ಗುರುವಾರ , ಮೇ 26, 2022
23 °C

ರಸ್ತೆ ಸುಧಾರಣೆಗೆ ಸಾರ್ವಜನಿಕರ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ಮೂಡಲಗಿಯಿಂದ ಗೋಕಾಕಿಗೆ ಹೋಗುವ ರಸ್ತೆ ಸೇರಿದಂತೆ ಅಥಣಿ ಮತ್ತು ಮಹಾಲಿಂಗಪೂರ ಕಡೆಗೆ ಹೋಗುವ ರಸ್ತೆಗಳು ಸಂಚಾರ ಮಾಡಲಾರದಷ್ಟು ಹದಗೆಟ್ಟು ಹೋಗಿದ್ದು, ರಸ್ತೆಗಳನ್ನು ಸುಧಾರಣೆ ಮಾಡಬೇಕು ಎಂದು ಮೂಡಲಗಿಯ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಸರ್ಕಾರ ಮತ್ತು ಇಲಾಖೆಯವರನ್ನು ಒತ್ತಾಯಿಸಿದ್ದಾರೆ.

ರಸ್ತೆಗಳ ಸುಧಾರಣೆಗಾಗಿ ಇದೆ ಫೆ. 21ರಿಂದ ಗುರ್ಲಾಪುರ ಕ್ರಾಸ್ ಬಳಿಯಲ್ಲಿ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಸಾರ್ವಜನಿಕರ ಸಂಘಟನೆಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೂಡಲಗಿಯಿಂದ ಗೋಕಾಕ, ಮಹಾಲಿಂಗಪುರ ಮತ್ತು ಅಥಣಿ ಕಡೆಗೆ ಸಾಗುವ ರಸ್ತೆಗಳ ತುಂಬೆಲ್ಲ ದೊಡ್ಡ ದೊಡ್ಡ ತಗ್ಗುಗಳು ನಿರ್ಮಾಣಗೊಂಡಿವೆ, ಡಾಂಭರೀಕರಣದ ರಸ್ತೆ ಎನ್ನುವ ಯಾವ ಕುರುಹುಗಳು ಈ ರಸ್ತೆಗಳಲ್ಲಿ ಉಳಿದಿಲ್ಲ ಮತ್ತು ಈ ರಸ್ತೆಗಳಲ್ಲಿ ಹೊಸದಾಗಿ ಸಂಚರಿಸುವವರಿಗೆ ಎಲ್ಲಿ ತಾವು ದಾರಿ ತಪ್ಪಿ ಬಂದಿರುವ ಅನುಭವದೊಂದಿಗೆ ಜನಪ್ರತಿನಿಧಗಳನ್ನು ಸೇರಿದಂತೆ, ಸರ್ಕಾರ ಮತ್ತು ಇಲಾಖೆಯವರಿಗೆ ಹಿಡಿಶಾಪವನ್ನು ಹಾಕುತ್ತಾರೆ.ಗೋಕಾಕ ತಾಲ್ಲೂಕಿನಲ್ಲಿ ಹಾಯುವ ಜತ್ತ- ಜಾಂಬೋಟಿ, ಸಂಕೇಶ್ವರ- ಕಮತಗಿ, ಮುಧೋಳ-ನಿಪ್ಪಾಣಿ, ಢವಳೇಶ್ವರ- ರಬಕವಿ ಇವುಗಳನ್ನು 2004ರಲ್ಲಿ ರಾಜ್ಯ ಹೆದ್ದಾರಿಗಳೆಂದು ಮೇಲ್ದರ್ಜೆಗೆ ಏರಿಸಿದ್ದು, ಇವುಗಳ ಕಾಮಗಾರಿಗಳು ಮಾತ್ರ ಕನಸಿನ ಮಾತಾಗಿದೆ. ಅದು ಅಲ್ಲದೆ ಇವು ಬೆಳಗಾವಿ, ಹುಬ್ಬಳ್ಳಿ, ಕೊಲ್ಲಾಪುರ, ವಿಜಾಪುರ, ಗುಲ್ಬರ್ಗಾ, ಬಾಗಲಕೋಟೆ ಹೀಗೆ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದು, ಮೂಡಲಗಿ ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ಸಂಚಾರ ಮಾಡುವುದು ತೊಂದರೆಯಾಗಿದೆ ಎಂದು ದೂರಿದ್ದಾರೆ.ಈ ಭಾಗದ ರಸ್ತೆಗಳ ಸಂಸ್ಯೆಯು ಹಲವಾರು ದಶಕಗಳ ಸಮಸ್ಯೆಯಾಗಿದೆ. ಈ ರಸ್ತೆಗಳನ್ನು ಸುಧಾರಿಸುವ ಬಗ್ಗೆ ಸಾಕಷ್ಟು ಬಾರಿ ಮನವಿಗಳನ್ನು ನೀಡಿದ್ದು, ಯಾವ ಜನಪ್ರತಿನಿಧಿಗಳು ಆಸಕ್ತಿ ವಹಿಸಿರುವುದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಫೆ. 21ರಿಂದ ಸತ್ಯಾಗ್ರಹವನ್ನು ಪ್ರಾರಂಭಿಸಿ ಇದಕ್ಕೆ ಸರ್ಕಾರ, ಇಲಾಖೆಯವರು ಸ್ಪಂದಿಸದಿದ್ದರೆ ಫೆ. 28ರಂದು ಸಂಪೂರ್ಣ ರಸ್ತೆ ಬಂದ್ ಚಳವಳಿಯನ್ನು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಸ್ತೆ ಸುಧಾರಣೆಯ ಹೋರಾಟವು ಸಾರ್ವಜನಿಕರ ಹಿತಕ್ಕಾಗಿ ಇದ್ದು, ಇದರ ಹಿಂದೆ ಯಾವದೇ ರಾಜ್ಯಕೀಯ ಉದ್ದೇಶಗಳು ಇಲ್ಲ. ಸಾರ್ವಜನಿಕರು ಹೋರಾಟದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.