ಸೋಮವಾರ, ಏಪ್ರಿಲ್ 19, 2021
25 °C

ರೈತರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ಬರದ ಛಾಯೆಯಿಂದ ತತ್ತರಿಸುವ ರೈತರಿಗೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯರು ಒಕ್ಕೊರಲಿನಿಂದ ಸೂಚನೆ ನೀಡಿದರು.ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಸದಸ್ಯರು, ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಸುಲಭವಾಗಿ ದೊರೆಯುವಂತೆ ಮಾಡಬೇಕು. ಕೆಲವೆಡೆ ರೈತರಿಂದ ಹೆಚ್ಚಿನ ಬೆಲೆಗೆ ಪಡೆಯುತ್ತಿರುವುದಾಗಿ ದೂರುಗಳು ಬಂದಿವೆ. ಮಾಧ್ಯಮಗಳಲ್ಲೂ ಈ ಕುರಿತು ವರದಿಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.ಚರ್ಚೆಗೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ರೈತರ ಅಗತ್ಯತೆಯನ್ನು ಪರಿಗಣಿಸಿ, ರಸಗೊಬ್ಬರ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಕಾವೇರಿದ ಚರ್ಚೆ ನಡೆಯಿತು. ತೆಂಗಿನ ಸಸಿ ನೆಡುವ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಸದಸ್ಯರು ಆರೋಪಿಸಿದರು.ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸದಸ್ಯ ಶರಣೀಕ್‌ಕುಮಾರ ದೋಖಾ, ಎಷ್ಟು ತೆಂಗಿನ ಸಸಿಗಳನ್ನು ನೆಡಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿಯೇ ತಮಗಿಲ್ಲ. ವಿವರಣೆ ನೀಡಿ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ, ಎಲ್ಲೆಡೆಯೂ ತೆಂಗಿನ ಸಸಿಗಳನ್ನು ನೆಡಲಾಗಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ ದೋಖಾ, ಇದುವರೆಗೆ ಸದಸ್ಯರ ಗಮನಕ್ಕೆ ಈ ವಿಷಯವೇ ಬಂದಿಲ್ಲ. ನಮಗಂತೂ ತೆಂಗಿನ ಸಸಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಲಾಖೆಯಿಂದ ನೆಟ್ಟಿರುವ ಒಂದೇ ಒಂದು ಸಸಿಗಳು ಕಾಣುವುದಿಲ್ಲ. ಟೆಂಗಿನ ಚಿಪ್ಪು ಸಹ ನಮಗೆ ತೋರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಸುಳ್ಳು ಮಾಹಿತಿ ನೀಡುವುದಕ್ಕೂ ಒಂದು ಮೀತಿ ಇರಬೇಕು. ಸಾಕಷ್ಟು ಸಸಿ ನೆಟ್ಟಿದ್ದೇವೆ ಎಂದು ಹೇಳಿತ್ತೀರಿ. ಎಲ್ಲಿ ಸಸಿ ನೆಡಲಾಗಿದೆಯೋ ಅಲ್ಲಿಗೆ ಹೋಗಿ ವೀಕ್ಷಣೆ ಮಾಡೋಣವೇ ಎಂದು ಕೇಳಿದರು. ಆದರೆ ಇದಕ್ಕೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು.ಸದಸ್ಯ ಶಂಕರಗೌಡ ಪಾಟೀಲ ಶಿರವಾಳ ಮಾತನಾಡಿ, ಎಷ್ಟು ಸಸಿ ಹಾಕಲಾಗಿದೆ ಎಂಬುದರ ಬಗ್ಗೆ ಸಭೆಗೆ ಸ್ಪಷ್ಟ ಮಾಹಿತಿ ನೀಡಬೇಕು. ಸುಳ್ಳು ಹೇಳುವುದು ಸರಿಯಲ್ಲ ಎಂದರು.ಮೀನುಗಾರಿಕೆ, ರೇಷ್ಮೆ, ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಜಲಾನಯನ ಅಭಿವೃದ್ಧಿ, ಸಾಮಾಜಿಕ ಅರಣ್ಯ ಇಲಾಖೆ, ಸಹಕಾರ, ಕೈಗಾರಿಕೆ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಹಣಮವ್ವ ಸೋಲಾಪೂರೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಭೀಮಮ್ಮ, ಚನ್ನಬಸಮ್ಮ ಸೋಮಣ್ಣೋರ, ಶ್ಯಾಮಲಾ ಕಮತಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿಗಳು ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.