ಶನಿವಾರ, ಮೇ 15, 2021
29 °C

ಲಕಲಕಿಸುವ ಕಾಳು ಮೆಣಸು

-ಪೂರ್ಣಿಮಾ ಕಾನಹಳ್ಳಿ . Updated:

ಅಕ್ಷರ ಗಾತ್ರ : | |

`ವ್ಹಾವ್ ಅದ್ಭುತ! ನಾನು ಪ್ರಪಂಚದಲ್ಲಿ ಕಾಳುಮೆಣಸು ಬೆಳೆಯುವ ಎಂಟು ದೇಶಗಳನ್ನು ನೋಡಿ ಬಂದಿದ್ದೇನೆ. ಇಂತಹ ತೋಟವನ್ನು ಕಂಡಿರಲಿಲ್ಲ...' ಹೀಗೆಂದು ಸಂಭ್ರಮಾಶ್ಚರ್ಯಗಳಿಂದ ಉದ್ಗರಿಸಿದವರು ಸಾಂಬಾರ ಮಂಡಳಿಯ ಅಧ್ಯಕ್ಷರಾಗಿದ್ದ ವಿ. ಜೆ. ಕುರಿಯನ್.ಚಿಕ್ಕಮಗಳೂರು ಜಿಲ್ಲೆಯ ಜಿ. ಹೊಸಹಳ್ಳಿ ಮೂಡಿಗೆರೆ ಮಾರ್ಗದಲ್ಲಿ ಸಿಗುವ ಲಕ್ಷ್ಮಯ್ಯನವರ ದುರ್ಗಾಲಕ್ಷ್ಮಿ ಎಸ್ಟೇಟ್‌ನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸುತ್ತಾಡಿದಾಗ ಅವರು ಅಚ್ಚರಿಗೊಂಡಿದ್ದರು. ಮುಸ್ಸಂಜೆಯ ಇಳಿಬಿಸಿಲು ಕಾಳುಮೆಣಸಿನ ಗೊಂಚಲುಗಳ ಮೇಲೆ ಮಂದಹಾಸ ಚೆಲ್ಲುವವರೆಗೂ ತೋಟವನ್ನು ಬಿಟ್ಟು ಹೋಗದ ಅವರು ವೀಡಿಯೊ ರೆಕಾರ್ಡಿಂಗ್ ಕೂಡ ಮಾಡಿಸಿದರು.ಕುರಿಯನ್ ಅವರು ಮಾತ್ರವಲ್ಲದೇ ನೋಡುಗರೆಲ್ಲರನ್ನೂ ನಿಬ್ಬೆರಗಾಗಿಸುವ ಹಾಗೆ ಕಾಳುಮೆಣಸಿನ ಕೃಷಿ ಮಾಡಿದ ಲಕ್ಷ್ಮಯ್ಯನವರು ಮೂಲತಃ ಹಾಸನದವರು. ಇವರು ಕೃಷಿಗೆ ಬಂದಾಗ 34 ವರ್ಷ. ಆರಂಭದಲ್ಲಿ ಪ್ಲೈವುಡ್ ವ್ಯವಹಾರ ಮಾಡುತ್ತಿದ್ದ ಇವರಿಗೆ ಪ್ರಾರಂಭದ ದಿನಗಳು ಸುಲಭವಾಗೇನಿರಲಿಲ್ಲ. ಆಸಕ್ತಿಯಿಂದ ಸಿಲ್ವರ್, ಕಾಫಿ ನಂತರ ಕಾಳುಮೆಣಸು ಹಾಕಿದರು.

ಒಮ್ಮೆ ಇದ್ದಕ್ಕಿದ್ದಂತೆ ಇಂಡೊನೇಶಿಯಾದ ಅಂತರರಾಷ್ಟ್ರೀಯ ಸಮಿತಿಯಿಂದ ದೂರವಾಣಿ ಕರೆ ಬಂತು. `ಕಾಳು ಮೆಣಸಿನ ಬೆಳೆಯಲ್ಲಿ ನೀವು ಮಾಡಿರುವ ಸಾಧನೆಗೆ ನಿಮ್ಮನ್ನು ಅಭಿನಂದಿಸುತ್ತೇವೆ. ಹಾಗೆಯೇ `ಭಾರತದ ಅತ್ಯುತ್ತಮ ಬೆಳೆಗಾರರು' ಎಂಬ ಅಂತರರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದ್ದೇವೆ. ಬಂದು ಸ್ವೀಕರಿಸಿ' ಎಂಬ ಕರೆ ಅದು. ಆ ಕರೆಯನ್ನು ನಯವಾಗಿಯೇ ನಿರಾಕರಿಸಿ, ಆ ವಿಷಯವನ್ನೇ ಮರೆತುಬಿಟ್ಟಿದ್ದರು ಲಕ್ಷ್ಮಯ್ಯನವರು.ವಿಶೇಷ ಕೃಷಿ ವಿಧಾನ

