ಗುರುವಾರ , ಜೂಲೈ 2, 2020
28 °C

ಲೋಕಾಯುಕ್ತರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಾಯುಕ್ತರಿಗೆ ದೂರು

ರೋಣ: ತಾಲ್ಲೂಕಿನ ಹೊನ್ನಾಪೂರ ಗ್ರಾಮದಲ್ಲಿರುವ 170 ಪಡಿತರ ಚೀಟಿದಾರರು ಪ್ರತಿ ತಿಂಗಳು ಪಡಿತರ ಪಡೆಯಲು ಪಕ್ಕದ ಸವಡಿ ಗ್ರಾಮಕ್ಕೆ ತೆರಳಬೇಕಾಗಿದ್ದು, ಪ್ರತಿ ತಿಂಗಳ ಪಡಿತರ ವಿತರಿಸಲು ಕ್ರಮ ಕೈಕೊಳ್ಳಬೇಕು ಎಂದು  ಗ್ರಾಮಸ್ಥರು ಲೋಕಾಯುಕ್ತ ಅಧಿಕಾರಿಗಳಿಗೆ ಬುಧವಾರ ದೂರು ನೀಡಿದ್ದಾರೆ.ಪಟ್ಟಣದ ತಾ.ಪಂ. ಸಭಾಭವನದಲ್ಲಿ ಜರುಗಿದ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಅಹ ವಾಲುಗಳನ್ನು ಸ್ವೀಕರಿಸುವ ಅವಧಿಯಲ್ಲಿ ಹೊನ್ನಾಪೂರ ಗ್ರಾಮಸ್ಥರು ದೂರು  ಸಲ್ಲಿಸಿದರು. ದೂರು ಸ್ವೀಕರಿಸಿದ  ಲೋಕಾಯುಕ್ತ ಇನಸ್ಪೆಕ್ಟರ್ ಕರಿಬಸನಗೌಡ ಈ ಕುರಿತು ತಾವು ಜಿಲ್ಲಾಧಿಕಾರಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮದಲ್ಲಿಯೇ ಪಡಿತರ ವಿತರಿಸಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು.‘ಸವಡಿ ಗ್ರಾಮದ ಪಡಿತರ ಚೀಟಿದಾರರು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ 16ಕೆ.ಜಿ.ಪಡಿತರ ವಿತರಿಸುವ ಬದಲಾಗಿ 12ಕೆ.ಜಿ ಪಡಿತರ ಮಾತ್ರ ನೀಡುತ್ತಿದ್ದಾರೆ’ ಎಂದು ದೂರಿದಾಗ, ಸ್ಥಳದಲ್ಲಿದ್ದ ಕಂದಾಯ ಇಲಾಖೆ ಶಿರಸ್ತೇದಾರರಿಗೆ ಗ್ರಾಮದಲ್ಲಿ ಸಮರ್ಪಕ ಪಡಿತರ ವಿತರಿಸಲು ಕ್ರಮ ಕೈಕೊಳ್ಳುವಂತೆ ಸೂಚಿಸಿದರು.ಬೆಳವಣಕಿ ಗ್ರಾಮಸ್ಥರೊಬ್ಬರು ಕಂದಾಯ ಇಲಾಖೆಗೆ ಹಾಗೂ 2008-09ನೇ ಸಾಲಿನಲ್ಲಿ ಎರಡು ಸಲ ಹಣವನ್ನು ಭರಿಸಿರುವುದಾಗಿ ದೂರಿದರು, ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಹಣವನ್ನು 2009-10ನೇ ಸಾಲಿಗಾಗಿ ಸರಿಪಡಿಸಿ ರಶೀದಿ ನೀಡುವುದಾಗಿ ಹೇಳಿದರು.