ಶುಕ್ರವಾರ, ಮೇ 14, 2021
21 °C

ರೂ 1.25 ಕೋಟಿ ತೆರಿಗೆ ವಸೂಲಿ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನಗರಸಭೆಯ ವ್ಯಾಪ್ತಿ ಆಸ್ತಿ, ಕುಡಿಯುವ ನೀರಿನ ತೆರಿಗೆ ಹಾಗೂ ಕಟ್ಟಡದ ಬಾಡಿಗೆ ವಸೂಲಾತಿಗೆ ಮೂರು ತಂಡ ರಚಿಸಲಾಗಿದೆ.ನಗರಸಭೆ ವ್ಯಾಪ್ತಿಯ ಕಟ್ಟಡದ ಮಾಲೀಕರು, ನಗರಸಭೆ ಮಳಿಗೆಗಳ ಬಾಡಿಗೆದಾರರು ಮತ್ತು ನಾಗರಿಕರು ಸ್ವಯಂಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಪಾವತಿಸಬೇಕು. ಆಸ್ತಿ, ನೀರಿನ ತೆರಿಗೆ ಹಾಗೂ ಕಟ್ಟಡದ ಬಾಡಿಗೆ ವಸೂಲಾತಿಗೆ ಎಲ್ಲ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೌರಾಯುಕ್ತ ಬಿ.ಡಿ. ಬಸವರಾಜಪ್ಪ ತಿಳಿಸಿದ್ದಾರೆ.ನಗರಸಭೆ ಸಿಬ್ಬಂದಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ಗಂಟೆವರೆಗೆ ವಸೂಲಾತಿ ಕೆಲಸ ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ಗಂಟೆಯ ನಂತರ ಸಾರ್ವಜನಿಕರು ಕಚೇರಿ ಕೆಲಸಕ್ಕಾಗಿ ಸಂಪರ್ಕಿಸಬೇಕು ಎಂದು ಕೋರಿದ್ದಾರೆ.ನಗರಸಭೆ ವ್ಯಾಪ್ತಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಯಡಿ ಸುಮಾರು 16 ಕೋಟಿ ರೂ ಮೊತ್ತದ ಕಾಮಗಾರಿ ಪೂರ್ಣಗೊಂಡಿದೆ. ಪ್ರಸ್ತುತ ಅಂದಾಜು 5.70 ಕೋಟಿ ರೂ ವೆಚ್ಚದಡಿ ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆಯಲಾಗಿದೆ. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ 3.70 ಲಕ್ಷ ರೂ ವೆಚ್ಚದಲ್ಲಿ ಕೊಳಚೆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಯೋಜನೆಯಡಿ ಅಂದಾಜು 6.70 ಕೋಟಿ ಅನುದಾನದಲ್ಲಿ ನೀರು ಸರಬರಾಜು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.ಅಂದಾಜು 22 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ. ಕಾರ್ಯಾದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ. 2010-11ನೇ ಸಾಲಿನ ರಾಜ್ಯ ಹಣಕಾಸು ಸಂಚಿತ ನಿಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. 2011-12ನೇ ಸಾಲಿನ ರಾಜ್ಯ ಹಣಕಾಸು ಸಂಚಿತ ನಿಧಿಯಿಂದ ಕೈಗೊಳ್ಳಬೇಕಿರುವ ಕಾಮಗಾರಿ ಬಗ್ಗೆ ಶೀಘ್ರವೇ ಟೆಂಡರ್ ಕರೆಯಲಾಗು ವುದು ಎಂದು ತಿಳಿಸಿದ್ದಾರೆ.ಆಂದೋಲನ ಆರಂಭ: ನಗರಸಭೆ ವ್ಯಾಪ್ತಿ ಬುಧವಾರ ತೆರಿಗೆ ವಸೂಲಾತಿ ಆಂದೋಲನ ಆರಂಭಗೊಂಡಿತು.

1.25 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ವಸೂಲಿಯಾಗಿಲ್ಲ. ಎರಡು ತಿಂಗಳೊಳಗೆ ಕನಿಷ್ಠ 75 ಲಕ್ಷ ರೂ ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಜತೆಗೆ, ನಗರಸಭೆ ವ್ಯಾಪ್ತಿಯ 74 ಮಳಿಗೆಗಳಲ್ಲಿಯೂ ಸಕಾಲದಲ್ಲಿ ಬಾಡಿಗೆ ವಸೂಲಿಯಾಗಿಲ್ಲ. ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ತಕ್ಷಣ ಬಾಕಿ ಪಾವತಿಸಲು ಸೂಚಿಸಲಾಗಿದೆ.

ಲೆಕ್ಕಅಧೀಕ್ಷಕ ವಾಸುದೇವ್‌ರಾವ್ ನೇತೃತ್ವದಡಿ ಎಂಜಿನಿಯರ್ ಬಂಗಾರಸ್ವಾಮಿ, ಆರೋಗ್ಯ ನಿರೀಕ್ಷಕ ಮಹದೇವಸ್ವಾಮಿ, ಸಿಇಒ ವಿಜಯಾ, ಕೆಂಪಯ್ಯ, ದಾಮೋದರ್‌ಸಿಂಗ್ ಇತರರು ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರಿಗೆ ತಿಳಿವಳಿಕೆ ನೀಡಿ ತೆರಿಗೆ ವಸೂಲಾತಿ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.