ಬುಧವಾರ, ಜನವರಿ 22, 2020
28 °C

ರೂ 6 ಕೋಟಿ ಖೋಟಾನೋಟು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜಧಾನಿಯಲ್ಲಿ ಗುರುವಾರ ಆರು ಕೋಟಿ ರೂಪಾಯಿಗೂ ಹೆಚ್ಚು ಮುಖಬೆಲೆಯ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ಭಾರತೀಯ ಪ್ರಜೆಗಳನ್ನು ಬಂಧಿಸಿದ್ದಾರೆ.

ಇದು ರಾಷ್ಟ್ರದಲ್ಲಿ ಒಂದೇ ದಿನ ವಶಪಡಿಸಿಕೊಳ್ಳಲಾಗಿರುವ ಅತ್ಯಧಿಕವಾದ ಖೋಟಾನೋಟಿನ ಮೊತ್ತ ಎನ್ನಲಾಗಿದೆ.

ನಗರದ ನೈಋತ್ಯ ಭಾಗದ ದಬ್ರೀ ಪ್ರದೇಶದಲ್ಲಿ ಇದನ್ನು ವಶಪಡಿಸಿಕೊಳ್ಳ ಲಾಗಿದೆ. ಗೋದಾ ಮೊಂದರಲ್ಲಿ ನಿಲ್ಲಿಸಿದ್ದ ಎರಡು ಟೆಂಪೋಗಳಲ್ಲಿ 33 ಬಟ್ಟೆಯ ಬಂಡಲ್‌ಗಳಲ್ಲಿ ಈ ಹಣವನ್ನು ಹುದುಗಿಸಿಡಲಾಗಿತ್ತು. ಹತ್ತು ದಿನಗಳ ಹಿಂದೆ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಣ ಭಾರತ ಪ್ರವೇಶಿಸಿರುವುದರ ಹಿಂದೆ ಪಾಕಿಸ್ತಾನದ ಕೈವಾಡವಿದ್ದು, ನೇಪಾಳ ಗಡಿಯ ಮೂಲಕ ಪ್ರವೇಶಿಸಿರಬಹುದು ಎಂಬುದು ಪೊಲೀಸರ ಶಂಕೆ. 

ದೆಹಲಿ ಪೊಲೀಸರು ಈ ಸಂಬಂಧ ಸಿಬಿಐ ಮತ್ತು ಆರ್‌ಬಿಐ ಸಂಪರ್ಕದಲ್ಲಿದ್ದಾರೆ. ವಶಪಡಿಸಿಕೊಂಡ ನೋಟುಗಳ ಮುಖಬೆಲೆ 500 ರೂಪಾಯಿ ಹಾಗೂ 1000 ರೂಪಾಯಿ ಆಗಿದೆ.

ಕಳೆದ ಐದು ವರ್ಷಗಳಲ್ಲಿ 210 ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಖೋಟಾ ನೋಟುಗಳ ಮುಖಬೆಲೆ 8.39 ಕೋಟಿ ರೂಪಾಯಿ ಆಗಿದ್ದರೆ, ಗುರುವಾರ ಒಂದೇ ದಿನದ ಖೋಟಾ ನೋಟುಗಳ ಮೊತ್ತ 6 ಕೋಟಿ ರೂಪಾಯಿಗೂ ಹೆಚ್ಚಿರುವುದು ಹುಬ್ಬೇರುವಂತೆ ಮಾಡಿದೆ.

ಈ ಮುನ್ನ, ಪೊಲೀಸರು ಐದು ವರ್ಷಗಳಲ್ಲಿ 8.39 ಕೋಟಿ ರೂಪಾಯಿ, 2000 ಯೂರೊ ಹಾಗೂ 5800 ಡಾಲರ್ ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಈ ಪೈಕಿ ಕಳೆದ ವರ್ಷ ಅತಿ ಕಡಿಮೆ, ಅಂದರೆ 44 ಪ್ರಕರಣಗಳಿಂದ 28.20 ಲಕ್ಷ ರೂಪಾಯಿ ಪೊಲೀಸರ ವಶವಾಗಿತ್ತು. 2007ರಲ್ಲಿ 1.01 ಕೋಟಿ ರೂಪಾಯಿ, 2009ರಲ್ಲಿ 88.39 ಲಕ್ಷ ರೂಪಾಯಿ ಹಾಗೂ 2010ರಲ್ಲಿ 28.84 ಲಕ್ಷ ಕೋಟಿ ರೂಪಾಯಿಯನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದರು.

ಕಳೆದ ಐದು ವರ್ಷಗಳಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ನೋಟುಗಳ ಪೈಕಿ 100 ರೂಪಾಯಿ ಮುಖಬೆಲೆಯ ನೋಟುಗಳೇ ಹೆಚ್ಚಾಗಿರುವ ಅಂಶವೂ ಕಂಡುಬಂದಿದೆ.

`ಈ ದಿನ ಸ್ವಾಧೀನಪಡಿಸಿಕೊಂಡಿರುವ ಖೋಟಾ ಹಣ ರಾಷ್ಟ್ರದಲ್ಲಿ ಒಂದೇ ದಿನ ವಶಪಡಿಸಿಕೊಂಡ ಅತ್ಯಧಿಕ ಮೊತ್ತಗಳ ಪೈಕಿ ಒಂದು~ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಕೆ.ಗುಪ್ತ  ಹೇಳಿದ್ದಾರೆ.

`ಖೋಟಾ ನೋಟು ಚಲಾವಣೆಗಾರರು, ಖೋಟಾ ನೋಟುಗಳನ್ನು ಮುಖಬೆಲೆಯ ಶೇ 50ರಿಂದ 60ರಷ್ಟು ಬೆಲೆಗೆ ಖರೀದಿಸಿ ನಂತರ ಅವನ್ನು ಶೇ 70ರಿಂದ 80ರಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು. ತಜ್ಞರಲ್ಲದ ಹೊರತು ಸಾಮಾನ್ಯ ರಿಗೆ ಈ ನೋಟಿಗೂ ಅಸಲಿ ನೋಟಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲ~  ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)