ಶುಕ್ರವಾರ, ಮೇ 7, 2021
27 °C

ರಾಜ್ಯದಲ್ಲೂ ಸಕಾರಾತ್ಮಕ ಪರಿಣಾಮ: ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಬಿಜೆಪಿ ರಾಷ್ಟ್ರೀಯ ಚುನಾವಣಾ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರ ಚರಿಷ್ಮಾ ಮುಂದಿನ ಚುನಾವಣೆಯಲ್ಲಿ ಬಹು ದೊಡ್ಡ ಕೆಲಸ ಮಾಡಲಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.ಪಣಜಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಗಿಸಿ ಮರಳಿದ ಅವರು ಭಾನುವಾರ ಸಂಜೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ಕಳೆದ ಎರಡು ದಿನಗಳಿಂದ ಕಾರ್ಯಕಾರಣಿ ಸಭೆಯಲ್ಲಿ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ಘಟಕದ ಅಧ್ಯಕ್ಷರು ಸವಿಸ್ತಾರವಾಗಿ ಮುಂದಿನ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಪಕ್ಷದ ಕಾರ್ಯಸೂಚಿಯ ಬಗ್ಗೆ ಚರ್ಚಿಸಿದ್ದಾಗಿ ಅವರು ಹೇಳಿದರು.ಮುಖ್ಯವಾಗಿ ದೇಶದ ಆಂತರಿಕ ಭದ್ರತೆ ಮತ್ತು ಬಾಹ್ಯ ಭದ್ರತಾ ವ್ಯವಸ್ಥೆ ಬಲಪಡಿಸುವುದು ಜತೆಗೆ ಪ್ರಸ್ತುತ ರಾಜಕೀಯ ವಾತಾವರಣ ಹಾಗೂ ದೇಶದಲ್ಲಿ ಕಾಂಗ್ರೆಸ್ ದುರಾಡಳಿತದ ಬಗ್ಗೆ ಸಾಕಷ್ಟು ವಿಸ್ತ್ರತವಾಗಿ ಚರ್ಚಿಸಲಾಗಿದೆ ಎಂದರು.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ ನಡೆದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಮುಂದಿನ ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ನೂತನ ಅಧ್ಯಕ್ಷರು ಎಂದು ಆಯ್ಕೆ ಮಾಡಲಾಯಿತು. ಇದರಿಂದ ನಮ್ಮ ರಾಜ್ಯವೂ ಸೇರಿದಂತೆ ಎಲ್ಲ ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ. ಇದು ರಾಜ್ಯದಲ್ಲಿ ಕೂಡ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.ಪಕ್ಷದ ಹಿರಿಯ ಮುಖಂಡರೂ ಆಗಿರುವ ಎಲ್‌ಕೆ.ಅಡ್ವಾಣಿ ಕಾರ್ಯಕಾರಿಣಿ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, `ಅಡ್ವಾಣಿ ತಮ್ಮ ಅನಾರೋಗ್ಯದಿಂದಾಗಿ ಸಭೆಗೆ ಗೈರಾಗಿದ್ದರು' ಎಂದಷ್ಟೇ ಜೋಶಿ ಪ್ರತಿಕ್ರಿಯಿಸಿದರು.ಸೋಲಿನಿಂದ  ಪಾಠ ಕಲಿತಿದ್ದೇವೆ

`ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ' ಎಂದು ಹೇಳಿದ ಜೋಶಿ,  ರಾಜ್ಯದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರಿಗೆ ವರದಿ ಕಳುಹಿಸಲಾಗಿದೆ. ಜತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗೊಳಿಸಲು ವಿಶೇಷ ಕಾರ್ಯತಂತ್ರ ರಚಿಸಲಾಗಿದೆ ಎಂದರು.ಆದರೆ ಆ ಕಾರ್ಯತಂತ್ರವನ್ನು ಅವರು ಬಹಿರಂಗಗೊಳಿಸಲು ನಿರಾಕರಿಸಿದರು.ಬಿಜೆಪಿ ಸರ್ಕಾರದ ಜಾರಿಗೆ ತಂದಿದ್ದ ಹಲವು ಮಹತ್ವದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಲು ಉದ್ದೇಶಿಸಿರುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ರದ್ದು ಮಾಡಲು ಮುಂದಾಗಿರುವ  ಕಾಂಗ್ರೆಸ್‌ನ ಹುನ್ನಾರವನ್ನು ಖಂಡಿಸುವುದಾಗಿ ಹೇಳಿದರು.ಬಿಎಸ್‌ವೈ ಸೇರಿಸಿಕೊಳ್ಳುವುದಿಲ್ಲ

`ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಉದ್ದೇಶವನ್ನೇನಾದರೂ ಬಿಜೆಪಿ ಹೊಂದಿದೆಯೇ?' ಎನ್ನುವ ಪ್ರಶ್ನೆಗೆ ಉತ್ತರಿಸಿದ ಜೋಶಿ, `ಮುಂದಿನ ಲೋಕಸಭಾ ಚುನಾವಣೆಯನ್ನು  ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಲಾಗುತ್ತಿದ್ದರೂ, ಪಕ್ಷ ಬಿಟ್ಟು ಹೊರ ಹೋದವರನ್ನು ಮರಳಿ ಸೇರಿಸಿಕೊಳ್ಳುವ ಪ್ರಸ್ತಾವ ಸದ್ಯಕ್ಕೆ ಪಕ್ಷದ ಮುಂದಿಲ್ಲ' ಎಂದರು.ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಟಿ.ರವಿ, ಆರ್.ಅಶೋಕ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.