ಬುಧವಾರ, ಮಾರ್ಚ್ 22, 2023
20 °C

ರಾಗಿ, ಬತ್ತದ ಬೆಳೆಗೆ ಮಳೆ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಗಿ, ಬತ್ತದ ಬೆಳೆಗೆ ಮಳೆ ಕಾಟ

ಹಿರೀಸಾವೆ: ರೈತರ ಕನಸುಗಳಿಗೆ ಜೀವ ತುಂಬಿದ್ದ ರಾಗಿ ಬೆಳೆಯನ್ನು ಅಕಾಲಿಕ ಮಳೆ ಹಾಳು ಮಾಡಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ.

ಮೂರ್ನಾಲ್ಕು ತಿಂಗಳುಗಳ ಕಾಲ ಕಾಲ ಶ್ರಮದಿಂದ ಕೃಷಿ ಮಾಡಿದ್ದ ರೈತ, ಉತ್ತಮ ಫಸಲು ಬಂದುದ್ದನ್ನು ಕಂಡು ಸಂತೋಷಗೊಂಡಿದ್ದ. ಆದರೆ, ಅಕಾಲಿಕವಾಗಿ ಬಿದ್ದ ಮಳೆಯಿಂದ ರಾಗಿ ಮತ್ತು ಬತ್ತವನ್ನು ಮನೆಗೆ ತರಲಾಗದೆ ತೊಂದರೆ ಅನುಭವಿಸುವಂತಾಗಿದೆ.



ಒಂದು ವಾರದಿಂದ ಮಳೆಯಿಲ್ಲದ್ದನ್ನು ಕಂಡ ರೈತರು ರಾಗಿ ಮತ್ತು ಬತ್ತದ ಬೆಳೆ ಕಟಾವು ಮಾಡಿದ್ದರು. ಶೀಘ್ರದಲ್ಲಿಯೇ ಗುಡ್ಡೆ ಹಾಕುವ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಜಿಟಿಜಿಟಿ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಟಾವು ಮಾಡದಿರುವ ರಾಗಿ, ಬತ್ತದ ಫಸಲು ಮಳೆಯಿಂದ ನೆಲಕ್ಕೆ ಬಿದ್ದಿದೆ. ಅಲ್ಲಲ್ಲಿ ಫಸಲು ಉದುರಿಹೋಗುತ್ತಿದೆ.



ಜಿಟಿಜಿಟಿ ಮಳೆಯಲ್ಲಿ ನೆನೆದು ರಾಗಿ ಕರಗುತ್ತಿದೆ. ನೆಲದಲ್ಲಿ ಉದುರಿದ ರಾಗಿ ಮೊಳಕೆಯೊಡೆಯುತ್ತಿದೆ. ಫಸಲು ನೆನೆದು ಗೆದ್ದಲು ಹತ್ತುತ್ತಿದೆ. ನೆನೆದ ಹುಲ್ಲನ್ನು ಜಾನುವಾರುಗಳು ತಿನ್ನಲು ಆಗುವುದಿಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.



ರಾಗಿ ಜೊತೆಯಲ್ಲಿ ಬೆಳೆದ ಅವರೆ ಮತ್ತು ಜೋಳಕ್ಕೂ ಮಳೆಯಿಂದ ತೊಂದರೆಯಾಗಿದೆ. ಚಳಿ ಹೆಚ್ಚಾದರೆ ಉತ್ತಮ ಅವರೆ ಬೆಳೆ ಬರುತ್ತಿತ್ತು. ಅಕಾಲಿಕ ಮಳೆಯಿಂದ ಚಳಿ ಕಡಿಮೆ ಆಗಿರುವುದರಿಂದ ಅವರೆ ಕಾಳು ಕಟ್ಟುವುದಿಲ್ಲ. ಇನ್ನು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಿಂದ ಕೆಲಸಕ್ಕೆ ಜನರು ಸಿಗದೆ ಮನೆ ಮಂದಿಯೆಲ್ಲ ಕಟಾವು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮಳೆ ಎಲ್ಲವನ್ನೂ ಹಾಳುಗೆಡವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.