ಬುಧವಾರ, ಮೇ 25, 2022
31 °C

ವಚನಗಳ ಮೌಲ್ಯ ಗ್ರಾಮೀಣರಿಗೆ ತಲುಪಿಸಿ: ಚಂದ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಸಮಾಜದ ಎಲ್ಲ ರಂಗ ಗಳಲ್ಲೂ ಮೌಲ್ಯ ಕುಸಿಯುತ್ತಿದೆ. ವಚನ ಸಾಹಿತ್ಯದ ಮೌಲ್ಯಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿಯೂ ಚರ್ಚೆ ಆಗಬೇಕು. ಎಲ್ಲರೂ ಅವುಗಳನ್ನು ಅರ್ಥೈಸಿಕೊಂಡು ಆಚರಣೆಗೆ ತರುವ ಕೆಲಸ ನಡೆಯ ಬೇಕಿದೆ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಪರಿಷತ್ತು ಮತ್ತು ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ `ಸಮಕಾಲೀನ ಸಮಾಜಕ್ಕೆ ವಚನ ಸಾಹಿತ್ಯದ ಮೌಲ್ಯಗಳು' ಕುರಿತು ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.`ಬಸವಣ್ಣ ವಚನಕಾರರ ಮುಖಂಡ. ಆತ ಸ್ಥಾಪಿಸಿದ ಅನುಭವ ಮಂಟಪವೇ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೈಲಿಗಲ್ಲು. ವಚನಕಾರರಿಂದ ಸಮಾಜದಲ್ಲಿ ಬದಲಾವಣೆ ಆಗಿದೆ. ವಚನ ಸಾಹಿತ್ಯವನ್ನು ಖುಷಿಗಾಗಿ ಓದು ವುದಕ್ಕಿಂತ ಅದರಲ್ಲಿಯ ತತ್ವಗಳನ್ನು ಆಚರಣೆಗೆ ತರೋಣ' ಎಂದರು.ರಾಕ್ಷಸಿ ಪ್ರವೃತ್ತಿ: ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪ, `ಪ್ರಗತಿಪರ ವಿಚಾರ ಧಾರೆಯ ಮಾರ್ಗದರ್ಶನ ಸೂತ್ರ ವಚನ ಸಾಹಿತ್ಯದಲ್ಲಿದೆ. ದೈವಿ ಶ್ರದ್ಧೆ, ನಿಸರ್ಗ ನಿಷ್ಠೆ, ಶ್ರಮದ ದುಡಿಮೆ, ಉಪಕಾರ ಸ್ಮರಣೆ, ನಿರಂತರ ಪ್ರಸನ್ನತೆ... ಇವು ಜೀವನದ ಮೌಲ್ಯಗಳು. ಇವುಗಳನ್ನು ಅಳವಡಿಸಿಕೊಂಡರೆ ಮಾತ್ರ ನೆಮ್ಮದಿಯ ಜೀವನ ಸಾಧ್ಯ' ಎಂದರು.`ಡಾ.ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಬೆಳಕಿಗೆ ತರದೇ ಹೋಗಿದ್ದರೆ ಇಂದು ಶರಣ ಸಾಹಿತ್ಯದ ಯಾವ ಸಂಘಟನೆಗಳೂ ಇರುತ್ತಿರಲಿಲ್ಲ. 23,000 ವಚನಗಳಿದ್ದು, ಅವೆಲ್ಲ ಗ್ರಂಥಕ್ಕೆ ಸೀಮಿತವಾಗಿವೆ. ಅವುಗಳನ್ನು ಗ್ರಂಥ ಬಿಟ್ಟು ಹೊರತರಬೇಕಿದೆ' ಎಂದು ಹೇಳಿದರು.ವಿಚಾರ ಸಂಕಿರಣ ಉದ್ಘಾಟಿಸಿದ ಸಚಿವ ಎಂ.