ಬುಧವಾರ, ಏಪ್ರಿಲ್ 21, 2021
24 °C

ರೈಲು ತಡೆದು ರೈತ ಸಂಘ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರೇಷ್ಮೆ ಬೆಳೆಗಾರರ ಹಿತರಕ್ಷಣೆ ದೃಷ್ಟಿಯಿಂದ ಆದಷ್ಟು ತ್ವರಿತವಾಗಿ ರೇಷ್ಮೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಪ್ರಾಂತ ರೈತ ಸಂಘ, ಕೃಷಿ ಕೂಲಿ ಕಾರ್ಮಿಕರ ಸಂಘದ ನೇತೃತ್ವ ದಲ್ಲಿ ಸೋಮವಾರ ಬೆಳೆಗಾರರು ನಗರದಲ್ಲಿ ಕೆಲಹೊತ್ತು ರೈಲು ತಡೆದು, ರೈಲ್ವೆ ಕಚೇರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.ಬೆಳಿಗ್ಗೆ 11 ಗಂಟೆಯ ವೇಳೆಗೆ ರೈಲ್ವೆ ನಿಲ್ದಾಣಕ್ಕೆ ಧಾವಿಸಿದ ಪ್ರತಿಭಟನಾ ಕಾರರು ಮೈಸೂರಿನಿಂದ ಬೆಂಗಳೂರಿ ನತ್ತ ಹೊರಟಿದ್ದ ಟಿಪ್ಪು ಎಕ್ಸ್‌ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಲು ಯತ್ನಿಸಿದರು.ಒಂದು ಹಂತದಲ್ಲಿ ಪ್ರತಿಭಟನಾ ಕಾರರ ಮನವೊಲಿಸಲು ವಿಫಲರಾದ ಪೊಲೀಸರು, ಪ್ರತಿಭಟನಾಕರರನ್ನು ಬಂಧಿಸುವ ಮೂಲಕ ತೆರವುಗೊಳಿ ಸಿದ್ದು, ರೈಲು ಸಂಚಾರ ಸುಗಮಕ್ಕೆ ಕ್ರಮಕೈಗೊಂಡರು. ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಅಹಿತಕರ ಘಟನೆಗೆ ಆಸ್ಪದವಾಗಲಿಲ್ಲ.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಕೃಷ್ಣೇಗೌಡ, ಕೇಂದ್ರ ಸರ್ಕಾರದ ನೀತಿಯ ಪರಿಣಾಮ ಇಂದು ರೇಷ್ಮೆ ಬೆಳೆಗಾರರು ಕಷ್ಟ ಪಡುವಂತಾಗಿದೆ. ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ಹಿತರಕ್ಷಣೆ ಮಾಡಬೇಕು ಎಂದು ಆಗ್ರಹ ಪಡಿಸಿದರು.ಅಲ್ಲದೆ, ಈಚೆಗೆ ಬೆಲೆ ಕುಸಿತದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡ ವಳಗೆರೆದೊಡ್ಡಿಯ ರೈತರ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಘೋಷಿಸ ಬೇಕು ಎಂದು ಒತ್ತಾಯಿಸಿದರು.

ಕಚ್ಚಾರೇಷ್ಮೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡುವುದನ್ನು ಹಿಂದೆ ಪಡೆಯಬೇಕು. ಆಮದು ಶುಲ್ಕವನ್ನು ಹಿಂದಿನಂತೇ ಶೇ 30.66 ದರ ದಲ್ಲಿಯೇ ಉಳಿಸಬೇಕು.  ರೇಷ್ಮೆ ಗೂಡಿನ ಬೆಲೆಯು ಕುಗ್ಗದಂತೆ ಸ್ಥಿರತೆ ಕಾಯ್ದುಕೊಳ್ಳಲು ಒತ್ತು ನೀಡಬೇಕು ಎಂದು ಆಗ್ರಹಪಡಿಸಿದರು.ಪ್ರತಿಭಟನೆಯ ಮುಂಚೂಣಿಯಲ್ಲಿ ಯಶವಂತ್, ನಾಗರಾಜು, ಶಂಕರೇ ಗೌಡ, ಲಿಂಗರಾಜು, ಜನವಾದಿ ಮಹಿಳಾ ಸಂಘಟನೆಯ ಕುಮಾರಿ, ಸುರೇಂದ್ರ, ಆನಂದ್, ಜವರೇಗೌಡ ಮತ್ತಿತರರು ಇದ್ದರು. ಡಿವೈಎಸ್‌ಪಿ ಚನ್ನಬಸವಣ್ಣ, ಸಿಪಿಐ ಜಯಮಾರುತಿ, ಪಿಎಸ್‌ಐ ಮುನಿಯಪ್ಪ ಮತ್ತಿತರರು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.