ಆದರೆ ಇತ್ತೀಚೆಗೆ ಸಕಲೇಶಪುರದಲ್ಲಿ ಸಾಂಬಾರ ಮಂಡಳಿಯಿಂದ, ಇಂಡೊನೇಶಿಯದಿಂದ ಕಳುಹಿಸಿದ ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು. ಎಲ್ಲೆಡೆ ಕಪ್ಪುಬಂಗಾರವೆಂದು ಕರೆಯಲ್ಪಡುವ, ಕಾಳುಮೆಣಸು ಸೊರಗು ರೋಗಕ್ಕೆ ತುತ್ತಾಗಿರುವಾಗ, ಲಕ್ಷ್ಮಯ್ಯನವರ ತೋಟ ಪ್ರಪಂಚದಲ್ಲಿಯೆ ಅದ್ಭುತವೆನಿಸಲು ಅವರದ್ದೇ ಆದ ಕೃಷಿ ವಿಧಾನಗಳೇ ಕಾರಣ.ಇವರು ಕಾಳುಮೆಣಸು ಬೆಳೆಯಲು ಆರಂಭಿಸಿದ ದಿನಗಳಲ್ಲಿ ಕಾಳು ಮೆಣಸಿಗೆ ಅಂತಹ ಬೆಲೆಯೇನಿರಲಿಲ್ಲ. ಒಂದು ಕೆ.ಜಿಗೆ 15ರಿಂದ 20 ರೂಪಾಯಿ ಬೆಲೆ ಇತ್ತು. ಈಗ 350 ರೂಪಾಯಿ ಇದೆ. `ಪ್ರಾರಂಭದಲ್ಲಿ ಸಿಲ್ವರ್ ಮರಗಳಿಗೆ 3000 ಬೀಳು ಹಾಕಿದೆ ಎನ್ನುವ ಇವರದು ಸರಳ ಕೃಷಿ. ಅತಿಯಾದ ರಾಸಾಯನಿಕಗಳ ಬಳಕೆಯಿಲ್ಲ.ಕೃಷಿ ವಿಧಾನ

ನೀರು: ನೀರು ಕಾಳುಮೆಣಸಿನ ಮಿತ್ರ, ಅತಿಯಾದರೆ ಅದೇ ಶತ್ರು. ಕಾಳು ಮೆಣಸಿನ ಬಳ್ಳಿಗಳಿಗೆ ಬಿಸಿಲು ಬೀಳಬೇಕಾದ ಸಮಯದಲ್ಲಿ ಬೀಳಲೇಬೇಕು. ನೀರು ಕೊಡಬೇಕಾದ ಸಮಯದಲ್ಲಿ ಕೊಡಲೇಬೇಕು ಎಂದು ಖಚಿತವಾಗಿ ನುಡಿಯುತ್ತಾರೆ ಲಕ್ಷ್ಮಯ್ಯ. ಕೊಯ್ಲಿನ ನಂತರ ಹದವಾಗಿ ಮರಗಸಿ ಮಾಡಿಸಿ 15 ದಿನಕ್ಕೊಮ್ಮೆ ತುಂತುರು ನೀರಾವರಿಯಿಂದಾಗಲೀ ನೀರು ಕೊಡಬೇಕು.

ಏಪ್ರಿಲ್- ಮೇ ಮುಗಿಯುವುದರೊಳಗೆ 10 ಇಂಚು ಮಳೆ ಬಿದ್ದಷ್ಟು ನೀರು ಬೀಳಬೇಕು. ಇಷ್ಟು ಪ್ರಮಾಣದ ನೀರು ಬಿದ್ದಾಗ, 40 ದಿನಗಳ ನಂತರ ಗರಿ ಮೂಡುತ್ತವೆ. ಫಸಲು ಗ್ಯಾರಂಟಿ. ಜೂನ್‌ನಲ್ಲಿ ತುಂತುರು ಮಳೆ ಶುರುವಾಗುವ ಹೊತ್ತಿಗೆ ಈ ಗರಿಗಳು (ಹೂವು) ದೃಢವಾಗಿರುತ್ತವೆ. ನೀರು ಕೊಡದೆ ಮಳೆಯನ್ನು ನೆಚ್ಚಿ ಕೂತರೆ ಜೂನ್ ಜುಲೈನಲ್ಲಿ ಗರಿ ಹಿಡಿದು, ನಂತರ ಜೋರು ಮಳೆ ಹಿಡಿದಾಗ, ಶೀತ ಹೆಚ್ಚಾದಾಗ ಕೊಳೆರೋಗ, ದಾಟುಕಾಳು, ಹೂವು ಉದುರುವಿಕೆ ಉಂಟಾಗುತ್ತದೆ.