ಬಿ. ಪಾಟೀಲ, `ವಚನ ಸಾಹಿತ್ಯದಲ್ಲಿ ಮಹಿಳಾ ಮೀಸಲಾತಿ, ಮೂಢ ನಂಬಿಕೆ ನಿವಾರಣೆ, ಅಂತರ್ಜಾತಿ ವಿವಾಹ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಇದೆ. ಕಾಯಕವೇ ಕೈಲಾಸ, ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ... ಎಂಬಂತಹ ಸರಳ ವಿಚಾರಗಳಿವೆ. ಅವುಗಳ ಅನುಷ್ಠಾನ ಕಷ್ಟವಲ್ಲದಿದ್ದರೂ ನಾವು ಆಚರಣೆಗೆ ತರುತ್ತಿಲ್ಲ' ಎಂದು ಹೇಳಿದರು.`ನಾವು ಶರಣರನ್ನು ಜಾತಿಗೆ ಸೀಮಿತಗೊಳಿಸಿದ್ದೇವೆ. ವಚನ ಸಾಹಿತ್ಯ ಬೆಳೆಯಬೇಕು. ಅದು ಜಾತಿ-ಧರ್ಮಕ್ಕೆ ಸೀಮತವಾಗಬಾರದು. ವಚನ ಸಾಹಿತ್ಯವನ್ನು ಇನ್ನಷ್ಟು ಸರಳೀಕರಣ ಮಾಡಿ ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ಎಲ್ಲರಿಗೂ ತಲುಪವಂತೆ ಮಾಡಬೇಕು. ಸಾಹಿತ್ಯ ಸಂಘಟನೆಗಳು ಅದನ್ನು ಮಕ್ಕಳಿಗೆ ಬೋಧಿಸುವ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು.ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ವೀರಣ್ಣ, `ಎಲ್ಲ ಜಿಲ್ಲಾ ಕೇಂದ್ರ ಗಳಲ್ಲಿ ವಿಚಾರ ಸಂಕಿರಣ ನಡೆಸಿದ ನಂತರ ವಚನ ಸಾಹಿತ್ಯ ಕುರಿತು ಬೆಂಗ ಳೂರಿನಲ್ಲಿ ಮೂರು ದಿನಗಳ ಸಮ್ಮೇಳನ ನಡೆಸಲಾಗುವುದು' ಎಂದರು.`ವಚನ ಸಾಹಿತ್ಯ ಜಾತಿ ಸಂಸ್ಕೃತಿ ಮಾತ್ರ ಅಲ್ಲ. ಪರ್ಯಾಯ ಸಂಸ್ಕೃತಿಯನ್ನು ಸೃಷ್ಟಿಸಲು ಹೊರಟಿತ್ತು. ಈಗ ಸಮಾಜ ಜಾತಿಯ ಹೆಸರಿನಲ್ಲಿ ಸರ್ವ ನಾಶವಾಗಿದ್ದು, ಬಸವಣ್ಣನ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೇವೆ' ಎಂದು ವಿಷಾದಿಸಿದರು. ಬಸವರಾಜ ಸಬರದ, ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ.ವಿಜಯಾದೇವಿ, ಪ್ರೊ.ಅಲ್ಲಮಪ್ರಭು ಬೆಟ್ಟದೂರ ಉಪನ್ಯಾಸ ನೀಡಿದರು.ಬಿಎಲ್‌ಡಿಇ ಡೀಮ್ಡ ವಿವಿ ಕುಲಪತಿ ಡಾ.ಬಿ.ಜಿ. ಮೂಲಿಮನಿ, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಿಕ್ಕರಿಯಪ್ಪ ಜಿ.ಪಿ. ವೇದಿಕೆಯಲ್ಲಿದ್ದರು. ಎಂ.ಜಿ. ಯಾ ವಾಡ ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿ, ಡಾ.ವಿ.ಡಿ. ಐಹೊಳಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದು ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.