ಸೋಮವಾರ, ಏಪ್ರಿಲ್ 12, 2021
23 °C

ರಾಷ್ಟ್ರದ ಪ್ರಥಮ ಪ್ರಜೆ ಆಯ್ಕೆ : ಇನ್ನೂ ಏಕೆ ಬ್ಯಾಲಟ್ ಪೇಪರ್ ಅವಲಂಬನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಸಂಸದರು, ಶಾಸಕರ ಆಯ್ಕೆಗೆ ನಡೆವ ಚುನಾವಣೆಗಳಲ್ಲಿ ಈಗಾಗಲೇ ಎಲೆಕ್ಟ್ರಾನಿಕ್ ಮತಯಂತ್ರಗಳು ಕಡ್ಡಾಯವಾಗಿ ಬಳಕೆಯಾಗುತ್ತಿವೆ. ಆದರೆ, ರಾಷ್ಟ್ರಪತಿ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಮಾತ್ರ ಹಿಂದಿನಂತೆ ಇನ್ನೂ ಬ್ಯಾಲಟ್ ಪೇಪರ್ ಪದ್ಧತಿಯೇ ಚಾಲ್ತಿಯಲ್ಲಿದೆ. ಹೀಗೇಕೆ?-ರಾಷ್ಟ್ರಪತಿ ಆಯ್ಕೆಗೆ ಅಂಕಿತ ಹಾಕುವಾಗ ಪ್ರತಿಯೊಬ್ಬ ಮತದಾರನೂ ತನ್ನ ಮೊದಲ ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳನ್ನು ದಾಖಲಿಸಬೇಕಾಗಿರುವುದೇ ಇದಕ್ಕೆ ಕಾರಣ.ರಾಷ್ಟ್ರಪತಿ ಆಯ್ಕೆಗೆ ಸಿದ್ಧಪಡಿಸುವ ಬ್ಯಾಲಟ್ ಪೇಪರ್‌ನಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ. ಎರಡು ಕಾಲಂಗಳು (ಲಂಬ ಸಾಲುಗಳು) ಮಾತ್ರ ಇರುತ್ತವೆ. ಒಂದು ಸಾಲಿನಲ್ಲಿ ಅಭ್ಯರ್ಥಿಗಳ ಹೆಸರು ಇರುತ್ತದೆ. ಮತ್ತೊಂದು ಸಾಲು ಖಾಲಿ ಇರುತ್ತದೆ. ಮತದಾರರು ಈ ಖಾಲಿ ಸಾಲಿನ ಪೆಟ್ಟಿಗೆಗಳಲ್ಲಿ ತಮ್ಮ ಆದ್ಯತೆಯನ್ನು 1 ಅಥವಾ 2 ಎಂದು ದಾಖಲಿಸಬೇಕಾಗುತ್ತದೆ.ಇನ್ನು, ವಿಧಾನಸಭಾ ಶಾಸಕರು ಆಯಾಯ ರಾಜ್ಯಗಳ ವಿಧಾನಸಭೆಯಲ್ಲಿ ಮತ ಚಲಾಯಿಸುತ್ತಾರೆ. ನಂತರ ಈ ಪೆಟ್ಟಿಗೆಗಳನ್ನು ಎಣಿಕೆಗಾಗಿ ದೆಹಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಚುನಾವಣೆ ನಂತರ ಫಲಿತಾಂಶ ಪ್ರಕಟವಾಗುವುದಕ್ಕೆ ಮೂರು ದಿನ ಹಿಡಿಯುವುದಕ್ಕೆ ಇದು ಕಾರಣ.ಸಂಸದರು ದೆಹಲಿಯಲ್ಲಿ ಅಥವಾ ತಾವು ಆಯ್ಕೆಯಾಗಿರುವ ರಾಜ್ಯಗಳ ವಿಧಾನಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸಬಹುದು. ಆದರೆ ವಿಧಾನಸಭೆಯಲ್ಲಿ ಮತ ಚಲಾಯಿಸುವುದಾದರೆ ಅದಕ್ಕೆ ಮುಂಚಿತವಾಗಿಯೇ ಅನುಮತಿ ಪಡೆದಿರಬೇಕಾಗುತ್ತದೆ.ಮೊದಲ ಸುತ್ತಿನ ಎಣಿಕೆಯಲ್ಲಿ, ಮೊದಲ ಪ್ರಾಶಸ್ತ್ಯದ ಮತಗಳನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ. ಯಾವುದೇ ಅಭ್ಯರ್ಥಿ ಪರ ಶೇ 50ಕ್ಕಿಂತ ಹೆಚ್ಚು  ಮತಗಳು ಚಲಾವಣೆಗೊಂಡಿದ್ದರೆ, ಅವರನ್ನು ವಿಜಯಿ ಅಭ್ಯರ್ಥಿಯೆಂದು ಘೋಷಿಸಲಾಗುತ್ತದೆ.ಮೊದಲ ಸುತ್ತಿನ ಎಣಿಕೆಯಲ್ಲಿ ಯಾವ ಅಭ್ಯರ್ಥಿಯ ಪರವಾಗಿಯೂ ಸ್ಪಷ್ಟ ಫಲಿತಾಂಶ ಪ್ರಕಟವಾಗದಿದ್ದರೆ ಆಗ ಎರಡನೇ ಪ್ರಾಶಸ್ತ್ಯದ ಮತಗಳನ್ನು ಗಣನೆಗೆ ತೆಗೆದುಕೊಂಡು, ಅದನ್ನು ಮೊದಲನೇ ಪ್ರಾಶಸ್ತ್ಯದ ಮತಗಳಿಗೆ ಕೂಡಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.