ಭಾನುವಾರ, ಜೂನ್ 20, 2021
20 °C

ರೈಲ್ವೆ ಸಚಿವ ತ್ರಿವೇದಿ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲ್ವೆ ಸಚಿವ ತ್ರಿವೇದಿ ರಾಜೀನಾಮೆ

ಕೋಲ್ಕತ್ತ/ನವದೆಹಲಿ (ಪಿಟಿಐ/ಐಎಎನ್‌ಎಸ್): ರೈಲು ಪ್ರಯಾಣ ದರ ಏರಿಸುವ ಮೂಲಕ ತಮ್ಮ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಭಾನುವಾರ ರಾತ್ರಿ ರಾಜೀನಾಮೆ ನೀಡಿದ್ದು ಐದು ದಿನಗಳ ನಾಟಕಕ್ಕೆ ತೆರೆ ಎಳೆದರು. ಮಮತಾ ಬ್ಯಾನರ್ಜಿ ಬರವಣಿಗೆಯಲ್ಲಿ ನೀಡದ ಹೊರತು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಭಾನುವಾರ  ಹಟ ಹಿಡಿದಿದ್ದ ತ್ರಿವೇದಿ ನಂತರ ರಾಜೀನಾಮೆ ನಿರ್ಧಾರವನ್ನು ಮಮತಾಗೆ ದೂರವಾಣಿ ಮೂಲಕ ತಿಳಿಸಿರುವುದಾಗಿ ದೆಹಲಿಯಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

`ನಾನು ಸಚಿವನಾಗಲು ತೃಣಮೂಲ ಕಾಂಗ್ರೆಸ್ ಪಕ್ಷ ಕಾರಣ. ಪಕ್ಷದ ನಿರ್ಧಾರಕ್ಕೆಬದ್ಧವಾಗಿ ಸ್ಥಾನದಿಂದ ಇಳಿಯಬೇಕು ಎಂದು ಮಮತಾ ತಿಳಿಸಿದರು~ ಎಂದರು. ತಮ್ಮ ನಿವಾಸದ ಹೊರಗೆ ಸೇರಿದ್ದ ವರದಿಗಾರರ ಬಳಿ ಮಧ್ಯಾಹ್ನ ಮಾತನಾಡಿದ್ದ ತ್ರಿವೇದಿ, `ನಾನು ರೈಲ್ವೆ ಸಚಿವಾಲಯಕ್ಕೆ ಅಂಟಿಕೊಳ್ಳಲು ಬಯಸುವುದಿಲ್ಲ. ಆದರೆ,  ಪ್ರಧಾನಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದರು. ಬಜೆಟ್ ಮಂಡಿಸಿದ ಕೆಲವೇ ದಿನಗಳಲ್ಲಿ ಬಜೆಟ್ ಪ್ರಸ್ತಾವನೆಗಳಿಗೆ ಪಕ್ಷದಿಂದಲೇ ವಿರೋಧ ಎದುರಿಸಿ ಸಚಿವರು ರಾಜೀನಾಮೆ ನೀಡಿದ ಮೊದಲ ಪ್ರಕರಣ ಇದಾಗಿದೆ.`ತ್ರಿವೇದಿ ರಾಜೀನಾಮೆಗೆ ಒಪ್ಪಿಕೊಂಡಿದ್ದಾರೆ.  ಪಕ್ಷ ತ್ಯಜಿಸುವುದಿಲ್ಲ~ ಎಂದು ತ್ರಿವೇದಿ ಹೇಳಿದ್ದಾಗಿ ಮಮತಾ ದೆಹಲಿಗೆ ತೆರಳುವ ಮುನ್ನ ಕೋಲ್ಕತ್ತದಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದರು. ಸಾಮಾನ್ಯ ಬಜೆಟ್ ಮಂಡನೆಯ ನಂತರ ತ್ರಿವೇದಿ ಅವರ ರಾಜೀನಾಮೆ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಧಾನಿ ಕಾರ್ಯಾಲಯ ಮಮತಾ ಅವರಿಗೆ ಭರವಸೆ ನೀಡಿದ್ದವು ಎನ್ನಲಾಗಿದ್ದು, ಭಾನುವಾರ ಪ್ರಧಾನಿ ಕಚೇರಿಯಿಂದ ಬಂದ ಸೂಚನೆ ಆಧರಿಸಿ ತ್ರಿವೇದಿ ರಾಜೀನಾಮೆ ನೀಡಿದರೆಂದು ಮೂಲಗಳು ತಿಳಿಸಿವೆ.ಮಮತಾ ಪಟ್ಟು: ತ್ರಿವೇದಿ ವಜಾಕ್ಕೆ ಪಟ್ಟು ಹಿಡಿದಿದ್ದ ಮಮತಾ, ಅವರ ಜಾಗದಲ್ಲಿ ಮುಕುಲ್ ರಾಯ್ ಅವರನ್ನು ನೇಮಿಸುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಲು ಭಾನುವಾರ ರಾತ್ರಿ  ದೆಹಲಿಗೆ ಆಗಮಿಸಿದ್ದು, ಸೋಮವಾರ ತಮ್ಮ ಪಕ್ಷದ ಸಂಸದರನ್ನೂ ಭೇಟಿಯಾಗಲಿದ್ದಾರೆ.

 

ಮಮತಾ ವಿಮಾನ ಏರುವ ಕೆಲವೇ ನಿಮಿಷಗಳ ಮುನ್ನ ತ್ರಿವೇದಿ ಅವರಿಗೆ ಕರೆ ಮಾಡಿ ರಾಜೀನಾಮೆ ನೀಡುವುದಾಗಿ ಒಪ್ಪಿಕೊಂಡರು ಎನ್ನಲಾಗಿದೆ. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಚೇತಕರಾದ ಕಲ್ಯಾಣ್ ಬ್ಯಾನರ್ಜಿ ಶನಿವಾರ ತ್ರಿವೇದಿ ಅವರಿಗೆ ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಆನಂತರವೂ ತ್ರಿವೇದಿ ರೈಲ್ವೆ ಭವನಕ್ಕೆ ತೆರಳಿ ರೈಲ್ವೆ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಲು ಖುದ್ದು ಮಮತಾ ದೆಹಲಿಗೆ ತೆರಳಲು ಮುಂದಾದರು. ಪ್ರಧಾನಿ ಸಿಂಗ್ ಅವರು ತ್ರಿವೇದಿ ಅವರನ್ನು ರೈಲ್ವೆ ಸಚಿವ ಸ್ಥಾನದಿಂದ ವಜಾ ಮಾಡದಿದ್ದಲ್ಲಿ ಲೋಕಸಭೆಯಲ್ಲಿ 19 ಸದಸ್ಯರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಯುಪಿಎ ಮೈತ್ರಿಕೂಟದಿಂದ ಹೊರನಡೆಯುವ ಸಾಧ್ಯತೆ ಇದೆ ಎಂಬ ಗುಸುಗುಸು ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿತ್ತು.ತೃಣಮೂಲ ಕಾಂಗ್ರೆಸ್ ಮೂಲಗಳ ಪ್ರಕಾರ, ಕೇಂದ್ರ ಬಜೆಟ್ ಮಂಡನೆಯಾದ ಎರಡು ದಿನಗಳ ನಂತರ ತ್ರಿವೇದಿ ಬದಲಾಗಿ ಮುಕುಲ್ ರಾಯ್ ಅವರನ್ನು ನೇಮಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಮಮತಾ ಅವರಿಗೆ ಭರವಸೆ ನೀಡಿದ್ದರು.ಹಾಗೆಂದು ತ್ರಿವೇದಿ ವಜಾಕ್ಕೆ ಮಮತಾ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಆದರೂ ಸೋಮವಾರದ ಹೊತ್ತಿಗೆ ರೈಲ್ವೆ ಸಚಿವರು ಬದಲಾಗಬೇಕು ಎಂದು ದೀದಿ ಆಶಿಸಿದ್ದಾರೆ ಎಂದೂ ಟಿಎಂಸಿ ಮೂಲಗಳು ಹೇಳಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.