ಗುರುವಾರ , ಫೆಬ್ರವರಿ 25, 2021
26 °C

ರ್‍ಯಾಂಪ್‌ ಬೆಳಕಿನಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರ್‍ಯಾಂಪ್‌ ಬೆಳಕಿನಲ್ಲಿ...

ಎಂಜಿನಿಯರಿಂಗ್‌ನಲ್ಲಿ ಗೋಲ್ಡ್‌ ಮೆಡಲ್‌ ಪಡೆದುಕೊಂಡು, ಎಂಬಿಎ ಮುಗಿಸಿ, ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಸಾಕ್ಷಿ ಅಗರ್‌ವಾಲ್‌. ಬಣ್ಣದ ಗೀಳು ಹತ್ತಿಸಿಕೊಂಡ ನಂತರ ಅವರು ಚಿತ್ರರಂಗದ ಕದ ತಟ್ಟಿದರು. ಮೊದಲಿನಿಂದಲೂ ಮಾಡೆಲಿಂಗ್‌ ನಂಟು ಇದ್ದಿದ್ದರಿಂದ ಅವರ ಚಿತ್ರಯಾನ ಸರಾಗವಾಗಿಯೇ ಶುರುವಾಯಿತು.ಸೂಪರ್‌ ಮಾಡೆಲ್‌ ಎಂಬ ವಿಶೇಷಣ ಅನೇಕ ಜಾಹೀರಾತುಗಳು ಹಾಗೂ ಕನ್ನಡವೂ ಸೇರಿದಂತೆ ನಾಲ್ಕೈದು ತಮಿಳು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ತಂದುಕೊಟ್ಟಿತು. ಸಾಕ್ಷಿ ಅಗರ್‌ವಾಲ್‌ ಸದ್ಯಕ್ಕೆ ‘ಸಾಫ್ಟ್‌ವೇರ್‌ ಗಂಡ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಗಳಿಗಿಂತ ಇತ್ತೀಚೆಗೆ ಮಾಡೆಲಿಂಗ್‌ನಲ್ಲಿ ಹೆಚ್ಚು ಬ್ಯುಸಿಯಾಗಿರುವ ಸಾಕ್ಷಿ, ಈಚೆಗೆ ನಗರದಲ್ಲಿ ನಡೆದ ಫ್ಯಾಷನ್‌ ವೀಕ್‌ನಲ್ಲಿ ಶೋ ಸ್ಟಾಪರ್‌ ಆಗಿ ಕಾಣಿಸಿಕೊಂಡರು. ಹಳದಿ ಬಣ್ಣದ ಲೆಹೆಂಗಾದಲ್ಲಿ ಯುವರಾಣಿಯಂತೆ ಕಾಣಿಸಿಕೊಂಡ ಅವರು ‘ಮೆಟ್ರೊ’ ಜತೆ ಮಾತನಾಡಿದರು.‘ದೇಶದ ಶ್ರೀಮಂತ ಸಂಸ್ಕೃತಿಯನ್ನು ಗಮನದಲ್ಲಿರಿಸಿಕೊಂಡು ರೂಅಫ್ಜಾ ಅವರು ವಿನ್ಯಾಸ ಮಾಡಿದ ವಸ್ತ್ರವೈವಿಧ್ಯ ಎಲ್ಲರಿಗೂ ಅಚ್ಚುಮೆಚ್ಚಾಗುವಂತಿವೆ. ನಿಯಾನ್‌ ಹಳದಿ, ಪಿಂಕ್‌ ಹಾಗೂ ಹಸಿರು ಬಣ್ಣದ ಮೇಲೆ ರೂಅಫ್ಜಾ ಅದ್ಭುತ ವಿನ್ಯಾಸ ಮಾಡಿದ್ದಾರೆ. ಸೀರೆ ವಿನ್ಯಾಸದಂತೆಯೇ ಆಕೆ ಮನಮೋಹಕ ಲೆಹೆಂಗಾಗಳನ್ನು ವಿನ್ಯಾಸ ಮಾಡಿದ್ದಾರೆ. ಅವರ ಕೈಯಲ್ಲಿ ಅರಳಿದ ಸುಂದರ ವಸ್ತ್ರಗಳನ್ನು ಧರಿಸಿ ರ್‍ಯಾಂಪ್ ವಾಕ್‌ ಮಾಡುವ ಅವಕಾಶ ದೊರೆತಿದ್ದು ನಿಜಕ್ಕೂ ತುಂಬ ಖುಷಿ ಕೊಟ್ಟಿತು.