ಸೋನೆ ಹಿಡಿಯುವುದರ ಒಳಗೆ ಗರಿ ಮೂಡಿದರೆ ಬೆಳೆ ನಿಶ್ಚಿತವಾಗಿ ಕೈ ಸೇರುತ್ತದೆ ಎಂಬುದು ಇವರ ಅನುಭವದ ಮಾತು. ಮಳೆಯ ನೀರು ಗಿಡದ ಬುಡದಲ್ಲಿ ನಿಲ್ಲಬಾರದು. ಒಂದು ದಿನ ನಿಂತರೆ ಖಂಡಿತ ಬೀಳು ಸಾಯುತ್ತದೆ. ನೀರಿಗಾಗಿ ಮೂರು ಕೆರೆಗಳಿವೆ.ಗೊಬ್ಬರ: ನೀರು ಕೊಟ್ಟ ಕೂಡಲೆ ಬೀಳಿಗನುಸಾರವಾಗಿ (ಏಪ್ರಿಲ್, ಮೇ) ದನದ ಗೊಬ್ಬರ ಕೊಡಲಾಗುತ್ತದೆ. ಇನ್ನುಳಿದಂತೆ ಮಳೆಗಾಲದಲ್ಲಿ ಕಾಫಿಗೆ ಹಾಕುವ ಗೊಬ್ಬರವನ್ನೇ ಹಾಕುತ್ತಾರೆ. ಉದುರಿದ ಎಲೆಗಳು ಮಳೆಯಲ್ಲಿ ಕರಗಿ ಸಹಜವಾಗಿ ಗೊಬ್ಬರವಾಗುತ್ತದೆ. ಎರೆಗೊಬ್ಬರವಾಗಲಿ, ಟ್ರೈಕೋಡರ್ಮವಾಗಲಿ ಎಂದೂ ಹಾಕಿಲ್ಲ.ಸ್ಪ್ರೇ: 200 ಲೀಟರ್ ನೀರಿಗೆ 2 ಕೆ.ಜಿ ಬೇಯಿಸಿದ ಸುಣ್ಣ, 2 ಕೆ.ಜಿ ಮೈಲುತುತ್ತವನ್ನು ಬೆರೆಸಲಾಗುತ್ತದೆ. ವರ್ಷದಲ್ಲಿ ಎರಡು ಸಲ ಸ್ಪ್ರೇ ಮಾಡಲಾಗುತ್ತದೆ. ಸ್ಪ್ರೇ ಸುಣ್ಣವನ್ನು ತೆಳ್ಳಗೆ ಒಮ್ಮೆ ಬಳ್ಳಿಯ ಬುಡಕ್ಕೂ ಉದುರಿಸಲಾಗುತ್ತದೆ. ಸುಣ್ಣ ನೀರಲ್ಲಿ ಚೆನ್ನಾಗಿ ಕರಗಿದ ಮೇಲಷ್ಟೆ ಮೈಲುತುತ್ತದ ಮಿಶ್ರಣ ಬೆರೆಸಬೇಕು.ಇಳುವರಿ, ಕಟಾವು

ಪ್ರಾರಂಭದ ದಿನಗಳಲ್ಲಿ ಇಳುವರಿ 10ಟನ್ ಒಳಗಿದ್ದಾಗ ತಾವೇ ಕಟಾವು ಮಾಡಿಸುತ್ತಿದ್ದರು. ಈಗ ಕೇರಳದವರಿಗೆ ಫಸಲು ಕೊಡುತ್ತಾರೆ. ಹೆಚ್ಚೆಂದರೆ ವರ್ಷಕ್ಕೆ 70 ಟನ್, ಸರಾಸರಿ 40 ಟನ್ ಸಿಗುತ್ತಿದೆ. ಕೃಷಿಯಷ್ಟು ಆದಾಯ ತಂದು ಕೊಡುವ ಕ್ಷೇತ್ರ ಮತ್ತೊಂದಿಲ್ಲ ಎನ್ನುವುದು ಲಕ್ಷ್ಮಯ್ಯನವರ ಅಭಿಮತ.

ಮಾಹಿತಿಗೆ 9449242190.

-ಪೂರ್ಣಿಮಾ ಕಾನಹಳ್ಳಿ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.