ಶನಿವಾರ, ಮೇ 15, 2021
22 °C

ಲೋಕಾಯುಕ್ತ ನೇಮಕ: ರಾಷ್ಟ್ರಪತಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆ ಸಮಾಲೋಚಿಸದೆ ಲೋಕಾಯುಕ್ತರನ್ನು ನೇಮಕ ಮಾಡಿದ ರಾಜ್ಯಪಾಲರ ವಿರುದ್ಧ ಬಿಜೆಪಿ ವರಿಷ್ಠರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಶುಕ್ರವಾರ ದೂರು ಕೊಟ್ಟರು. ಕಮಲಾ ಬೇನಿವಾಲ್ ಅವರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಸಚಿವ ಸಂಪುಟದ ಸಲಹೆ ಮೇರೆಗೆ ಲೋಕಾಯುಕ್ತರನ್ನು ನೇಮಕ ಮಾಡಬೇಕಾದ ರಾಜ್ಯಪಾಲರು ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ರಾಷ್ಟ್ರಪತಿ ಕೂಡಲೇ ಮಧ್ಯ ಪ್ರವೇಶಿಸಿ ಲೋಕಾಯುಕ್ತರ ನೇಮಕ ಆದೇಶವನ್ನು ರದ್ದುಪಡಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.ನ್ಯಾಯಾಲಯದ ಮುಂದಿರುವ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು `ಸಬ್ ಜುಡಿಸ್~ ಆಗಲಿದೆ ಎಂದು ಪ್ರತಿಭಾ ಪಾಟೀಲ್ ಬಿಜೆಪಿ ನಿಯೋಗಕ್ಕೆ ತಿಳಿಸಿದರು. ಸಂವಿಧಾನದ ಮೌಲ್ಯಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಕೈಗೊಳ್ಳುವ ಕ್ರಮ `ಸಬ್ ಜುಡಿಸ್~ ಆಗುವುದಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಮನವರಿಕೆ ಮಾಡಿದರು.ಲೋಕಾಯುಕ್ತರ ನೇಮಕ ರದ್ದು ಮಾಡಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ರಾಷ್ಟ್ರಪತಿಗಳು ಸಂವಿಧಾನದ ಮೌಲ್ಯಗಳನ್ನು ರಕ್ಷಣೆ ಮಾಡುವರೆಂಬ ವಿಶ್ವಾಸವನ್ನು ಹಿರಿಯ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಅನಂತರ ವ್ಯಕ್ತಪಡಿಸಿದರು.ಸಂವಿಧಾನದ 163ನೇ ಕಲಂ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದ ಸಲಹೆ ಮೇರೆಗೆ ಕೆಲಸ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ರಾಜ್ಯ ಲೋಕಾಯುಕ್ತ ಕಾಯ್ದೆ 3 (1) ರಾಜ್ಯಪಾಲರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರ ಜತೆ ಸಮಾಲೋಚಿಸಿ ಲೋಕಾಯುಕ್ತರನ್ನು ನೇಮಕ ಮಾಡಬೇಕೆಂದು ಹೇಳುತ್ತದೆ ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಲಾಗಿದೆ.ರಾಜ್ಯಸಭೆ ಕಲಾಪ ಸ್ಥಗಿತ:
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರು ಘೋಷಣೆ ಕೂಗಿ ಗದ್ದಲವೆಬ್ಬಿಸಿದ್ದರಿಂದ ರಾಜ್ಯಸಭೆಯನ್ನು ಮಧ್ಯಾಹ್ನದವರೆಗೆ ನಾಲ್ಕು ಸಲ ಮುಂದೂಡಲಾಯಿತು. 2.30ಕ್ಕೆ ಸದನ ಮತ್ತೆ ಸೇರಿದಾಗ ಪ್ರತಿಭಟನೆ ನಿಲ್ಲದೆ ಮುಂದುವರಿದಿದ್ದರಿಂದ ಇಡೀ ದಿನದ ಕಲಾಪವನ್ನು ಸ್ಥಗಿತಗೊಳಿಸಲಾಯಿತು.

 

ಸಭಾಪತಿ ಪೀಠದ ಮುಂದಿನ ಆವರಣಕ್ಕೆ ಧಾವಿಸಿದ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದ್ದರಿಂದ ಕಲಾಪಕ್ಕೆ ಅಡ್ಡಿಯಾಯಿತು. ಸಭಾಪತಿ ಪೀಠದಲ್ಲಿದ್ದ ಪಿ. ಜೆ. ಕುರಿಯನ್ ಸದಸ್ಯರು ತಮ್ಮ ಸ್ಥಳಗಳಿಗೆ ಹಿಂತಿರುಗುವಂತೆ ಮಾಡಿದ ಮನವಿ ಫಲಿಸಲಿಲ್ಲ.ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ಲೋಕಸಭೆ ನಡೆಯಲು ಬಿಟ್ಟು, ರಾಜ್ಯಸಭೆ ಕಲಾಪಕ್ಕೆ ಅಡ್ಡಿ ಮಾಡುವ ಮೂಲಕ ಬಿಜೆಪಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರಪತಿಗಳಿಗೆ ಮನವಿ ಕೊಟ್ಟು ನಿಮ್ಮ ಬೇಡಿಕೆ ಬಗ್ಗೆ ಗಮನ ಸೆಳೆದಿದ್ದೀರಿ. ಮಹತ್ವದ ಶಿಕ್ಷಣ ಮಸೂದೆ ಚರ್ಚೆಗೆತ್ತಿಕೊಳ್ಳಬೇಕಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಲಾಪಕ್ಕೆ ಅಡ್ಡಿ  ಮಾಡುವುದು ಬೇಡ ಎಂದರು.ಸಚಿವರ ಮನವಿಯನ್ನು ಬಿಜೆಪಿ ಸದಸ್ಯರು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಗದ್ದಲ ಮುಂದುವರಿಸಿದ್ದರಿಂದ ಸದನದ ಇಡೀ ದಿನದ  ಕಲಾಪವನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೂ ಮೊದಲು ಬೆಳಿಗ್ಗೆ ಪ್ರಶ್ನೋತ್ತರ ವೇಳೆಯಿಂದಲೇ ಬಿಜೆಪಿ ಸದಸ್ಯರು ಕಮಲಾ ಬೇನಿವಾಲ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಗದ್ದಲ ಮಾಡಿದ್ದರಿಂದ ನಾಲ್ಕು ಸಲ ಕಲಾಪ ಮುಂದೂಡಲಾಯಿತು.ರಾಜ್ಯಪಾಲರ ತೀರ್ಮಾನ ವಿರೋಧಿಸಿ ನರೇಂದ್ರ ಮೋದಿ ಗುರುವಾರ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.