ಶುಕ್ರವಾರ, ಮೇ 7, 2021
26 °C

ರಾಮ... ರಾಮ... ಜಯ ಜಯ ರಾಮ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಭಾನುವಾರ ಸಡಗರ ಸಂಭ್ರಮಗಳಿಂದ ರಾಮನವಮಿಯನ್ನು ಆಚರಿಸಲಾಯಿತು. ಭಕ್ತರು ಬೆಳಿಗ್ಗಿನಿಂದಲೇ ರಾಮಮಂದಿರಗಳತ್ತ ಹರಿದು ಬಂದು ರಾಮನವಮಿಯ ಆಚರಣೆಯಲ್ಲಿ ಭಾಗಿಯಾದರು. ಪಲ್ಲಕ್ಕಿ ಸೇವೆ, ರಥೋತ್ಸವ, ಮೆರವಣಿಗೆಗಳಲ್ಲಿ ಪಾಲ್ಗೊಂಡ ಭಕ್ತಿ ರಸದಲ್ಲಿ ಮಿಂದೆದ್ದರು. ಪಾನಕ, ಪನಿವಾರಗಳ ಪ್ರಸಾದ ಸವಿದು ಮತ್ತೊಂದು ರಾಮನವಮಿಗೆ ಸಾಕ್ಷಿಯಾದರು.

ರಾಮನವಮಿಯ ಅಂಗವಾಗಿ ನಗರದ ರಾಜಾಜಿನಗರದ ರಾಮಮಂದಿರ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯ, ಮಹಾಲಕ್ಷ್ಮಿ ಪುರದ ಪ್ರಸನ್ನ ವೀರಾಂಜನೇಯ ದೇವಾಲಯ, ರಾಗಿಗುಡ್ಡದ ಆಂಜನೇಯ ದೇವಾಲಯಗಳೂ ಸೇರಿದಂತೆ ಎಲ್ಲ ದೇವಾಲಯಗಳಲ್ಲಿಯೂ ವಿಶೇಷ ಅಲಂಕಾರ, ಪೂಜೆಗಳು ನಡೆದವು.

ಭಕ್ತ ಸಾಗರದ ಕಾರಣದಿಂದ ಎಲ್ಲ ದೇವಾಲಯಗಳಲ್ಲೂ ಭಾನುವಾರ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ದೇವರ ದರ್ಶನ ಪಡೆದ ಭಕ್ತರು ದೇವಾಲಯಗಳಲ್ಲಿ ಹರಿಯುತ್ತಿದ್ದ ರಾಮಭಜನೆಗೆ ತಮಗರಿವಿಲ್ಲದಂತೇ ದನಿಯಾದರು.

ನಗರದ ಇಸ್ಕಾನ್ ದೇವಾಲಯದಲ್ಲಿ ಸೀತಾ ಕಲ್ಯಾಣ, ರಾಮನಾಮ ಪಾರಾಯಣಗಳೂ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಈ ಬಾರಿಯ ರಾಮನವಮಿಯು ವಾರಾಂತ್ಯವಾದ ಭಾನುವಾರವೇ ಬಂದಿದ್ದರಿಂದ ದೇವಾಲಯಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು.

ನಗರದ ಸಂಗೀತ ಪ್ರಿಯರಿಗೆ ಪಾನಕದಷ್ಟೇ ಸಿಹಿ ರಾಮೋತ್ಸವದ ಸಂಗೀತ ಕಛೇರಿಗಳು. ನಗರದ ಚಾಮರಾಜಪೇಟೆ, ವೈಯ್ಯಾಲಿಕಾವಲ್, ರಾಜಾಜಿನಗರದ ವಾಣಿ ವಿದ್ಯಾಕೇಂದ್ರಗಳೂ ಸೇರಿದಂತೆ ಹಲವು ಕಡೆಗಳಲ್ಲಿ ಭಾನುವಾರ ನಡೆದ ರಾಮೋತ್ಸವದ ಸಂಗೀತ ಕಛೇರಿಗಳಲ್ಲಿ ಸಾವಿರಾರು ಸಂಖ್ಯೆಯ ಸಂಗೀತ ಪ್ರೇಮಿಗಳು ಪಾಲ್ಗೊಂಡು ರಾಮಾಮೃತದೊಂದಿಗೆ ಸಂಗೀತದ ನಾದಾಮೃತವನ್ನೂ ಸವಿದರು.

ಕೇವಲ ದೇವಾಲಯಗಳಲ್ಲಷ್ಟೇ ಅಲ್ಲದೇ ನಗರದ ಹಲವು ಬೀದಿಗಳಲ್ಲಿ ಸಾರ್ವಜನಿಕರು ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ಹಂಚಿ ರಾಮನವಮಿಯನ್ನು ಆಚರಿಸಿದರು. ಇನ್ನು ನಗರದ ಕೆಲವು ಮುಸ್ಲಿಂ ಬಾಂಧವರೂ ಧರ್ಮ ಭೇದ ಮರೆತು ರಾಮನವಮಿಯ ಆಚರಣೆಯಲ್ಲಿ ಭಾಗಿಗಳಾಗಿದ್ದು ವಿಶೇಷವಾಗಿತ್ತು. ಪಾನಕ, ಮಜ್ಜಿಗೆ ಹಾಗೂ ಕೋಸಂಬರಿಗಳನ್ನು ಸವಿದು ಧರ್ಮ ಸಾಮರಸ್ಯದ ಸಂದೇಶ ಸಾರಿದರು.

ರಾಮ, ಹನುಮ ವೇಷಧಾರಿಗಳು ನಗರದ ವಿವಿಧ ಕಡೆಗಳಲ್ಲಿ ಪಾನಕ, ಮಜ್ಜಿಗೆಯನ್ನು ಹಂಚುವ ಮೂಲಕ ರಾಮನವಮಿಯನ್ನು ಆಚರಿಸಿದ್ದು ವಿಶೇಷವಾಗಿತ್ತು. ಶಿವಾಜಿನಗರ, ಮೆಜೆಸ್ಟಿಕ್ ಹಾಗೂ ಕೆ.ಆರ್.ಮಾರುಕಟ್ಟೆಯ ಬಸ್ ನಿಲ್ದಾಣಗಳಲ್ಲಿ ವೇಷಧಾರಿಗಳು ಪ್ರಯಾಣಿಕರಿಗೆ ಬಸ್‌ಗಳಲ್ಲಿಯೇ ಪಾನಕ ಹಂಚಿ ರಾಮನವಮಿಯನ್ನು ಆಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.