ಶನಿವಾರ, ಜೂನ್ 19, 2021
27 °C

ರಾಜ್ಯದವರೇ ಇರಲಿ: ಬಿಜೆಪಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ತನ್ನ ಸಂಖ್ಯಾಬಲದ ಆಧಾರದ ಮೇಲೆ ಎರಡು ಸ್ಥಾನಗಳನ್ನು ಗೆಲ್ಲಲಿದ್ದು, ಈ ಎರಡಕ್ಕೂ ರಾಜ್ಯದವರನ್ನೇ ಕಣಕ್ಕೆ ಇಳಿಸಬೇಕು ಎಂದು ಪಕ್ಷದ ವರಿಷ್ಠರನ್ನು ಕೋರಲು ಶನಿವಾರ ನಡೆದ ಪಕ್ಷದ ರಾಜ್ಯ ಚುನಾವಣಾ ಸಮಿತಿ ನಿರ್ಧರಿಸಿದೆ.



ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದ ಅನಂತಕುಮಾರ್, ಸಚಿವರಾದ ಜಗದೀಶ ಶೆಟ್ಟರ್, ಶೋಭಾ ಕರಂದ್ಲಾಜೆ ಸೇರಿದಂತೆ ಇತರರು ಹಾಜರಿದ್ದರು.



ಒಂದು ಸ್ಥಾನವನ್ನು ರಾಜ್ಯದವರಿಗೆ ಮತ್ತೊಂದು ಸ್ಥಾನವನ್ನು ರಾಷ್ಟ್ರೀಯ ಮುಖಂಡರಿಗೆ ನೀಡುವ ಬಗ್ಗೆ ಈ ಮೊದಲು ತೀರ್ಮಾನಿಸಲಾಗಿತ್ತು. ಇದಕ್ಕೆ ಆಕ್ಷೇಪ ಬಂದ ಕಾರಣಕ್ಕೆ ಎರಡೂ ಸ್ಥಾನಗಳನ್ನು ಈ ಸಲ ರಾಜ್ಯದವರಿಗೇ ನೀಡುವಂತೆ ಕೇಂದ್ರದ ಮುಖಂಡರಲ್ಲಿ ಮನವಿ ಮಾಡಲು ಸಭೆ ನಿರ್ಧರಿಸಿತು.



`ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಭಾನುವಾರ ಪುನಃ ಸಭೆ ಸೇರಿ ಹೆಸರುಗಳನ್ನು ಅಂತಿಮಗೊಳಿಸಲಾಗುವುದು~ ಎಂದು ಈಶ್ವರಪ್ಪ ಹೇಳಿದರು.



ರಾಜ್ಯಸಭೆಯ ಹಾಲಿ ಸದಸ್ಯ ಕೆ.ಬಿ.ಶಾಣಪ್ಪ ಅವರನ್ನೇ ಮತ್ತೆ ಕಣಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆದಿದೆ. 2ನೇ ಅಭ್ಯರ್ಥಿಯಾಗಿ ತಮಿಳುನಾಡಿನ ನಿವೃತ್ತ ಐಎಎಸ್ ಅಧಿಕಾರಿ ಆರ್.ರಾಮಕೃಷ್ಣ ಅವರನ್ನು ಕಣಕ್ಕೆ ಇಳಿಸುವ ಕುರಿತು ವರಿಷ್ಠರ ವಲಯದಲ್ಲಿ ಚರ್ಚೆಯಾಗಿದೆ. ಆದರೆ, ರಾಜ್ಯದ ಮುಖಂಡರು ಲೋಕಸಭೆಯ ಮಾಜಿ ಉಪಾಧ್ಯಕ್ಷ ಎಸ್.ಮಲ್ಲಿಕಾರ್ಜುನಯ್ಯ, ಸುಧೀಂದ್ರ ಕುಲಕರ್ಣಿ, ಬಸವರಾಜ ಪಾಟೀಲ್ ಸೇಡಂ ಸೇರಿದಂತೆ ಇತರ ಕೆಲ ಮುಖಂಡರ ಹೆಸರುಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.