ಬುಧವಾರ, ಜನವರಿ 29, 2020
27 °C

ರುಚಿಸಿದ ನಾಟಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲದ ರಂಗಶಿಕ್ಷಣ ಕೇಂದ್ರವು 16ನೇ ವಾರ್ಷಿಕೋತ್ಸವದ ಪ್ರಯುಕ್ತ ಇತ್ತೀಚೆಗೆ ಪುರಸಭೆಯ ರಂಗಮಂದಿರದಲ್ಲಿ `ಅಂಬೇಡ್ಕರ್~ ಹಾಗೂ `ಮಂಟೇಸ್ವಾಮಿ~ ಕಥಾ ಪ್ರಸಂಗ ನಾಟಕಗಳನ್ನು ಪ್ರಯೋಗಿಸಿತು.ಹತ್ತು ಹನ್ನೆರಡು ಸಾಹಿತ್ಯ ಕೃತಿಗಳು ಬೀರಬಲ್ಲಷ್ಟು ಪರಿಣಾಮವನ್ನು ನಾಟಕವೊಂದು ಬೀರುತ್ತದೆ ಎಂಬ ಮಾತಿದೆ. `ಕಾವ್ಯೇಶು ನಾಟಕಂ ರಮ್ಯಂ~ ಎಂಬುದೂ ಸತ್ಯ. ದಲಿತ- ಬಂಡಾಯ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಗಿಟ್ಟಿಸಿದ ಡಾ. ಎಲ್. ಹನುಮಂತಯ್ಯನವರ ನಾಟಕಕ್ಕೂ ಆ ಗುಣವಿದೆ.ಸಾಮಾಜಿಕ, ರಾಜಕೀಯ, ಆರ್ಥಿಕ, ಮನಃಶಾಸ್ತ್ರೀಯ ನೆಲೆಯಲ್ಲಿ ದಲಿತರ ಸಮಸ್ಯೆಗಳನ್ನು ದಾಖಲಿಸುವ ಅವರ ಸಾಂಸ್ಕೃತಿಕ ಲೋಕ ಗಟ್ಟಿಯಾದದ್ದು. ಅಂಬೇಡ್ಕರರ ಜೀವನ ಹಾಗೂ ಹೋರಾಟಗಳ ಬಗೆಗೆ ಸಾಕಷ್ಟು ಒಳನೋಟಗಳನ್ನು ಹನುಮಂತಯ್ಯ ಅವರು ಈ ನಾಟಕ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.ಪ್ರತಿಕೂಲ ಸನ್ನಿವೇಶಗಳಲ್ಲಿಯೂ ಅಂಬೇಡ್ಕರ್ ತಮ್ಮತನವನ್ನು ಹೇಗೆ ಕಾಯ್ದುಕೊಂಡರು ಎಂಬುದನ್ನು ಸಮರ್ಥವಾಗಿ ಅನಾವರಣಗೊಳಿಸಿದ ನಾಟಕಕಾರರು ಗಾಂಧಿ ಮತ್ತು ಅಂಬೇಡ್ಕರರ ಪ್ರಖರ ಸಾಮಾಜಿಕ ಕಳಕಳಿಯನ್ನು ಅನಾವರಣಗೊಳಿಸಿದ್ದಾರೆ.ಸಂಸ್ಕೃತಿಯ ಬೇರುಗಳನ್ನು ಹುಡುಕಿ ಪರಂಪರೆಯ ಹುಸಿತನಗಳನ್ನು ಬಯಲು ಮಾಡಿದ ಅಂಬೇಡ್ಕರ್ ವ್ಯಕ್ತಿತ್ವವನ್ನು ಸಮರ್ಥವಾಗಿ ನಾಟಕ ಅರ್ಥ ಮಾಡಿಸುತ್ತದೆ.`ಮಹಾತ್ಮರಿಂದ ದಲಿತರ ವಿಮೋಚನೆ ಸಾಧ್ಯವಿಲ್ಲ~ ಎಂಬ ಅಂಬೇಡ್ಕರರ ವಾದವನ್ನು ಕರಾರುವಾಕ್ಕಾಗಿ ಸಮರ್ಥಿಸಿದ ನಾಟಕಕಾರ ಹನುಮಂತಯ್ಯ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ನೀಡಲು ಒಪ್ಪದ ಗಾಂಧಿ ಮತ್ತು ಅಂಬೇಡ್ಕರರನ್ನು ಐತಿಹಾಸಿಕ ನೆಲೆಗಟ್ಟಿನಲ್ಲಿ ಮುಖಾಮುಖಿಯಾಗಿಸಿದ್ದಾರೆ.