ಸೋಮವಾರ, ಜೂನ್ 14, 2021
26 °C

ರೆಕ್ಟರ್‌ ಥಾಮಸ್‌ ಕೊಲೆ ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ/ ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್‌ ಇಲಾಖೆಗೆ ಸಾಕಷ್ಟು ಸವಾಲಾಗಿದ್ದ ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ (62) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು ಇಲಿಯಾಜ್‌ ಎಂಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.‘ಪ್ರಕರಣ ಸಂಬಂಧ ಇಲಿಯಾಜ್‌­ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಥಾಮಸ್‌ ಅವರ ಕೊಲೆಗೆ ಸೆಮಿನರಿಯ ಆಡಳಿತಾತ್ಮಕ ಮತ್ತು ವ್ಯವಹಾರಿಕ ವಿಷಯಗಳೇ ಮುಖ್ಯ ಕಾರಣ’ ಎಂದು ಉನ್ನತ ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.‘ಹಲವು ಶಿಕ್ಷಣ ಸಂಸ್ಥೆಗಳು ಆ ಸೆಮಿನರಿಯ ಅಧೀನದಲ್ಲಿವೆ. ಆ ಶಿಕ್ಷಣ ಸಂಸ್ಥೆಗಳಿಂದ ಬರುವ ವರಮಾನ ಸೆಮಿನರಿಗೆ ಸೇರುತ್ತಿತ್ತು. ಸುಮಾರು 20 ವರ್ಷಗಳಿಂದ ಸೆಮಿನರಿಯಲ್ಲಿ ರೆಕ್ಟರ್‌ ಆಗಿದ್ದ ಕೇರಳ ಮೂಲದ ಥಾಮಸ್‌ ಅವರೇ ಸೆಮಿನರಿಯ ಆಡಳಿತಾತ್ಮಕ ಮುಖ್ಯಸ್ಥರೂ ಆಗಿದ್ದರು.ಥಾಮಸ್‌ ಅವರ ಬದಲಿಗೆ ಕನ್ನಡ ಭಾಷಿಕರನ್ನೇ ಸೆಮಿನರಿಯ ರೆಕ್ಟರ್‌ ಸ್ಥಾನಕ್ಕೆ ನೇಮಿಸಬೇಕೆಂದು ಕೆಲ ಕ್ರೈಸ್ತ ಸಂಘಟನೆಗಳು ಒತ್ತಾಯಿಸುತ್ತಿದ್ದವು. ಈ ಸಂಬಂಧ ವಿವಾದ ತಲೆದೋರಿತ್ತು. ಇದೇ ಕಾರಣದಿಂದ ಕೊಲೆ ನಡೆದಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.‘ಕೊಲೆ ಘಟನೆಯ ನಂತರ ಥಾಮಸ್‌ ಅವರ ಕೊಠಡಿಯಲ್ಲಿದ್ದ ಸೆಮಿನರಿಯ ದೈನಂದಿನ ವ್ಯವಹಾರ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳು ನಾಪತ್ತೆಯಾಗಿದ್ದವು. ಆರೋಪಿಗಳು ಕೃತ್ಯ ಎಸಗಿದ ಬಳಿಕ ಆ ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಅಲ್ಲದೇ, ಕೆಲ ಪ್ರಮುಖ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಘಟನಾ ಸ್ಥಳದಲ್ಲಿ ದೊರೆತ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಪೊಲೀಸ್‌ ಮಾಹಿತಿದಾರರು ನೀಡಿದ ಸುಳಿವು ಆಧರಿಸಿ ಪ್ರಕರಣ ಭೇದಿಸಲಾಯಿತು’ ಎಂದು ಹೇಳಿದ್ದಾರೆ.‘ಕೆಲ ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರನಾಗಿದ್ದ ಇಲಿಯಾಜ್‌, ನಗರದ ಚರ್ಚ್‌ ಒಂದರಲ್ಲಿ ಧರ್ಮ ಗುರುವಾಗಿ ಕೆಲಸ ಮಾಡುತ್ತಿದ್ದ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಿದ ಬಳಿಕ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮಂಪರು ಪರೀಕ್ಷೆ:  ಘಟನಾ ದಿನ ಸೆಮಿನರಿಯ ಸಹಾಯಕ ಪಾದ್ರಿ ಪ್ಯಾಟ್ರಿಕ್, ಇತರೆ ನಾಲ್ಕು ಮಂದಿ ಪಾದ್ರಿಗಳು, ಅಡುಗೆ ಸಹಾಯಕ ರಾಜ ಮತ್ತು ಆತನ ತಮ್ಮ ರೆಡ್ಡಿ, ಭದ್ರತಾ ಸಿಬ್ಬಂದಿ ಮಾನ್‌ಸಿಂಗ್‌ ಮಾತ್ರ ಸೆಮಿನರಿಯಲ್ಲಿದ್ದರು.