್ನುತ್ತಿದ್ದಾರೆ ನಗರದ ನಾಗರಿಕರು.ಜಿಲ್ಲಾ ಕೇಂದ್ರದ ಅಭಿವೃದ್ಧಿಗಾಗಿಯೇ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಶಾಸಕರೇ, ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಆಗಿದೆ ಎಂದು ಮುಖ್ಯಮಂತ್ರಿಗಳ ಎದುರೇ ಅಸಮಾಧಾನ ತೋಡಿಕೊಂಡಿದ್ದಾರೆ. ಸರ್ಕಾರ ಯಾದಗಿರಿಗೆ ಹೆಚ್ಚಿನ ನೆರವು ನೀಡಿದ್ದರೂ, ನಗರದ ರಸ್ತೆಗಳು ಮಾತ್ರ ಸುಧಾರಣೆ ಆಗುತ್ತಿಲ್ಲ. ನಗರವನ್ನು ಪ್ರತಿನಿಧಿಸುವ ಶಾಸಕರೂ ಈ ಬಗ್ಗೆ ಗಮನ ನೀಡದೇ ಇರುವುದು ವಿಷಾದದ ಸಂಗತಿ ಎನ್ನುತ್ತಾರೆ ಬಿಜೆಪಿ ಯುವ ಮುಖಂಡ ನಾಗರಾಜ ಬೀರನೂರ.ಚಿತ್ತಾಪುರ ರಸ್ತೆ, ಗಂಜ್ ರಸ್ತೆಗಳು ಮಾತ್ರ ಅಭಿವೃದ್ಧಿ ಆಗಿವೆ. ಆದರೆ ನಗರದ ನಾಗರಿಕರು ಓಡಾಡುವ ರಸ್ತೆಗಳ ಸ್ಥಿತಿ ತೀರ ಹದಗೆಟ್ಟು ಹೋಗಿದೆ. ರಸ್ತೆಗಳ ಸುಧಾರಣೆಗೆ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಗರಸಭೆಗೂ ಸಾಕಷ್ಟು ಹಣ ಬಂದಿದೆ. ಇದೆಲ್ಲವನ್ನೂ ಏನು ಮಾಡಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.ನಾಗರಿಕರ ಸಹನೆಗೂ ಒಂದು ಮಿತಿ ಇದೆ. ನಗರದ ರಸ್ತೆಗಳ ಸ್ಥಿತಿ ಬದಲಾಗದೇ ಇದ್ದಲ್ಲಿ, ನಾಗರಿಕರ ಜೊತೆಗೂಡಿ ಸರದಿ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸುತ್ತಾರೆ.

ನಗರದಲ್ಲಿರುವ ರಸ್ತೆಗಳ ಅಭಿವೃದ್ಧಿ ಎಂದೂ ಎಂಬುದು ತಿಳಿಯದಂತಾಗಿದೆ. ಇನ್ನೆಷ್ಟು ದಿನ ಇಂತಹ ರಸ್ತೆಗಳಲ್ಲಿ ತಿರುಗಾಡುವುದು ಎಂಬ ಚಿಂತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ನಾಗರಿಕರು. ಅಟೋ ಹತ್ತಿ ರಸ್ತೆಗಳ ದುಸ್ಥಿತಿಯ ದರ್ಶನ ಮಾಡಿದ ಶಾಸಕರಾದರೂ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.