ನಾಟಕಕಾರರ ಆಶಯವನ್ನು ಗಾಂಧಿ ಮತ್ತು ಅಂಬೇಡ್ಕರ್ ಪಾತ್ರಧಾರಿಗಳು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಬೇಡ್ಕರ್ ಪಾತ್ರಧಾರಿ ಚೆನ್ನಕೇಶವಮೂರ್ತಿ ಅವರಂತೂ ಪಾತ್ರವನ್ನು ಜೀವಿಸಿದ್ದಾರೆ. ಅಂತರ್ಜಾತಿಯ ಮದುವೆಗಳಿಂದ ಮಾತ್ರ ಸಮಾನತೆ ಸಾಧ್ಯ ಎಂಬುದನ್ನು ಗಾಂಧಿ ಪಾತ್ರಧಾರಿಯಾದ ಎ. ಜಿ. ಶಿವಶಂಕರರ ನಟನಾಕೌಶಲ್ಯದಿಂದ ಸಮರ್ಥವಾಗಿ ಬಿಂಬಿಸಿದರು.ಶತಶತಮಾನಗಳ ಭಾರಹೊತ್ತ ಅಂಬೇಡ್ಕರರಿಗೆ ಗಾಂಧೀಜಿಯ ದೂರದೃಷ್ಟಿ ಗ್ರಹಿಸಲು ಸಾಧ್ಯವಾಗದೇ ಹೋಗಿದ್ದರಿಂದ ನಾಟಕದ ಕೊನೆಯಲ್ಲಿ ಬೌದ್ಧ ಧರ್ಮವನ್ನು ಅನುಯಾಯಿಗಳೊಂದಿಗೆ ಒಪ್ಪಿಕೊಳ್ಳುವ ಸನ್ನಿವೇಶ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.ನಾಟಕದ ಪ್ರಮುಖ ಪಾತ್ರಧಾರಿ ಅಂಬೇಡ್ಕರ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದು, ತಮ್ಮ ಗಂಭೀರ ಅಭಿನಯದಿಂದ ಜನಮನ ಗೆದ್ದರು. ಗಾಂಧಿ ಪಾತ್ರಧಾರಿ ಎ. ಜಿ. ಶಿವಶಂಕರ ನಾಯಕ ಅವರ ಪಾತ್ರವೂ ಪರಿಣಾಮಕಾರಿಯಾಗಿ ಮೂಡಿಬಂತು.ನಾಟಕದುದ್ದಕ್ಕೂ ಈ ಎರಡು ಪಾತ್ರಗಳು ಪ್ರಮುಖವಾಗಿದ್ದರೂ ನೆಹರು, ರಾಜಗೋಪಾಲಚಾರಿ, ಪೆರಿಯಾರ್, ದೇವದಾಸ ಗಾಂಧಿ, ಬೌದ್ಧ ಬಿಕ್ಕು ಪಾತ್ರಧಾರಿಗಳೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

 

ಸ್ವಾತಂತ್ರ್ಯ ಸಂಗ್ರಾಮದ ನೆನಪನ್ನು ಪರಿಣಾಮಕಾರಿಯಾಗಿ ಕಣ್ಣಿಗೆ ಕಟ್ಟಿಕೊಡುವಲ್ಲಿ ತೆರೆಯ ಹಿಂದೆ ಶ್ರಮಿಸಿದ ಲಕ್ಷ್ಮಣ, ಮಾದೇಶ್, ಮೋಹನ್ ಪುಷ್ಪಲತಾ ಮಂಜುಳ, ಸಿದ್ದರಾಜು ಅವರ ಕಾಣಿಕೆ ಇದೆ. ಡಾ. ರಾಮಕೃಷ್ಣಯ್ಯ ಅವರ ನಿರ್ದೇಶನದಲ್ಲಿ ಸಮರ್ಥವಾಗಿ ಮೂಡಿಬಂದ ನಾಟಕವು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಪ್ರದರ್ಶಿತವಾದರೆ ಒಳಿತು.