ಗುರುವಾರ , ಜೂನ್ 24, 2021
22 °C

ರೈತರಿಗೆ ರೂ.24 ಲಕ್ಷ ಸಾಲ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ, ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದುದು ಬ್ಯಾಂಕ್‌ಗಳ ಆದ್ಯ ಕರ್ತವ್ಯ ಎಂದು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಹೇಳಿದರು.ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಸಾಲದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ಹೆಚ್ಚುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ ಮಾಡುವವರೇ ಇಲ್ಲದಂತಾಗುತ್ತಾರೆ.ಕೃಷಿ ಚಟುವಟಿಕೆ ನಡೆಸಲು ಹಣಕಾಸಿನ ತೊಂದರೆಯಾಗದಂತೆ ಹಣಕಾಸು ಸಂಸ್ಥೆಗಳು ರೈತರ ನೆರವಿಗೆ ನಿಲ್ಲಬೇಕು. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳಲ್ಲಿ ಪಡೆದಿರುವ ಸಾಲವನ್ನು ಸಹಕಾರಿ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ದರದ ಸಾಲ ಪಡೆದು ತೀರುವಳಿ ಮಾಡಬೇಕು. ಇಲ್ಲವಾದಲ್ಲಿ ಬಡ್ಡಿಯ ಹೊರೆ ಹೆಚ್ಚುತ್ತಾ ಹೋಗುತ್ತದೆ ಎಂದು ಅವರು ಎಚ್ಚರಿಸಿದರು.ಈ ಭಾಗದಲ್ಲಿ ವಾಣಿ ವಿಲಾಸ ಜಲಾಶಯದ ನೀರು ಹಾಯುತ್ತದೆ. ಆದರೆ, ಜಲಾಶಯಕ್ಕೆ ನೀರಿನ ಲಭ್ಯತೆಯ ಕೊರತೆಯಿಂದ ದಿನೇ ದಿನೇ ಬರಿದಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಜಾರಿಗೊಳಿಸುವಂತೆ ಸಂಘಟಿತ ಹೋರಾಟ ನಡೆಸಬೇಕಿದೆ. ಮಳೆಯಾಶ್ರಯದಲ್ಲಿ ಕೃಷಿ ಚಟುವಟಿಕೆ ನಡೆಸುವುದು ಕಷ್ಟ. ಜಲಾಶಯಕ್ಕೆ ಹಾಗೂ ಇತರೆ ಕೆರೆಗಳಿಗೆ ನೀರು ಬಂದರೆ ಕೃಷಿಗೆ ಅನುಕೂಲವಾಗುತ್ತದೆ. ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತದೆ. ಇದರ ಪ್ರಯೋಜನ ಪಡೆದು, ಗುಡಿ ಕೈಗಾರಿಕೆ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಲಕ್ಷ್ಮೀಕಾಂತ್ ಕರೆ ನೀಡಿದರು.ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯೂರಿನ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ತಾ.ಪಂ. ಸದಸ್ಯ ವಿ. ವೆಂಕಟೇಶ್, ಪಾಂಡುರಂಗಪ್ಪ, ಕೃಷ್ಣಯ್ಯ, ಶಶಿಕುಮಾರ್, ಬಸವರಾಜ್, ಗುರುಮೂರ್ತಿ, ರಾಜಣ್ಣ, ರಂಗೇಗೌಡ್ರು, ಬಿ.ಆರ್. ಮಂಜುನಾಥ್, ರಂಗಸ್ವಾಮಿ, ರಾಮಲಿಂಗೇಗೌಡ, ಸಿದ್ಧರಾಮಣ್ಣ, ರವಿಶಂಕರ್, ಉಮೇಶ್‌ಬಾಬು, ನಾಗರಾಜ್ ಮತ್ತಿತರರು ಹಾಜರಿದ್ದರು. ಪಾಂಡುರಂಗಪ್ಪ ಸ್ವಾಗತಿಸಿದರು. ಕೀರ್ತಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೂ. 24.37 ಲಕ್ಷ ಸಾಲವನ್ನು ರೈತರಿಗೆ ವಿತರಣೆ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.