ಬ್ಲೆಂಡರ್ಸ್‌ ಪ್ರೈಡ್‌ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದ್ದು ಮರೆಯಲಾಗದ ಅನುಭವ. ಅದರಲ್ಲೂ ರೂಅಫ್ಜಾ ಅವರ ಆಕರ್ಷಕ ವಿನ್ಯಾಸ ವಸ್ತ್ರಗಳಿಗೆ ಶೋ ಸ್ಟಾಪರ್‌ ಆಗಿ ಕಾಣಿಸಿಕೊಂಡಿದ್ದು ಮತ್ತಷ್ಟು ಖುಷಿಕೊಟ್ಟಿತು. ವಿವಿಧ ವಿನ್ಯಾಸಕರು ಮಾಡಿದ ವಸ್ತ್ರವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿ ಸಿಕ್ಕಿತು. ಇಲ್ಲಿ ಭಾಗವಹಿಸಿದ ಖುಷಿ ನಗರದಲ್ಲಿ ಮುಂದೆ ನಡೆಯುವ ಫ್ಯಾಷನ್‌ ಶೋಗಳಲ್ಲೂ ಮತ್ತೆ ಮತ್ತೆ ಭಾಗವಹಿಸುವ ಉತ್ಸಾಹವನ್ನಂತೂ ತುಂಬಿತು.ಅಂದಹಾಗೆ, ನಾನೀಗ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಮಾಡೆಲಿಂಗ್‌ನಲ್ಲಿ ಬ್ಯುಸಿ. ತಮಿಳಿನ ‘ರಾಜ ರಾಣಿ’, ‘ನೋ ಪಾರ್ಕಿಂಗ್‌’ ಸಿನಿಮಾ ಮಾಡಿ ಮುಗಿಸಿದ್ದಾಗಿದೆ. ಅದರ ನಡುವೆ ಸಾಕಷ್ಟು ಜಾಹೀರಾತುಗಳಿಗೆ ಮುಖವೊಡ್ಡಿದ್ದಾಗಿದೆ. ಈಗ ಕನ್ನಡ ಚಿತ್ರ ‘ಸಾಫ್ಟ್‌ವೇರ್‌ ಗಂಡ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ನನ್ನದು ಬಬ್ಲಿ ಹುಡುಗಿಯ ಪಾತ್ರ. ಜಗ್ಗೇಶ್‌ ಅವರೊಂದಿಗೆ ನಟಿಸುವುದು ತುಂಬ ಖುಷಿ ಕೊಡುತ್ತದೆ. ಚಿತ್ರೀಕರಣದ ವೇಳೆ ಜಗ್ಗೇಶ್‌ ಅವರ ಒಡನಾಟ ಮುದ ನೀಡಿತು. ‘ಸಾಫ್ಟ್‌ವೇರ್‌ ಗಂಡ’ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಈಗ ಮತ್ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಅವಕಾಶಗಳಂತೂ ಸಾಕಷ್ಟಿವೆ. ಈ ಒಂದು ಚಿತ್ರ ಪೂರೈಸಿದ ಬಳಿಕ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಯೋಜನೆ ಇದೆ’ ಎನ್ನುತ್ತಾರೆ ಸಾಕ್ಷಿ.ಅಂದಹಾಗೆ, ಬಾಲಿವುಡ್‌ ಬೆಡಗಿ ಮುಗ್ಧಾ ಗೋಡ್ಸೆ ಅವರು ಖ್ಯಾತ ವಸ್ತ್ರವಿನ್ಯಾಸಕ ಅಸ್ಲಂ ಖಾನ್‌ ಅವರು ವಿನ್ಯಾಸ ಮಾಡಿದ ದಿರಿಸು ತೊಟ್ಟು ರ್‍ಯಾಂಪ್ಪ್‌ ಮೇಲೆ ಮಿಂಚು ಹರಿಸಿದರು. ಈ ವೇಳೆ ಅವರು ಅಸ್ಲಂ ಖಾನ್‌ ವಿನ್ಯಾಸದ ಬಗ್ಗೆ ಮಾತನಾಡಿದ್ದು ಹೀಗೆ: ‘ಅಸ್ಲಂ ಖಾನ್‌ ಕಲೆಕ್ಷನ್‌ ಅಂದರೆ ಅದು ಯಾವಾಗಲೂ ಸುಂದರವಾಗಿರುತ್ತದೆ ಎಂಬುದು ನನ್ನ ಭಾವನೆ. ಆತ ವಿನ್ಯಾಸ ಮಾಡಿದ ವಧು ಸಂಗ್ರಹ, ಲೆಹೆಂಗಾ, ಗಾಘ್ರಾ ಇವೆಲ್ಲವೂ ಫ್ಯಾಷನ್‌ ಪ್ರಿಯರನ್ನು ಪುಳಕಗೊಳಿಸುತ್ತವೆ. ವಿವಿಧ ಬಗೆಯ ಗಾಢ ಬಣ್ಣಗಳನ್ನು ಆಯ್ಕೆ ಮಾಡಿಕೊಂಡು ಅದರ ಮೇಲೆ ಅವರು ವಿನ್ಯಾಸಗೊಳಿಸುವ ರೀತಿ ನನಗೆ ಇಷ್ಟವಾಗುತ್ತದೆ. ಹಾಗಾಗಿ, ನಾನು ಅಸ್ಲಂ ಖಾನ್‌ ವಿನ್ಯಾಸ ವಸ್ತ್ರಗಳಿಗೆ ಶೋ ಸ್ಟಾಪರ್‌ ಆಗಿ ಪಾಲ್ಗೊಂಡೆ’.ಅಸ್ಲಂ ಕೈಯಲ್ಲಿ ಅರಳಿದ ಸೂಕ್ಷ್ಮ ಕುಸುರಿಯುಳ್ಳ ಸೀರೆ ಧರಿಸಿ ರ್‍ಯಾಂಪ್ವಾಕ್‌ ಮಾಡಿದ ಮುಗ್ಧಾ ಒಂದು ಕ್ಷಣ ರ್‍ಯಾಂಪ್ಮೇಲೆ ಮಿಂಚು ಹರಿಸಿದರು. ‘ಅಸ್ಲಂ ಖಾನ್‌ ವಿನ್ಯಾಸ ಮಾಡಿದ ಕೆನೆ ಬಣ್ಣದ ಸೀರೆಯುಟ್ಟು ರ್‍ಯಾಂಪ್ ಮೇಲೆ ನಡೆದು ಬರುವಾಗ ನಾನು ಗ್ಲ್ಯಾಮ್‌ ದಿವಾ ಆಗಿದ್ದೆ!. ಸಿನಿಮಾಗಳಲ್ಲಿ, ಪಾರ್ಟಿಗಳಲ್ಲಿ ತುಂಡು ಬಟ್ಟೆ ತೊಟ್ಟರೂ, ನನಗೆ ಸೀರೆಗಳು ಅಚ್ಚುಮೆಚ್ಚು. ಸೀರೆಯ ನಂತರ ಲೆಹೆಂಗಾ ಇಷ್ಟವಾಗುತ್ತದೆ. ಮದುವೆ, ಪಾರ್ಟಿ ಹೀಗೆ ಆಯಾ ಸಂದರ್ಭಕ್ಕೆ ಹೊಂದುವಂತೆ ವಸ್ತ್ರಗಳ ಆಯ್ಕೆ ಮಾಡಿಕೊಳ್ಳುತ್ತೇನೆ.ಆದರೆ, ಸೀರೆ ಮಾತ್ರ ನನ್ನ ಆಲ್‌ಟೈಂ ಫೇವರಿಟ್‌ ದಿರಿಸು’ ಎಂದರು 27 ವರ್ಷದ ಚೆಲುವೆ ಮುಗ್ಧಾ, ಈಚೆಗಷ್ಟೇ ಎರಡು ಬಾಲಿವುಡ್‌ ಸಿನಿಮಾಗಳನ್ನು ಮುಗಿಸಿರುವ ಮುಗ್ಧಾ, ಈಗ ಎಂ ಟೀವಿಯಲ್ಲಿ ಮೂಡಿಬರುವ ‘ಯೂತ್‌ ಕಾಂಟೆಸ್ಟ್‌’ನಲ್ಲಿ ತೀರ್ಪುಗಾರಳಾಗಿ ಭಾಗವಹಿಸುತ್ತಿದ್ದಾರೆ. ಅದು ಬಿಟ್ಟರೆ ಬೇರಾವುದೇ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿ ಇಲ್ಲವಂತೆ. ‘ಬೆಂಗಳೂರು ಅಂದರೆ ನನಗೆ ತುಂಬಾನೇ ಇಷ್ಟ. ಇಲ್ಲಿನ ಜನರ ರಾಕಿಂಗ್‌ ಸಂಸ್ಕೃತಿ ಆಪ್ತವಾಗುತ್ತದೆ’ ಎಂದು ಹೂನಗು ಸೂಸುತ್ತಾ ಮಾತಿಗೆ ವಿರಾಮದ ಮುದ್ರೆಯೊತ್ತಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.