ರಾಷ್ಟ್ರೀಯ ನೀರಿನ ನೀತಿ ತಿರಸ್ಕರಿಸಲು ಒತ್ತಾಯ

ಗುರುವಾರ , ಜೂಲೈ 18, 2019
28 °C

ರಾಷ್ಟ್ರೀಯ ನೀರಿನ ನೀತಿ ತಿರಸ್ಕರಿಸಲು ಒತ್ತಾಯ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ `2012ರ ರಾಷ್ಟ್ರೀಯ ನೀರಿನ ನೀತಿ~ಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ನಗರದ ಪುರಭವನದ ಬಳಿ ಶುಕ್ರವಾರ ಪ್ರತಿಭಟನೆ ಮಾಡಿದರು.

`ದೇಶದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದ್ದು, ನೀರನ್ನು ಖಾಸಗಿ ಒಡೆತನಕ್ಕೆ ನೀಡುವುದರಿಂದ ಮಾತ್ರ ಸಮಸ್ಯೆಯನ್ನು ನೀಗಿಸಬಹುದು ಎಂದು ರಾಷ್ಟ್ರೀಯ ನೀರಿನ ನೀತಿ ಹೇಳುತ್ತಿದೆ. ಆ ನೀತಿಯನ್ನು ಒಪ್ಪಿಕೊಂಡಿರುವ ಸರ್ಕಾರ ನೀರಿನ ಮೂಲಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಲು ಮುಂದಾಗಿದೆ~ ಎಂದು ಪ್ರತಿಭಟನಾಕಾರರು ಆರೋಪಿಸಿದರು.

`ಈಗಾಗಲೇ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸರ್ಕಾರ, ಖಾಸಗಿ ಕಂಪೆನಿಗಳ ಜತೆ ಕೈ ಜೋಡಿಸಿ ಅಂತರ್ಜಲ ಸೇರಿದಂತೆ ನೀರಿನ ಮೂಲಗಳನ್ನು ಲೂಟಿ ಮಾಡಲು ಹೊರಟಿದೆ. ಹನಿ ನೀರಿಗೂ ಬೆಲೆ ಕಟ್ಟಿ ದಲ್ಲಾಳಿಯಂತೆ ವರ್ತಿಸುತ್ತಿರುವ ಸರ್ಕಾರ, ಈಗಾಗಲೇ ಮೈಸೂರು, ಗುಲ್ಬರ್ಗ, ಬೆಳಗಾವಿ ಸೇರಿದಂತೆ ಹಲವು ನಗರಗಳಲ್ಲಿ ಈ ನೀತಿಯನ್ನು ಜಾರಿಗೆ ತಂದಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ನೀತಿಯನ್ನು ದೇಶವ್ಯಾಪಿಗೊಳಿಸುವುದಾಗಿ ಪಣ ತೊಟ್ಟಿದೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ~ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ನೀರಿನ ನೀತಿಯಿಂದ ಕೃಷಿ ವಲಯಕ್ಕೆ ಯಾವುದೇ ಆದ್ಯತೆ ಇಲ್ಲ. ಈ ನೀತಿ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ದೇಶದ ನೀರನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈ ನೀತಿಯು ದುಡ್ಡಿದ್ದವರ ಮತ್ತು ವಂಚಿತ ಸಮುದಾಯಗಳ ನಡುವೆ ತಾರತಮ್ಯ ಉಂಟು ಮಾಡುವಂತಿದ್ದು, ಕೂಡಲೇ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್, ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry