ಸೋಮವಾರ, ಜೂನ್ 14, 2021
22 °C

ರೈಲ್ವೆ ಬಜೆಟ್; ಹಳಿ ಏರದ ಬಾಗಲಕೋಟೆ ಜನರ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕೇಂದ್ರ ರೈಲ್ವೆ ಬಜೆಟ್ ಜಿಲ್ಲೆಯ ಪಾಲಿಗೆ ಶ್ಯೂನವಾಗಿದೆ. ಯಾವೊಂದು ಹೊಸ ರೈಲಾಗಲಿ, ಹೊಸ ರೈಲು ಮಾರ್ಗವಾಗಲಿ ಹಾಗೂ ಈಗಾಗಲೇ ಘೋಷಣೆಯಾದ ಮಾರ್ಗಕ್ಕೆ ಬಜೆಟ್‌ನಲ್ಲಿ ಅನುದಾನವಾಗಲಿ ಬಿಡುಗಡೆಯಾಗಿಲ್ಲದಿರುವುದು ಜಿಲ್ಲೆಯ ಜನತೆಯನ್ನು ನಿರಾಶೆಗೆ ನೂಕಿದೆ.ಬಾದಾಮಿ ಮತ್ತು ಆಲಮಟ್ಟಿ ರೈಲ್ವೆ ನಿಲ್ದಾಣಗಳನ್ನು `ಆದರ್ಶ ರೈಲು ನಿಲ್ದಾಣ~ ಎಂದು ಘೋಷಿಸಿರುವುದು ಹಾಗೂ ಗದಗ-ಸೊಲ್ಲಾಪುರ ಮಾರ್ಗವನ್ನು ಡಬ್ಲಿಂಗ್ ಸಂಬಂಧ ಸರ್ವೇ ಮಾಡಲು ಅನುಮತಿ ನೀಡಿರುವುದು ಈ ಭಾರಿಯ ರೈಲ್ವೆ ಬಜೆಟ್ ವಿಶೇಷವಾಗಿದೆ.ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲೆಯ ಬಹುತೇಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಹೋರಾಟಗಾರರು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.`ಕನಸಿನಲ್ಲೇ ಕಾಲ ಕಳೆಯುವಂತಾಗಿದೆ~

ಪ್ರಸಕ್ತ ಸಾಲಿನ ರೈಲು ಬಜೆಟ್ ಉತ್ತರ ಕರ್ನಾಟಕಕ್ಕೆ ನಿರಾಶೆ ಮೂಡಿಸಿದೆ. ಜನತೆ ಕನಸಿನಲ್ಲೇ ಕಾಲ ಕಳೆಯುವಂತಾಗಿದೆ. ಪ್ರಾದೇಶಿಕ ಅಸಮಾನತೆಗೆ ಕೇಂದ್ರ ರೈಲ್ವೆ ಬಜೆಟ್ ಕಾರಣವಾಗಿದೆ.ಸಚಿವ ಮುನಿಯಪ್ಪ ಅವರು ಕೂಡಲಸಂಗಮಕ್ಕೆ ಬಂದಾಗ ಹಾಗೂ ಹಲವಾರು ಭಾರಿ ಭೇಟಿಯಾದಾಗ ಈ ಭಾಗದ ರೈಲ್ವೆ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಅವರ ಭರವಸೆ ಕೇವಲ ಮೂಗಿಗೆ ತುಪ್ಪ ಸವರಿದಂತಾಗಿದೆ.ಬಾಗಲಕೋಟೆ- ರಾಯಚೂರು ಹೊಸ ರೈಲು ಮಾರ್ಗಕ್ಕೆ ಈ ಭಾರಿಯ ಬಜೆಟ್‌ನಲ್ಲಿ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅಲ್ಲದೇ ಗದಗ-ಬಾಗಲಕೋಟೆ-ವಿಜಾಪುರ ಮಾರ್ಗದಲ್ಲಿ ಹೊಸ ಪ್ಯಾಸೆಂಜರ್ ರೈಲು ಓಡಿಸಬಹುದೆಂದು ನಿರೀಕ್ಷಿಸಲಾಗಿತ್ತು. ಬಾಗಲಕೋಟೆ-ಕುಡುಚಿ ರೈಲ್ವೆ ಮಾರ್ಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತದೆ ಎಂದು ಸಹ ನಿರೀಕ್ಷಿಸಲಾಗಿತ್ತು. ಇದರಲ್ಲಿ ಯಾವೊಂದು ಬೇಡಿಕೆ ಈಡೇರದಿರುವುದು ತೀವ್ರ ನಿರಾಸೆ ಮೂಡಿಸಿದೆ.

-ಜಯಬಸವ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮಜಿಲ್ಲೆಗೆ, ರಾಜ್ಯಕ್ಕೆ ಶೂನ್ಯವಾದ ಬಜೆಟ್

ಸೊಲ್ಲಾಪುರ-ಗದಗ ಮಾರ್ಗದ ಗೇಜ್ ಪರಿ ವರ್ತನೆಯಾದ ದಿನದಿಂದ ಇಲ್ಲಿಯ ವರೆಗೆ  ಈ ಮಾರ್ಗದಲ್ಲಿ ಹತ್ತಾರು ರೈಲು ಸಂಚರಿಸಬೇಕಿತ್ತು, ಆದರೆ ಈವರೆಗೂ ಸಾಧ್ಯವಾಗಿಲ್ಲ. ಈ ಭಾರಿಯ ರೈಲ್ವೆ ಬಜೆಟ್ ರಾಜ್ಯದ ಪಾಲಿಗೆ ಹಾಗೂ ಬಾಗಲಕೋಟೆ ಜಿಲ್ಲೆಯ ಪಾಲಿಗೆ ಶೂನ್ಯವಾಗಿದೆ. ಹಳೆಯದನ್ನೇ ಸಚಿವರು ಪುನರ್ ಉಚ್ಛರಿಸಿದ್ದಾರೆ. ಕೊನೆ ಪಕ್ಷ ಕುಡುಚಿ-ಬಾಗಲಕೋಟೆ ರೈಲು ಮಾರ್ಗವನ್ನು ನಿಗದಿತ ಸಮಯಕ್ಕೆಪೂರ್ಣಗೊಳಿಸುವ ಭರವಸೆಯೂ ಈ ಬಜೆಟ್‌ನಲ್ಲಿ ಸಿಕ್ಕದಿರುವುದು ನಿರಾಸೆ ಮೂಡಿಸದೆ.

ಪಿ.ಎಚ್.ಪೂಜಾರ

ಮಾಜಿ ಶಾಸಕರು, ಬಾಗಲಕೋಟೆಇದು ರೈಲ್ವೆ ಅಧಿಕಾರಿಗಳ ಬಜೆಟ್!

ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ಸಾರ್ವಜನಿಕ ವಾದುದಲ್ಲ, ರೈಲ್ವೆ ಅಧಿಕಾರಿಗಳೇ ರೂಪಿಸಿ ಮಂಡಿಸಿದ ಬಜೆಟ್ ಆಗಿದೆ.ಉತ್ತರ ಕರ್ನಾಟಕದ ಜನತೆ ರೈಲ್ವೆಗಾಗಿ ನಡೆಸಿದ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ, ಜನತೆಯ ಕೂಗಿಗೆ ಸಚಿವ ಮುನಿಯಪ್ಪ ಸ್ಪಂದಿಸಿಲ್ಲ, ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ.ವಿಜಾಪುರ-ಬಾಗಲಕೋಟೆ-ಗದಗ-ಬಳ್ಳಾರಿ ಮಾರ್ಗದಲ್ಲಿ ಹಗಲು ಹೊತ್ತಿನಲ್ಲಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಹಸಿರು ನಿಶಾನೆ ಸಿಗತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹಂಪಿ ಏಕ್ಸಪ್ರೆಸ್ ವಿಜಾಪುರದ ವರೆಗೆ ವಿಸ್ತರಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಕುಡುಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು, ಆದರೆ ಕೊನೆ ಪಕ್ಷ ಒಂದೇ ಒಂದು ಹೊಸ ರೈಲು ಸಹ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡದಿರುವುದು ತೀವ್ರ ನಿರಾಸೆ ಮೂಡಿಸದೆ.ಬಾದಾಮಿ ಮತ್ತು ಆಲಮಟ್ಟಿ ರೈಲು ನಿಲ್ದಾಣಗಳನ್ನು ಅದರ್ಶ ರೈಲು ನಿಲ್ದಾಣ ಎಂದು ಘೋಷಿಸಿರುವುದು ಸ್ವಾಗತಾರ್ಹ ಆದರೆ, 2010ರಲ್ಲಿ ಬಾಗಲಕೋಟೆ ರೈಲು ನಿಲ್ದಾಣವನ್ನೂ ಸಹ ಅದರ್ಶ ರೈಲು ನಿಲ್ದಾಣ ಎಂದು ಘೋಷಣೆ ಮಾಡಲಾಗಿತ್ತು, ಆದರೆ ಇದುವರೆಗೂ ರೂ. 5 ಕೋಟಿ ಅನುದಾನ ಬಿಡುಗಡೆಯಾಗಿಲ್ಲ ಹಾಗೂ ರೈಲುಗಳೇ ಈ ಮಾರ್ಗವಾಗಿ ಸಂಚರಿಸದಿರುವಾಗ ಆದರ್ಶ ರೈಲು ನಿಲ್ದಾಣ ಘೋಷಣೆಗೆ ಅರ್ಥವಿಲ್ಲ.ಈ ಭಾಗದ ಜನತೆ ಹೋರಾಟ ನಡೆಸಿದಾಗ ರೈಲ್ವೆ ಸಚಿವ ಮುನಿಯಪ್ಪ ನೀಡಿದ್ದ ಭರವಸೆಯನ್ನು ಮರೆತಿರುವುದು ವಿಷಾದಕರ, ಮುಂದಿನ ದಿನಗಳಲ್ಲಿ ಈ ಭಾಗದ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತೀವ್ರ ಹೋರಾಟ ರೂಪಿಸುತ್ತೇವೆ.

ಕುತ್ಬುದ್ದೀನ್ ಖಾಜಿ

ಅಧ್ಯಕ್ಷರು, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ.ನಿರಾಶಾದಾಯಕ  ಬಜೆಟ್

ಸೊಲ್ಲಾಪುರ ಮತ್ತು ಗದಗ ಬ್ರಾಡ್‌ಗೇಜ್ ಪರಿವರ್ತನೆಯಾದ ಮೇಲೆ ಹತ್ತುಹಲವು ರೈಲುಗಳು ಓಡಾಡಬೇಕಿತ್ತು. ಆದರೆ ಆ ತರಹದ ವ್ಯವಸ್ಥೆ ಆಗಲಿಲ್ಲ. ಮುಂಬೈ ಹಾಗೂ ಬೆಂಗಳೂರಿಗೆ ಹೋಗಲಿಕ್ಕೆ ಅತ್ಯಂತ ಕಡಿಮೆ ಸಮಯ, ಕಡಿಮೆ ಖರ್ಚಿನ ಪ್ರಯಾಣ ಇದ್ದರೂ ಈ ಭಾಗಕ್ಕೆ ಹೊಸದಾಗಿ ಯಾವುದೇ ಎಕ್ಸಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳನ್ನು ಈ ಮಾರ್ಗದ ಮುಖಾಂತರ ಓಡಿಸಲು ಅವಕಾಶ ನೀಡಿಲ್ಲ, ಈ ಭಾಗದ ಜನರು ಇದರಿಂದ ವಂಚಿತರಾಗಿದ್ದಾರೆ. ರೈಲ್ವೆ ಬಜೆಟ್ ನಿರಾಶದಾಯಕವಾಗಿದೆ.

ವೀರಣ್ಣ ಚರಂತಿಮಠ

ಶಾಸಕರು, ಬಾಗಲಕೋಟೆಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ

ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ರಾಜ್ಯ ಮತ್ತು ಜಿಲ್ಲೆಗೆ ಹೇಳಿಕೊಳ್ಳುವಂತ ಬಜೆಟ್ ಆಗಿಲ್ಲ, ಕೇವಲ ಮೈಸೂರು ಭಾಗಕ್ಕೆ ಹೊಸ ರೈಲ್ವೆ ಸೇವೆಗಳನ್ನು ಒದಗಿಸಲಾಗಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ.ಗದಗ-ಸೊಲ್ಲಾಪುರ ಮಾರ್ಗವನ್ನು ದ್ವಿಪಥ ಮಾಡುವ ಸಂಬಂಧ ಸರ್ವೇ ಮಾಡಲು ಅನುಮೋದನೆ ಸಿಕ್ಕಿದೆ, ಆಲಮಟ್ಟಿ, ಬಾದಾಮಿ, ಹಾವೇರಿ ರೈಲು ನಿಲ್ದಾಣಗಳನ್ನು ಅದರ್ಶ ರೈಲು ನಿಲ್ದಾಣ ಎಂದು ಗುರುತಿಸಲಾಗಿರುವುದು ಸಂತಸ ಸಂಗತಿ. ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಕೆಲ ಅಡಚಣೆ ಇರುವುದರಿಂದ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ.

ಪಿ.ಸಿ.ಗದ್ದಿಗೌಡರ.

ಸಂಸದ, ಬಾಗಲಕೋಟೆ.ಸಂತೋಷ ತಾರದ ಬಜೆಟ್

ಉತ್ತರ ಕರ್ನಾಟಕಕ್ಕೆ ಪ್ರಸಕ್ತ ರೈಲ್ವೆ ಬಜೆಟ್ ಯಾವುದೇ ರೀತಿಯ ಸಂತಸ ತಂದಿಲ್ಲ, ಮೈಸೂರಿಗೆ ಮಾತ್ರ ಹೊಸ ರೈಲು ಘೋಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ಸರ್ಕಾರ ಮತ್ತು ಸಚಿವರು ಯಾವುದೇ ರೀತಿ ಸ್ಪಂದಿಸಿಲ್ಲ.

ಬಸವಪ್ರಭು ಸರನಾಡಗೌಡ

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.