ಸೋಮವಾರ, ಮೇ 17, 2021
31 °C

ಲಿಡ್ಕರ್ ನಿಗಮ ಪುನಶ್ಚೇತನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಚಮ್ಮಾರರ ಬದುಕಿಗೆ ಆಸರೆಯಾಗಬೇಕಿದ್ದ `ಲಿಡ್ಕರ್ ಲೆದರ್ ಎಂಪೋರಿಯಂ' ರೋಗಗ್ರಸ್ಥ ಸ್ಥಿತಿ ತಲುಪಿದೆ.

ಚಮ್ಮಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದ ಲಿಡ್ಕರ್ ಲೆದರ್ ಎಂಪೋರಿಯಂ ಪ್ರಸ್ತುತ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವಾಗಿ ಬದಲಾಗಿದೆ. ಆದರೆ ನಿಗಮವನ್ನು ನಂಬಿದ ಚಮ್ಮಾರರ ಬದುಕು ಕೊಂಚವೂ ಬದಲಾಗಿಲ್ಲ.ಗೂಡಂಗಡಿಗಳಲ್ಲಿ ಚಮ್ಮಾರಿಕೆ ವೃತ್ತಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಬಡ ಚಮ್ಮಾರರನ್ನು ಆರ್ಥಿಕವಾಗಿ ಮೇಲೆತ್ತಲು ಸರ್ಕಾರ ನಿಗಮ ಸ್ಥಾಪಿಸಿತು. ಚರ್ಮಕುಟೀರ, ಮೂಲ ಬಂಡವಾಳದ ಜೊತೆಗೆ ಧನಸಹಾಯ, ಚಮ್ಮಾರರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ನೇರ ಮಾರಾಟ ಮಾಡುವುದು ನಿಗಮದ ಕೆಲಸವಾಗಿತ್ತು.ಚಮ್ಮಾರರು ತಯಾರಿಸಿದ ಶೂ, ಚಪ್ಪಲಿ ಸೇರಿದಂತೆ ಇತರೆ ಚರ್ಮೋತ್ಪನ್ನಗಳನ್ನು ಸರ್ಕಾರಿ ಕಾರ್ಮಿಕರು, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಸಗಟು ರೂಪದಲ್ಲಿ ಸರಬರಾಜು ಮಾಡಿ, ಉತ್ತಮ ಲಾಭವನ್ನೂ ಗಳಿಸುತ್ತಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ನಿಗಮಕ್ಕೆ ಬಂದ ಅನನುಭವಿ ಅಧಿಕಾರಿವರ್ಗದ ನಿರಾಸಕ್ತಿಯೋ, ಚಮ್ಮಾರರ ಗ್ರಹಚಾರವೋ ಏನೋ ಎಂಬಂತೆ ವ್ಯವಹಾರ ಕುಸಿದಿದೆ. ಯಾವುದೇ ಅಭಿವೃದ್ಧಿ ಕಾಣದೆ ನಿಗಮ ರೋಗಗ್ರಸ್ಥ ಸ್ಥಿತಿ ತಲುಪಿದೆ. ಚಮ್ಮಾರರಿಗೆ ನೀಡುತ್ತಿದ್ದ ಹಲವು ಸೌಲಭ್ಯಗಳು ಸ್ಥಗಿತಗೊಂಡು, ನಿಗಮವು ಸಂಪೂರ್ಣ ನಿಷ್ಕ್ರೀಯಗೊಂಡಿದೆ ಎಂದು ಸಮ್ಮಾರ ವೃತ್ತಿಯಲ್ಲಿ ತೊಡಗಿಸಿಕೊಂಡವರ ಆರೋಪಬಾಗಿದೆ.ನೆರವಿಗೆ ಬರಲಿ: ಸಂಕಷ್ಟದಲ್ಲಿ ಜೀವನ ದೂಡುತ್ತಿರುವ ಚಮ್ಮಾರರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು.

ರೋಗಗ್ರಸ್ಥ ಸ್ಥಿತಿಯಲ್ಲಿರುವ ನಿಗಮವನ್ನು ಪುನಶ್ಚೇತನಗೊಳಿಸಿ, ಚಮ್ಮಾರರಿಗೆ ನೆರವು ನೀಡಬೇಕು ಎಂದು ಜಿಲ್ಲಾ ಚರ್ಮಕುಶಲ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಗೋಪಾಲ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.ಲಿಡ್ಕರ್ ನಿಗಮಕ್ಕೆ ಅನುಭವಿ ಹಾಗೂ ಕ್ರಿಯಾಶೀಲರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು. ನಿಗಮದ ಆಡಳಿತ ಮಂಡಳಿ ಸದಸ್ಯರನ್ನು ಜಿಲ್ಲೆಗೆ ಒಬ್ಬರಂತೆ ಆಯ್ಕೆ ಮಾಡಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶೂ, ಚಪ್ಪಲಿ ಹಾಗೂ ಇತರೆ ಚರ್ಮೋತ್ಪನ್ನಗಳ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಒತ್ತು ನೀಡಬೇಕು.

ಸ್ಥಳೀಯ ಚಮ್ಮಾರರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಈ ಹಿಂದಿನಂತೆಯೇ ಚಮ್ಮಾರರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ನೇರ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಚಮ್ಮಾರರ ಆರೋಗ್ಯ ರಕ್ಷಣೆಗೆ ಯಶಸ್ವಿನಿ ಯೋಜನೆ, ಚಮ್ಮಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಕಾರ್ಮಿಕರ ಕಲ್ಯಾಣ ನಿಧಿ, ಆಶ್ರಯ ನಿವೇಶನ ಹಾಗೂ ಮನೆ, ಸಣ್ಣ ಗೃಹಕೈಗಾರಿಕೆಗಳಿಗೆ ಸಾಲಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಿ ಚಮ್ಮಾರರನ್ನು ಆರ್ಥಿಕವಾಗಿ ಮೇಲೆತ್ತಬೇಕು ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.