ರಾಜಕೀಯ ನಿವೃತ್ತಿ- ಸೋಮಶೇಖರ ರೆಡ್ಡಿ ಸವಾಲು
ಬಳ್ಳಾರಿ: `ಸೋದರ ಜಿ.ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಪಡೆಯುವುದಕ್ಕಾಗಿ ಯಾರಿಗೂ ಹಣ ನೀಡಿಲ್ಲ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದು ರುಜುವಾತು ಆದಲ್ಲಿ ರಾಜಕೀಯ ನಿವೃತ್ತಿ ಪಡೆಯುವೆ~ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಹಾಕಲು ನಗರದ ಮತ ಕೇಂದ್ರವೊಂದಕ್ಕೆ ಭಾನುವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜನಾರ್ದನ ರೆಡ್ಡಿ ಜಾಮೀನಿಗಾಗಿ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಲಂಚ ನೀಡಿರುವ ಆರೋಪದ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶದ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ), ಎಫ್ಐಆರ್ನಲ್ಲಿ ತಮ್ಮ ಹೆಸರು ಸೇರಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಲಂಚದ ಕುರಿತು ನನಗೇನೂ ಗೊತ್ತಿಲ್ಲ. ಈ ವಿಷಯವಾಗಿ ನಾನು ಯಾರ ಜತೆಗೂ ಮಾತನಾಡಿಲ್ಲ. ~
ಇದೆಲ್ಲವೂ ರಾಜಕೀಯ ಕುತಂತ್ರ. ಶಾಸಕ ಸುರೇಶಬಾಬು ಸೇರಿದಂತೆ ನಾವು ಯಾವುದೇ ತಪ್ಪನ್ನು ಮಾಡಿಲ್ಲ. ಈ ಕುರಿತ ಆಧಾರಗಳಿದ್ದಲ್ಲಿ ಬಹಿರಂಗಪಡಿಸಲಿ~ ಎಂದರು.
`ನ್ಯಾಯಾಧೀಶರಿಗೆ ಲಂಚ ನೀಡುವ ಕುರಿತು ನಾವು ಎಂದೂ ಯೋಚಿಸಿಲ್ಲ. ಅದರ ಅಗತ್ಯವೇ ಇಲ್ಲ. ನಮಗೆ ಕಾನೂನಿನ ಮೇಲೆ ಗೌರವವಿದೆ. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಕಾನೂನು ಹೋರಾಟ ನಡೆಸುತ್ತೇವೆ~ ಎಂದು ಸ್ಪಷ್ಟಪಡಿಸಿದರು.
`ಜನಾರ್ದನ ರೆಡ್ಡಿಗೆ ಜಾಮೀನು ದೊರೆತ ದಿನ ನಾನು ಹೈದರಾಬಾದ್ನ ಸಿಬಿಐ ಕೋರ್ಟ್ನಲ್ಲಿದ್ದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.