ಸೋಮವಾರ, ಜುಲೈ 26, 2021
24 °C
ಅನಂತಪುರದಲ್ಲಿ ಬೆಂಗಳೂರು–ನಾಂದೇಡ್‌ ಎಕ್ಸ್‌ಪ್ರಸ್‌ ಅಪಘಾತ

ರೈಲಿಗೆ ಅಪ್ಪಳಿಸಿದ ಟ್ರಕ್‌: ಕಾಂಗ್ರೆಸ್‌ ಶಾಸಕ ವೆಂಕಟೇಶ ನಾಯಕ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಂತಪುರ (ಪಿಟಿಐ): ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ರೈಲು ಮತ್ತು ಟ್ರಕ್‌ ನಡುವೆ ಸಂಭವಿಸಿದ  ಭೀಕರ ಅಪಘಾತದಲ್ಲಿ ರಾಯಚೂರಿನ ದೇವದುರ್ಗ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವೆಂಕಟೇಶ್‌ ನಾಯಕ್‌ (79) ಸೇರಿ 6 ಮಂದಿ ಮೃತಪಟ್ಟಿದ್ದಾರೆ. 

ವೆಂಕಟೇಶ ನಾಯಕ್‌ ಅವರು ಬೆಂಗಳೂರು–ನಾಂದೇಡ್‌ ಎಕ್ಸ್‌ಪ್ರಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸೋಮವಾರ ಬೆಳಗಿನ ಜಾವ 2:30ರ ಸುಮಾರಿಗೆ ಈ ರೈಲು ಅನಂತಪುರ ಜಿಲ್ಲೆಯ ಪೆನುಕೊಂಡ ಸಮೀಪದ ಮಡಕಶಿರ ಎಂಬಲ್ಲಿ ಲೆವಲ್‌ ಕ್ರಾಸಿಂಗ್ ದಾಟುತ್ತಿತ್ತು. ಈ ಸಂದರ್ಭದಲ್ಲಿ ಗ್ರಾನೈಟ್‌ ಹೇರಿಕೊಂಡು ಬಂದ ಭಾರಿ ಟ್ರಕ್‌  ಚಾಲಕನ ನಿಯಂತ್ರಣ ಕಳೆದುಕೊಂಡು, ಮುಚ್ಚಿದ್ದ ರೈಲ್ವೆ ಗೇಟ್‌ ಮುರಿದುಕೊಂಡು ನೇರವಾಗಿ ರೈಲಿಗೆ ಬಂದು ಅಪ್ಪಳಿಸಿತು.ಟ್ರಕ್‌ ಅಪ್ಪಳಿಸಿದ್ದು  ಎಚ್‌–1 ಕೋಚ್‌ಗೆ. ಈ ಕೋಚ್‌ನಲ್ಲಿ ವೆಂಕಟೇಶ್‌ ನಾಯಕ್‌ ಮತ್ತು ನಾಲ್ವರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಸ್ಥಳದಲ್ಲೇ ಮೃತಪಟ್ಟರು. ಟ್ರಕ್‌ ಚಾಲಕ ಕೂಡ ಘಟನೆಯಲ್ಲಿ ಮೃತಪಟ್ಟ. ರೈಲಿನ ಎಸ್‌–1, ಎಸ್‌–2, ಬಿ–1 ಸೇರಿದಂತೆ ನಾಲ್ಕು ಬೋಗಿಗಳು ಹಳಿ ತಪ್ಪಿದವು. 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ಅನಂತಪುರ ಜಿಲ್ಲೆಯ ಡಿಐಜಿ ಕೆ. ಸತ್ಯನಾರಾಯಣ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಲೆವಲ್‌ ಕ್ರಾಸಿಂಗ್‌ನಲ್ಲಿ ಗೇಟ್ ಹಾಕಿದ್ದರೂ, ಅದರತ್ತ ಗಮನ ಹರಿಸದ ಟ್ರಕ್‌ ಚಾಲಕ, ಒಮ್ಮಲೆ ವಾಹನ ನುಗ್ಗಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ವೆಂಕಟೇಶ ನಾಯಕ್‌ ಅವರು ನಾಲ್ಕು ಬಾರಿ ಸಂಸದರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.