ವಾರ್ಷಿಕೋತ್ಸವದ ಎರಡನೇ ದಿನ ಪ್ರದರ್ಶಿತವಾದ ಎಚ್. ಎಸ್. ಶಿವಪ್ರಕಾಶ್‌ರ `ಮಂಟೇಸ್ವಾಮಿ ಕಥಾ ಪ್ರಸಂಗ~ ಗೀತರೂಪದ ನಾಟಕವಾದರೂ ಮೂಢನಂಬಿಕೆ, ಜಾತೀಯತೆ, ಸಾಮಾಜಿಕ ಅಸಮಾನತೆ, ಅಜ್ಞಾನವನ್ನು ವಿರೋಧಿಸುವಂಥದ್ದು. ತಿಪ್ಪೆಯಿಂದ ಎದ್ದು ಬಂದರೂ ತುಪ್ಪದಂಥ ವ್ಯಕ್ತಿತ್ವದ ಮಂಟೇಸ್ವಾಮಿ ಇಂದಿನ ಸಮಾಜಕ್ಕೆ ಪ್ರಸ್ತುತವಾಗುತ್ತಾರೆ.ಮಂಟೇಸ್ವಾಮಿ ಪಾತ್ರಧಾರಿ ಸಂಪತ್ ಕುಮಾರ್ ಪರಕಾಯ ಪ್ರವೇಶಿಸಿ ತಮ್ಮ ಅದ್ಭುತ ಅಭಿನಯದಿಂದ ಪ್ರತಿಕ್ಷಣವೂ ಪ್ರೇಕ್ಷಕರ ಮನಸೂರೆಗೊಂಡು ವಿಚಾರದ ಕಿಡಿ ಹೊತ್ತಿಸಿದರು. ನಾಟಕ ಕನ್ನಡ ಕಬೀರ ಎಂದು ಕರೆಸಿಕೊಂಡ ಸಂತಕವಿ ಶಿಶುನಾಳ ಶರೀಫರ ಹರಿಹರ ಹಜರತ್ ತತ್ವಗಳ ತ್ರಿವೇಣಿ ಸಂಗಮದ ಸಂಕೇತವಾದ ನಾಟಕ ನಾಡಿನ ಸಂತ ಶ್ರೇಷ್ಠರನ್ನು ಪರಿಚಯಿಸಿ ಬದುಕು ನಡೆಸುವ ಪರಿಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿತು.ಶತಶತಮಾನಗಳಷ್ಟು ಹಿಂದಿನ ಬದುಕು ನಮ್ಮದಾದರೂ ಬದಲಾವಣೆ ಕಾಣದ ಈ ಸಮಾಜದ ಮೇಲೆ ಬೆಳಕು ಚೆಲ್ಲಿದ ನಾಟಕ ಮುಗ್ಧತೆ, ಅಂಧಾನುಕರಣೆ, ಬೂಟಾಟಿಕೆಯ ವಿರುದ್ಧ ಹೋರಾಡುವ ಸಂದೇಶ ಸಾರುತ್ತದೆ. 12ನೇ ಶತಮಾನದ ಕಥಾ ವಸ್ತುವಾದರೂ ಸಮಕಾಲೀನ ಮೌಲ್ಯಗಳಿಗೆ ನಾಟಕ ಕನ್ನಡಿ ಹಿಡಿದು 21ನೇ ಶತಮಾನದಲ್ಲಿಯೂ ನಿರೀಕ್ಷಿತ ಬದಲಾವಣೆಯನ್ನು ಕಾಣಲಾಗಿಲ್ಲ ಎಂಬುದನ್ನು ಹೇಳುತ್ತದೆ.ಸಮಕಾಲೀನ ಸಂತನನ್ನು ಯಥಾವತ್ತಾಗಿ ತೋರಿಸುವ ಮಂಟೇಸ್ವಾಮಿ ಪಾತ್ರಧಾರಿಯ ವಸ್ತ್ರವಿನ್ಯಾಸ ಅದ್ಭುತವಾಗಿತ್ತು. ನಾಟಕದುದ್ದಕ್ಕೂ ಅನುಭಾವ ಗೀತೆಯನ್ನು ಹಾಡಿದ ನೀಲಗಾರರೂ ವಿಶೇಷ ಮೆರಗು ನೀಡಿದರು. ಆಯಗಾರರು ವೃತ್ತಿ ಪಾರಮ್ಯ ಮೆರೆದು ಕಾಯಕದಲ್ಲಿ ಕೈಲಾಸ ಕಂಡವರು ಎಂಬುದನ್ನು ಸಾಕ್ಷೀಕರಿಸುತ್ತಾರೆ.

ಪ್ರತಿಕ್ರಿಯಿಸಿ (+)