ಬುಧವಾರ, ಮೇ 19, 2021
22 °C

ರಾಹುಲ್ ಭಟ್ ಬೀದರ್ ಪ್ರಚಾರ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:ಬೀದರ್ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳನ್ನು ದೇಶದೆಲ್ಲೆಡೆ ಪರಿಚಯಿಸುವ ನಿಟ್ಟಿನಲ್ಲಿ ಚಿತ್ರನಟ ರಾಹು ಲ್ ಭಟ್ ಅವರು ಪ್ರಚಾರ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಹೇಳಿದರು.ತಮ್ಮ ಕೋರಿಕೆಯ ಹಿನ್ನೆಲೆಯಲ್ಲಿ ರಾಹುಲ್ ಪ್ರಚಾರ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.ಬೀದರ್ ಹೈದರಾಬಾದ್‌ಗಿಂತ ಹೆಚ್ಚಿನ ಐತಿಹಾಸಿಕ ಮಹತ್ವ ಹೊಂದಿರುವ ಜಿಲ್ಲೆಯಾಗಿದೆ. ಹೈದರಾಬಾದ್‌ಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅದಕ್ಕಿಂತ ಶ್ರೇಷ್ಠ ಸ್ಮಾರಕಗಳಿವೆ. ಬೀದರ್‌ಗೆ ಬಂದವರು ಬಸವಕಲ್ಯಾಣಕ್ಕೂ ಭೇಟಿ ಕೊಡುತ್ತಾರೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.ಹೈದರಾಬಾದ್‌ಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿಂದ ಬೀದರ್ 150 ಕಿ.ಮೀ. ಮಾತ್ರ ದೂರದಲ್ಲಿದೆ. ಅವರನ್ನು ಬೀದರ್‌ಗೆ ಕರೆತರುವ ನಿಟ್ಟಿನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣ, ಗೋಲ್ಕುಂಡ ಸೇರಿದಂತೆ ವಿವಿಧೆಡೆಗಳಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಕುರಿತು ಪ್ರಚಾರ ಮಾಡಲಾಗುವುದು. ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಬೇರೆ ಬೇರೆ ಪ್ರವಾಸಿ ತಾಣಗಳಲ್ಲಿಯು ಬೀದರ್‌ನ ಸ್ಮಾರಕಗಳನ್ನು ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು.ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹೈದರಾಬಾದ್- ಬೀದರ್ ನಡುವೆ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ನಿರ್ಮಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣವಾದರೆ ಹೈದರಾಬಾದ್‌ನಿಂದ ಒಂದು ತಾಸಿನಲ್ಲಿ ಬೀದರ್‌ಗೆ ಬರಬಹುದಿತ್ತು. ಆದರೆ, ಅಧಿಕಾರಿಗಳು ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರವಾಸಿಗರು ಉಳಿದುಕೊಳ್ಳಲು ಉತ್ತಮ ದರ್ಜೆಯ ಹೊಟೇಲ್‌ಗಳು ಬೀದರ್‌ನಲ್ಲಿ ಇಲ್ಲ. ವೈಯಕ್ತಿಕವಾಗಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಹಣ ಹರಿದಾಡುತ್ತದೆ. ಜನರ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತದೆ. ಬೀದರ್ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ಏನೇನು ಮಾಡಬಹುದು ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.

ತಾವು ಸ್ಥಾಪಿಸಿರುವ ಕರ್ನಾಟಕ ಮಕ್ಕಳ ಪಕ್ಷವು ತಾಯಿ ಕನ್ನಡಾಂಬೆ ಹಾಗೂ ಅವಳ ಮಕ್ಕಳ ಪಕ್ಷ ಆಗಿದೆ. ಪಕ್ಷದಲ್ಲಿ ಯಾವುದೇ ಜಾತಿ, ಮತ ಭೇದ ಇಲ್ಲ. ಯಾರೂ ಬೇಕಾದರೂ ಈ ಪಕ್ಷಕ್ಕೆ ಬರಬಹುದು ಎಂದು ಹೇಳಿದರು.ಕಾಂಗ್ರೆಸ್, ಬಿಜೆಪಿ ಮತ್ತು ಜಾತ್ಯತೀತ ಜನತಾದಳದಲ್ಲಿ ವಯೋಮಿತಿ ಮೀರಿದ ಅನೇಕ ನಾಯಕರಿದ್ದಾರೆ. ಅವರಿಗೆ ನಡೆದಾಡುವುದಕ್ಕೂ ಕಾರ್ಯಕರ್ತರ ಆಸರೆ ಬೇಕು. ಆದರೆ, ಕರ್ನಾಟಕ ಮಕ್ಕಳ ಪಕ್ಷದಲ್ಲಿ 65 ವರ್ಷ ದಾಟಿದ ನಂತರ ನಿವೃತ್ತಿ ಕಡ್ಡಾಯ ಆಗಿದೆ ಎಂದು ತಿಳಿಸಿದರು. ಚಿತ್ರನಟ ರಾಹುಲ್ ಭಟ್, ಡಾ. ಅಮರ ಏರೋಳಕರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.