ಮಂಗಳವಾರ, ಮೇ 11, 2021
27 °C

ರಾಜ್ಯದ ಪಾಲಿನ ಹೆಚ್ಚಿನ ನೀರು ಬಿಡುಗಡೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಚ್ಚುತ್ತಿರುವ ಬೆಂಗಳೂರು ನಗರದ ನೀರಿನ ಬೇಡಿಕೆಗಾಗಿ ರಾಜ್ಯದ ಪಾಲಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತಜ್ಞರ ಸಮಿತಿಯು ಕಾವೇರಿ ನ್ಯಾಯ ಮಂಡಳಿಗೆ ಮನವಿ ಸಲ್ಲಿಸಿದೆ.ರಾಜ್ಯದ ಪಾಲಿನ ನೀರಿನ ಬಳಕೆಯನ್ನು 2021 ರ ವರೆಗೆ 8.19 ಟಿಎಂಸಿ ಹಾಗೂ ಹೆಚ್ಚುವರಿ ಲಭ್ಯತೆಯ ಅನುಸಾರ 10 ಟಿಎಂಸಿ ವರೆಗೆ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿನ ಸಮಿತಿಯ ಮಧ್ಯಂತರ ವರದಿಯಲ್ಲಿ ಮನವಿ ಮಾಡಲಾಗಿದೆ.ಸುಮಾರು 6,500 ಕೋಟಿ ರೂ.ವೆಚ್ಚದ ಪ್ರತಿದಿನ 650 ದಶಲಕ್ಷ ಲೀಟರ್ ನೀರು ಪೂರೈಕೆಯ ಎರಡು ಹಂತಗಳ ಯೋಜನೆ (ಎಂಎಲ್‌ಡಿ)ಯ ಕಾರ್ಯಾರಂಭ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಹುಟ್ಟಿ ಕೇರಳದ ಬರಪೊಳೆ ನದಿಯನ್ನು ಸೇರುವ ಕೊಂಗನಹೊಳೆ ಮತ್ತು ಕಾಕಟ್ಟುಹೊಳೆಗಳನ್ನು ಸುಮಾರು 250 ಕೋಟಿ ರೂ.ಗಳ ವೆಚ್ಚದಲ್ಲಿ ಮಾರ್ಗ ಬದಲಿಸಿ ಲಕ್ಷ್ಮಣತೀರ್ಥ ನದಿಯ ಮೂಲಕ ಕೃಷ್ಣರಾಜ ಸಾಗರಕ್ಕೆ ತರುವ ಮೂಲಕ ನಗರದ ನೀರಿನ ಸಮಸ್ಯೆಯನ್ನು ತಗ್ಗಿಸಲು ಸಾಧ್ಯವಿದೆ ಎಂದು ಸಮಿತಿಯು ಶಿಫಾರಸು ಮಾಡಿದೆ.ವಾಣಿಜ್ಯ ಬಳಕೆಯ ಉದ್ದೇಶದ ಹೋಟೆಲ್ ಮತ್ತು ಅಪಾರ್ಟ್‌ಮೆಂಟ್‌ಗಳ ಶೌಚಾಲಯಗಳಿಗೆ ಬಳಸಲು ಪ್ರತ್ಯೇಕ ನೀರು ಪೂರೈಕೆಯ ಪೈಪ್‌ಲೈನ್‌ಗಳ ಅಳವಡಿಕೆಯಿಂದ ನೀರಿನ ವೆಚ್ಚವನ್ನು ಶೇಕಡಾ 48 ರಿಂದ 16 ಕ್ಕೆ ಇಳಿಸಬಹುದು. 2051 ರವರೆಗಿನ ದೀರ್ಘಾವಧಿಯ ಯೋಜನೆಗಳ ಅನ್ವಯ ರಾಜ್ಯಕ್ಕೆ 10 ರಿಂದ 15 ಟಿಎಂಸಿ ನೀರಿನ ಬಳಕೆ ಅವಕಾಶ ಮಾಡಿಕೊಡಲು ಸಮಿತಿಯು ಶಿಫಾರಸ್ಸಿನಲ್ಲಿ ತಿಳಿಸಿದೆ.ಮೇಕೆದಾಟು ಬಳಿಯಲ್ಲಿ ನೀರು ಸಂಗ್ರಹಣಾ ಘಟಕ ಸ್ಥಾಪನೆಗೆ ಹಾಗೂ ಎತ್ತಿನಹೊಳೆ ಮತ್ತು ನೇತ್ರಾವತಿ ನದಿಗಳ ಪಥ ಬದಲಿಸಿ 12 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ನೇತ್ರಾವತಿ ನದಿ ಹರಿವನ್ನು ಹೇಮಾವತಿಗೆ ಜೋಡಿಸುವ ಪ್ರಸ್ತಾವವನ್ನೂ ಸಮಿತಿ ನೀಡಿದೆ.ಚರಂಡಿಗಳ ಕೊಳಕು ನೀರನ್ನು ಪರಿವರ್ತಿಸಿ ಖಾಲಿ ಇರುವ ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲ ಮರು ಪೂರಣ ಹಾಗೂ ಮಳೆ ನೀರು ಸಂಗ್ರಹದ ಬಗ್ಗೆಯೂ ಸಮಿತಿ ವರದಿಯಲ್ಲಿ ತಿಳಿಸಿದೆ.ಮುಂದಿನ ದೀರ್ಘಾವಧಿ ಯೋಜನೆಗಳಲ್ಲಿ ರೂ 55 ಸಾವಿರ ಕೋಟಿಗಳ 30 ಟಿಎಂಸಿ ನೀರು ಬಳಕೆಯ ನೇತ್ರಾವತಿ ನದಿ ನೀರು ಬಳಕೆ, ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ನೀರನ್ನು ನಗರಕ್ಕೆ ತರುವ ಯೋಜನೆಗಳ ಪ್ರಸ್ತಾವನೆಯನ್ನೂ ಸಮಿತಿ ನೀಡಿದೆ.ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ ಕೇಂದ್ರಕ್ಕೆ ಸಲ್ಲಿಸಿರುವ ಮಹಾನದಿ ಮತ್ತು ವೈಯಪ್ಪಾರ್ ನದಿ ಜೋಡಣೆ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಗೆ ಹರಿಯುವ ನದಿಗಳ ಜೋಡಣೆ ಹಾಗೂ ಕೃಷ್ಣಾ ಮತ್ತು ಪೆನ್ನಾರ್ ನದಿ ಜೋಡಣೆ ಪ್ರಸ್ತಾವನೆಜಾರಿಗೆ  ಸಮಿತಿ ಶಿಫಾರಸು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.