ಮಂಗಳವಾರ, ಜನವರಿ 21, 2020
27 °C

ರಾಷ್ಟ್ರೀಯ ಹೆದ್ದಾರಿ ಸಂಚಾರ: ಕಾದಿದೆ ಸಂಚಕಾರ

ಪ್ರಜಾವಾಣಿ ವಿಶೇಷ ವರದಿ/ Updated:

ಅಕ್ಷರ ಗಾತ್ರ : | |

ನಂಜನಗೂಡು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ವರ್ಷ ಭಾನುವಾರದಿಂದ ಜನವರಿ 7ರವರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಅಂದರೆ ಪ್ರತಿಯೊಬ್ಬ ಪಾದಚಾರಿ ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಸಂಬಂಧಿಸಿದ ಇಲಾಖೆ ನಿರ್ವಹಿಸಬೇಕಾದ ಜವಾಬ್ದಾರಿ ನೆನಪಿಸುವ ಜತೆಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಈ ಸಪ್ತಾಹದ ಉದ್ದೇಶ.ಆದರೆ, ನಂಜನಗೂಡು ಪಟ್ಟಣದಲ್ಲಿ ಹಾದಿರುವ ರಾಷ್ಟ್ರೀಯ ಹೆದ್ದಾರಿ 212ರ ಎರಡೂ ಬದಿಗಳಲ್ಲಿ ಆಟೋ ರಿಪೇರಿ, ಹೋಟೆಲ್, ಹಣ್ಣು ಮಾರಾಟ ಅಡ್ಡೆ ಸೇರಿದಂತೆ ಹಲವು ಅಂಗಡಿಗಳು ತಲೆ ಎತ್ತಿ ಸುರಕ್ಷತೆಗೆ ಸವಾಲೊಡ್ಡಿವೆ. ಸುಮಾರು 60 ಸಾವಿರ ಜನಸಂಖ್ಯೆ ಹೊಂದಿರುವ ಈ ಪಟ್ಟಣದಲ್ಲಿ ಪಾದಚಾರಿಗಳಿಗೆ ವ್ಯವಸ್ಥಿತ ಫುಟ್‌ಪಾತ್  ನಿರ್ಮಿಸಿಲ್ಲ. ಈ ಹೆದ್ದಾರಿಯು ಪಟ್ಟಣವನ್ನು ಪೂರ್ವ- ಪಶ್ಚಿಮವಾಗಿ ವಿಭಾಗ ಮಾಡಿದೆ. ಪರಸ್ಪರ ದಿಕ್ಕಿಗೆ ಸಂಚರಿಸುವಾಗ ವಾಹನಗಳ ದಟ್ಟಣೆಯನ್ನು ನೋಡಿಕೊಂಡು ರಸ್ತೆ ದಾಟಬೇಕು. ನಿತ್ಯ ಈ ಮಾರ್ಗದಲ್ಲಿ 30- 35 ಸಾವಿರ ವಾಹನಗಳು ಎಡಬಿಡದೆ ಸಂಚರಿಸುತ್ತವೆ. ಆದರೆ, ಪಟ್ಟಣ ಪರಿಮಿತಿಯಲ್ಲಿ ವಾಹನಗಳ ವೇಗಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಇದರಿಂದ ಬಹುಪಾಲು ವಾಹನಗಳು ವೇಗವಾಗಿಯೇ ಸಂಚರಿಸುತ್ತವೆ. ಹಾಗಾಗಿ ಇಲ್ಲಿ ಪಾದಚಾರಿಗಳು ಮತ್ತು ಸೈಕಲ್ ಸವಾರರು ಸಾಹಸ ಮಾಡಿ ರಸ್ತೆ ದಾಟಿದರೆಂದರೆ ಕಂಟಕವನ್ನು ಗೆದ್ದಷ್ಟೇ ನಿರುಮ್ಮಳ.ಪಾದಚಾರಿಗಳಿಗೆ ಪ್ರಮುಖವಾಗಿ ವಿಶ್ವೇಶ್ವರಯ್ಯ ವೃತ್ತ, ಹೆಜ್ಜಿಗೆ ಎಂ. ಲಿಂಗಣ್ಣ ವೃತ್ತ, ಜೂನಿಯರ್ ಕಾಲೇಜ್ ಮುಂಭಾಗ, ಸಿಟಿಜನ್ ಶಾಲೆಗೆ ಹೋಗುವ ಕೂಡು ರಸ್ತೆಯಲ್ಲಿ ಜೀಬ್ರಾಪಟ್ಟಿ ಗುರುತು ಮಾಡಿಲ್ಲ. ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ರಸ್ತೆ ದಾಟಲು ಅಪಾಯ ಎದುರಿಸಬೇಕಾಗಿದೆ. ಅದರಲ್ಲೂ ಪಟ್ಟಣದ ಹುಲ್ಲಹಳ್ಳಿ ನಾಲೆ ಬಳಿಯಿಂದ ಗ್ರಾಮಾಂತರ ಪೊಲೀಸ್ ಠಾಣೆ ನಡುವಣ ಮಾರ್ಗದಲ್ಲಿ ಜನ ಸಂಚಾರ ಮತ್ತು ವಾಹನ ದಟ್ಟಣೆ ಅಧಿಕವಾಗಿದೆ. ಆದರೆ, ವಾಹನಗಳು ಪಟ್ಟಣ ಪರಿಮಿತಿಯಲ್ಲಿ ಕನಿಷ್ಠ ವೇಗದಲ್ಲಿ ಮಾತ್ರವೇ ಸಂಚರಿಸಬೇಕು ಎಂಬ ಎಚ್ಚರಿಕೆ ನೀಡುವ ಸೂಚನಾ ಫಲಕವನ್ನು ಸಂಬಂಧಿಸಿದ ಇಲಾಖೆಯವರು ಈತನಕ ಅಳವಡಿಸಿಲ್ಲ. ಈ ಹೆದ್ದಾರಿಯ ಪಟ್ಟಣ ಪರಿಮಿತಿ ಮತ್ತು ಹೊರವಲಯದಲ್ಲಿ ವರ್ಷದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಸಾವು, ನೋವುಗಳು ಉಂಟಾಗಿವೆ. ಆದರೆ, ಮೈಸೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಕಚೇರಿ ಹೊಂದಿರುವ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ರಸ್ತೆ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)