ಬೆಳವಣಕಿ ಗ್ರಾಮಸ್ಥರೊಬ್ಬರು ದೂರು ಸಲ್ಲಿಸಿ 2008ರಲ್ಲಿ ತಮ್ಮ ಜಮೀನು ಸರ್ವೇ ಕೈಕೊಳ್ಳಲು ಅರ್ಜಿ ಸಲ್ಲಿಸಿದ್ದು ಇದುವರೆಗೂ ಸರ್ವೇ ಆಗಿಲ್ಲವೆಂದು ದೂರಿದಾಗ ಸ್ಥಳದಲ್ಲಿದ್ದ ಸರ್ವೇ ಅಧಿಕಾರಿಗೆ ಒಂದು ವಾರದಲ್ಲಿ ಸರ್ವೇ ಕಾರ್ಯವನ್ನು ಕೈಕೊಳ್ಳಬೇಕು ಎಂದು ಸೂಚಿಸಿದರು.ರೋಣ ಪಟ್ಟಣದ ಬಿ.ಎಸ್. ನಾಯಕ ನೀಡಿರುವ ದೂರಿನ ಪ್ರಕಾರ ಹಾಗೂ 20-8-2010ರಂದು ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ್ದು ಇದುವರೆಗೂ ಮಾಹಿತಿ ನೀಡಿಲ್ಲವೆಂದು ದೂರಿನಲ್ಲಿ ತಿಳಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ಆದೇಶಿಸುವುದಾಗಿ  ಅಧಿಕಾರಿಗಳು ಹೇಳಿದರು.ಡಿ.ಎಸ್.ಎಸ್. ಸಂಘದ ಮೌನೇಶ ಹಾದಿಮನಿ ನೀಡಿದ ದೂರಿನಲ್ಲಿ ರೋಣ ಪುರಸಭೆ ಅಧಿಕಾರಿಗಳು 2009-10ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾಗಿಟ್ಟಿರುವ ಶೇ.18ರ ಅನುದಾನವನ್ನು ಇದುವರೆಗೆ ಬಳಕೆ ಮಾಡಲು ಕ್ರಿಯಾಯೋಜನೆ ತಯಾರಿಸಿದ ಯೋಜನೆಗಾಗಿ ಹಣ ವೆಚ್ಚಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಿದ್ದಾರೆ ಎಂದು ಹೇಳಿದರು.ಸಿಬ್ಬಂದಿ ಕೂರತೆ ಸಾರ್ವಜನಿಕ ಸಮಸ್ಯೆಯಲ್ಲ ಅದು ಆಡಳಿತಾತ್ಮಕ ಸಮಸ್ಯೆ ಎಂದು ಲೋಕಾಯುಕ್ತ ಎಸ್.ಪಿ. ಬಿ.ಎನ್.ನೀಲಗಾರ ಪುರಸಭೆಯ ವ್ಯವಸ್ಥಾಪಕ ಬಸಯ್ಯ ಅಂಗಡಿಯವರಿಗೆ ಹೇಳಿದರು.ಚರ್ಮಗಾರರಿಗೆ ಕುಟೀರಗಳನ್ನು ಇದುವರೆಗೂ ಫಲಾನುಭವಿಗಳಿಗೆ ವಿತರಿಸಿಲ್ಲ ಎನ್ನುವ ದೂರಿಗೆ ಅನುಗುಣವಾಗಿ ಲೋಕಾಯುಕ್ತ ಅಧಿಕಾರಿಗಳು ಪುರಸಭೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ ರಾಜ್ಯ ಚರ್ಮ ಅಭಿವೃದ್ದಿ ನಿಗಮದವರು ಪ್ರತಿ ಕುಟೀರಕ್ಕೆ ವೆಚ್ಚವಾಗುವ ದರವಾರು ಪಟ್ಟಿ ಸಲ್ಲಿಸದೆ ಇರುವುದರಿಂದ ವಿಳಂಬವಾಗಿದೆ ಎಂದು ಹೇಳಿದರು.  ಲೋಕಾಯುಕ್ತ ಅಧಿಕಾರಿಗಳು ಈ ವಿಷಯ ಕುರಿತು ಜಿಲ್ಲಾ ಕೋಶಾಭಿವೃದ್ಧಿ ಅಧಿಕಾರಿ ಶಿವಣ್ಣ ಅವರೊಂದಿಗೆ ದೂರವಾಣಿ ಮುಖಾಂತರ ಚರ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.