ಶುಕ್ರವಾರ, ಏಪ್ರಿಲ್ 16, 2021
31 °C

ರೇಷ್ಮೆ ಆಮದು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:  ಸುಂಕ ರಹಿತ ರೇಷ್ಮೆ ಆಮದು ನೀತಿಯನ್ನು ವಾಪಸು ಪಡೆಯಬೇಕು. ಸುಂಕ ರಹಿತವಾಗಿ ರೇಷ್ಮೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನೂರಾರು ಬೆಳೆಗಾರರು, ರೀಲರುಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.ರೇಷ್ಮೆಗೂಡು ಮಾರುಕಟ್ಟೆಯಿಂದ ಶುರುವಾದ ಮೆರವಣಿಗೆ ಎಂ.ಬಿ.ರಸ್ತೆ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿತು. ಅಲ್ಲಿಯೂ ಬೆಳೆಗಾರರು, ರೀಲರುಗಳು ಧರಣಿ ನಡೆಸಿದರು.ಕೇಂದ್ರದ ಜವಳಿ ಮತ್ತು ಆರ್ಥಿಕ ಸಚಿವಾಲಯವು ಕಳೆದ ಆಗಸ್ಟ್‌ನಲ್ಲಿ ಪ್ರಕಟಿಸಿರುವ, ಸುಂಕ ರಹಿತವಾಗಿ 2500 ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ಬಂಡವಾಳಶಾಹಿ ವರ್ತಕರು ನಡೆಸಿರುವ ಕೈವಾಡದಿಂದ ಗೂಡಗಳ ಬೆಲೆ ಕೆಜಿಗೆ 350ರಿಂದ 425 ಇದ್ದದ್ದು 150ರಿಂದ 250ಕ್ಕೆ ಕುಸಿದಿರುವುದು ಬೆಳೆಗಾರರಲ್ಲಿ ಆತಂಕವನ್ನು ಮೂಡಿಸಿದೆ ಎಂದರು.ಹತ್ತು ಲಕ್ಷ ಬೆಳೆಗಾರರು ಮತ್ತು ರೀಲರ್ ಕುಟುಂಬಗಳು ರೇಷ್ಮೆಗೂಡು ಉದ್ದಿಮೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿವೆ. ಕೆಲವೇ ವರ್ತಕರ ಹಿತಕ್ಕೋಸ್ಕರ ರೂಪಿಸಲಾಗಿರುವ ನೀತಿಯನ್ನು ಕೈಬಿಡಬೇಕು. ಬೆಳೆಗಾರರು ಮತ್ತು ರೀಲರ್‌ಗಳ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ದ್ಯಾವೀರಪ್ಪ, ರೀಲರ್‌ಗಳ ಸಂಘದ ಅಧ್ಯಕ್ಷ ಚಾಂದ್‌ಪಾಷಾ, ವೆಂಕಟಸ್ವಾಮಿ, ಮುನಿಸೊಣ್ಣಪ್ಪ, ಎ.ಅರ್ಜುನ್, ಆರ್.ಪ್ರಕಾಶ್,  ನಂಜುಂಡಪ್ಪ, ಎಸ್.ಎಂ.ನಾರಾಯಣಸ್ವಾಮಿ, ಸಿ.ವಿ.ನಾರಾಯಣ್, ಗೋವಿದರಾಜ್, ಅಮೀರ್, ಬಾಬು ಮನೋಹರ್ ಬೇಗ್, ವಲದವಾಡಿ ವೆಂಕಟೇಶ್ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.