ಆ ಎಂಟು ಮಂದಿಯಲ್ಲಿ ಪ್ಯಾಟ್ರಿಕ್‌, ರಾಜ ಮತ್ತು ರೆಡ್ಡಿಗೆ ಪೊಲೀಸರು ಗುಜರಾತ್‌ನ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ಮಂಪರು ಪರೀಕ್ಷೆ ಮಾಡಿಸಿದ್ದರು. ಕಳೆದ ವಾರ ಸಹ ಮತ್ತಿಬ್ಬರು ವ್ಯಕ್ತಿಗಳಿಗೆ ಮಂಪರು ಪರೀಕ್ಷೆ ಮಾಡಲಾಗಿತ್ತು.2013ರ ಮಾ.31ರಂದು ರಾತ್ರಿ ಸೆಮಿನರಿಗೆ ನುಗ್ಗಿದ್ದ ದುಷ್ಕರ್ಮಿಗಳು ಥಾಮಸ್‌ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದರು.ಆಗ ನಗರ ಪೊಲೀಸ್‌ ಕಮಿಷನರ್‌ ಆಗಿದ್ದ ಜ್ಯೋತಿಪ್ರಕಾಶ್‌ ಮಿರ್ಜಿ ಅವರು ಕೊಲೆ ಪ್ರಕರಣದ ಶೀಘ್ರ ತನಿಖೆಗೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪ್ರಣವ್‌ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರು ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದರು.15 ಲಕ್ಷ ಬೆರಳಚ್ಚು ಮಾದರಿ ತಪಾಸಣೆ

‘ಪ್ರಕರಣ ಸಂಬಂಧ 15 ಲಕ್ಷಕ್ಕೂ ಹೆಚ್ಚು ಬೆರಳಚ್ಚು ಮಾದರಿಗಳನ್ನು ಪರಿಶೀಲಿಸಲಾಗಿದೆ. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಬೆರಳಚ್ಚು ಮಾದರಿಯನ್ನು ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ (ಎಸ್‌ಸಿಆರ್‌ಬಿ) ಸಂಗ್ರಹಿಸಲಾಗಿರುವ ಹಾಗೂ ಮಲ್ಲೇಶ್ವರ ಸುತ್ತಮುತ್ತಲ ಠಾಣೆಗಳ ವ್ಯಾಪ್ತಿಯಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಸುಮಾರು 7 ಲಕ್ಷ ಬೆರಳಚ್ಚು ಮಾದರಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಅಲ್ಲದೇ ಬಿಹಾರ, ಒಡಿಶಾ, ಪಶ್ಚಿಮಬಂಗಾಳ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬೆರಳಚ್ಚು ಮಾದರಿಗಳೊಂದಿಗೆ ತಾಳೆ ಹಾಕಿ ನೋಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೊಲೆ ಘಟನೆ ನಡೆಯುವುದಕ್ಕೂ ಮುನ್ನ ಒಂದು ತಿಂಗಳ ಅಂತರದಲ್ಲಿ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿ ಸುತ್ತಮುತ್ತಲ ಪ್ರದೇಶದಲ್ಲಿನ ಮೊಬೈಲ್ ಗೋಪುರಗಳ ಮೂಲಕ ವಿನಿಮಯವಾಗಿದ್ದ ಸುಮಾರು 25 ಲಕ್ಷ ಕರೆಗಳು ಹಾಗೂ ಆ ಕರೆಗಳ ಸಂಭಾಷಣೆಯ ವಿವರವನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.