ಮಂಗಳವಾರ, ಮೇ 11, 2021
24 °C

ರೆಡ್ಡಿದ್ವಯರ ಜಾಮೀನು: ಇಂದು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಇಲ್ಲಿನ ಚಂಚಲಗುಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ವಿ.ಶ್ರೀನಿವಾಸ್ ರೆಡ್ಡಿ ಅವರ ಜಾಮೀನು ಅರ್ಜಿಯ ಆದೇಶವನ್ನು ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರಕ್ಕೆ ಕಾಯ್ದಿರಿಸಿತು.ಹಾಗೆಯೇ ಹೆಚ್ಚಿನ ವಿಚಾರಣೆಗಾಗಿ ರೆಡ್ಡಿದ್ವಯ ರನ್ನು  ತಮ್ಮ ವಶಕ್ಕೆ ಕೊಡಬೇಕು ಎನ್ನುವ ಸಿಬಿಐ ಅರ್ಜಿಯ ತೀರ್ಪನ್ನೂ ಮಂಗಳವಾರ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.ರಾತ್ರಿ ಸುಮಾರು ಒಂಬತ್ತು ಗಂಟೆ ವೇಳೆಯಲ್ಲಿ ನ್ಯಾಯಾಧೀಶರು ತಮ್ಮ ನಿರ್ಧಾರ ಪ್ರಕಟಿಸಿದರು. ಇದರಿಂದಾಗಿ ಜಾಮೀನು ದೊರೆಯಬಹುದು ಎಂದು ನಿರೀಕ್ಷಿಸಿದ್ದ ರೆಡ್ಡಿಗಳಿಗೆ ಹಾಗೂ ಇಬ್ಬರನ್ನೂ ತಮ್ಮ ವಶಕ್ಕೆ ನೀಡಬಹುದು ಎನ್ನುವ ಸಿಬಿಐಗೆ ಭಾರೀ ನಿರಾಸೆಯಾಯಿತು.ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿಬಿಐ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ಟಂಕ ಅವರು, ರೆಡ್ಡಿ ದ್ವಯರು ಬಳ್ಳಾರಿ ಮತ್ತು ಆಂಧ್ರ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಜಾಮೀನು ನೀಡಬಾರದು ಎಂದು ಹೇಳಿದರು.ಇಬ್ಬರನ್ನೂ ಬಂಧಿಸಿ ಒಂದು ವಾರವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನಾಶವಾಗುವ ಬೆದರಿಕೆ ಇರುವುದರಿಂದ ಇಬ್ಬರನ್ನೂ ತಕ್ಷಣ ಸಿಬಿಐ ವಶಕ್ಕೆ ಕೊಡಬೇಕು ಎಂದು ಕೋರಿದರು.ಜನಾರ್ದನ ರೆಡ್ಡಿ ಅವರ ಗಣಿ ಕಂಪೆನಿ ಸುಮಾರು 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಪ್ರತಿ ನಿತ್ಯ ಮೂರು ಸಾವಿರ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸಿದೆ. ಇದಕ್ಕೆ ಅಧಿಕಾರಿಗಳೂ ಸಹ ಸಹಕರಿಸಿದ್ದಾರೆ ಎಂದು ಆರೋಪಿಸಿದರು.ಆರೋಪಿಗಳ ಪರ ವಾದ ಮಂಡಿಸಿದ ಉದಯ್ ಯು ಲಲಿತ್ ಅವರು, ಅಧಿಕಾರಿಗಳು ಶಾಮೀಲಾಗಿದ್ದರೆ ಇದುವರೆಗೆ ಸಿಬಿಐ ಅವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.