ಶುಕ್ರವಾರ, ಏಪ್ರಿಲ್ 16, 2021
31 °C

ರೂ 2,000 ಕೋಟಿ ನೆರವಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎರಡು ವರ್ಷಗಳಿಂದ ಬರಗಾಲಕ್ಕೆ ಸಿಕ್ಕಿ ತತ್ತರಿಸಿರುವ ರಾಜ್ಯಕ್ಕೆ ಎರಡು ಸಾವಿರ ಕೋಟಿ ರೂಪಾಯಿ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರ ಮಂಗಳವಾರ ಕೇಂದ್ರಕ್ಕೆ ಆಗ್ರಹಪಡಿಸಿದೆ.ವಾರದ ಹಿಂದೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕೃತ ಭೇಟಿಗಾಗಿ ಮೊದಲ ಸಲ ದೆಹಲಿಗೆ ಬಂದಿದ್ದ ಜಗದೀಶ್ ಶೆಟ್ಟರ್, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಕೃಷಿ ಸಚಿವ ಶರದ್ ಪವಾರ್ ಅವರನ್ನು ಕಂಡು ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಕ್ಕಿರುವ ಕರ್ನಾಟಕದ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್. ಅಶೋಕ, ಕೃಷಿ ಸಚಿವ ಉಮೇಶ್ ಕತ್ತಿ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಪ್ರದೀಪ್‌ಸಿಂಗ್ ಖರೋಲ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಾರ್ಯದರ್ಶಿ ಅಮರ ನಾರಾಯಣ್ ಮತ್ತಿತರರು ಮುಖ್ಯಮಂತ್ರಿ ಜತೆಗಿದ್ದರು.ಪ್ರಸಕ್ತ ವರ್ಷವೂ ನೈರುತ್ಯ ಮುಂಗಾರು ದುರ್ಬಲವಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಬಿದ್ದಿರುವ ಮಳೆ ಪ್ರಮಾಣ ತೃಪ್ತಿಕರವಾಗಿಲ್ಲ. ಶೇ 42.2ರಷ್ಟು ಕಡಿಮೆ ಮಳೆಯಾಗಿದೆ. 176 ತಾಲೂಕುಗಳ ಪೈಕಿ 157ರಲ್ಲಿ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. 70ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿರುವುದು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ . ಈ ಹಿನ್ನೆಲೆಯಲ್ಲಿ `ಹವಾಮಾನ ಆಧಾರಿತ ವಿಮೆ ಯೋಜನೆ~ಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಲಾಗಿದೆ.ರಾಜ್ಯದ 713 ಹಳ್ಳಿಗಳು ಮತ್ತು ಪಟ್ಟಣ ಪ್ರದೇಶಗಳ 250 ವಾರ್ಡ್‌ಗಳಿಗೆ 1200 ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸುಮಾರು 1.40 ಕೋಟಿ ಜಾನುವಾರು ಮೇವಿನ ಸಮಸ್ಯೆ ಎದುರಿಸುತ್ತಿದ್ದು, ಗೋಶಾಲೆ ಹಾಗೂ ಮೇವಿನ ಬ್ಯಾಂಕ್‌ಗಳನ್ನು ತೆರೆಯಲಾಗಿದೆ. ಪ್ರಮುಖ ಜಲಾಶಯಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಇಂಥ ಸಂಕಷ್ಟ ಪರಿಸ್ಥಿತಿಯಿಂದಾಗಿ ರೈತರು ಹತಾಶರಾಗಿದ್ದಾರೆ ಎಂದು ಪ್ರಧಾನಿ ಮತ್ತು ಕೃಷಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.ಕಳೆದ ವರ್ಷ ಮುಂಗಾರು ವಿಫಲವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ `ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ~ (ಎನ್‌ಸಿಸಿಎಫ್) ಅಡಿ  ರೂ 2605ಕೋಟಿ ನೆರವು ಕೇಳಿತ್ತು. ಆದರೆ, ಬಿಡುಗಡೆ ಆಗಿದ್ದು ಬರೀ 70 ಕೋಟಿ. ಹಿಂಗಾರು ಮಳೆಯೂ ಕೈಕೊಟ್ಟು ಪರಿಸ್ಥಿತಿ ಬಿಗಡಾಯಿಸಿದ ಬಳಿಕ ಪುನಃ ರೂ 3609ಕೋಟಿಗೆ ಮನವಿ ಮಾಡಲಾಯಿತು. ಆಗ ಸಿಕ್ಕಿದ್ದು ಕೇವಲ ರೂ 282 ಕೋಟಿ. ಕೇಂದ್ರದ ಈ ಹಣ ಯಾತಕ್ಕೂ ಸಾಲದು ಎಂದು ಮನವಿಯಲ್ಲಿ ಮನವರಿಕೆ ಮಾಡಲಾಗಿದೆ.ಇದಕ್ಕೂ ಮೊದಲು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ವಿಳಂಬ ಮಾಡದೆ ರಾಜ್ಯದ ನೆರವಿಗೆ ಧಾವಿಸಬೇಕು. ಇಡೀ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅಗತ್ಯ  ನೆರವು ನೀಡಬೇಕೆಂದು ಮನವಿ ಮಾಡಿದರು. ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಆದಷ್ಟು ತ್ವರಿತವಾಗಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪವಾರ್ ಭರವಸೆ ನೀಡಿದರು.ಮುಖ್ಯಮಂತ್ರಿಗಳು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಎಸ್.ಎಂ. ಕೃಷ್ಣ, ಎಂ.ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ರಾಜ್ಯಕ್ಕೆ ಅಗತ್ಯ ನೆರವು ಮತ್ತು ಸಹಕಾರ ದೊರಕಿಸಿಕೊಡಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೇಳಿದರು.ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮಧ್ಯಾಹ್ನ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದರು. ಇದು ಸೌಹಾರ್ದ ಭೇಟಿ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಸಕಾರಾತ್ಮಕ ಪ್ರತಿಕ್ರಿಯೆ-ಸಿ.ಎಂ

ರಾಜ್ಯದಲ್ಲಿ ಮುಂದಿನ 10 ದಿನಗಳಲ್ಲಿ ಮಳೆ ಬರದಿದ್ದರೆ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಜಗದೀಶ್ ಶೆಟ್ಟರ್ ಆತಂಕ ವ್ಯಕ್ತಪಡಿಸಿದರು.ಪ್ರಧಾನಿ ಮತ್ತು ಕೃಷಿ ಸಚಿವರನ್ನು ಭೇಟಿಯಾದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಇಬ್ಬರೂ ಮುಖಂಡರು ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.ಬರಗಾಲ ಕಾಮಗಾರಿ ಆದ್ಯತೆ ಮೇರೆಗೆ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರು, ಮೇವು ಮತ್ತು ಉದ್ಯೋಗಕ್ಕೆ ಒತ್ತು ನೀಡಲು ಸೂಚಿಸಲಾಗಿದೆ. ಇದಕ್ಕೆ ರೂ 136 ಕೋಟಿ ಬಿಡುಗಡೆ ಮಾಡಲಾಗಿದೆ. ಬರಗಾಲ ಕಾಮಗಾರಿಗೆ ಹಣದ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.