ಬುಧವಾರ, ಸೆಪ್ಟೆಂಬರ್ 30, 2020
23 °C

ವರುಣನ ಆರ್ಭಟ ಭೂಕುಸಿತ, 1ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರುಣನ ಆರ್ಭಟ ಭೂಕುಸಿತ, 1ಸಾವು

ಸೇತುವೆ ಜಲಾವೃತ, ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಸೇರಿದಂತೆ ವಿವಿಧೆಡೆ ಗುರುವಾರದಿಂದ ಉತ್ತಮ ಮಳೆಯಾಗಿದ್ದು, ಭೂ ಕುಸಿತ, ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿದ್ದಲ್ಲದೇ ರೈತರೊಬ್ಬರು ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದಿವೆ.ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಗುಂಡ್ಯ ಹೊಳೆಯ ದಂಡೆಯಲ್ಲಿರುವ ಘಟ್ಟದ ತಪ್ಪಲಿನ ಹೆದ್ದಾರಿ, ಗ್ರಾಮಗಳು ಹಾಗೂ ಹೊಸ್ಮಠ ಸೇತುವೆ ಜಲಾವೃತವಾಗಿವೆ. ನೇತ್ರಾವತಿ ಹಾಗೂ ಕುಮಾರಧಾರ ನದಿಗಳೂ ತುಂಬಿ ಹರಿದಿವೆ.ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯುತ್ತಮ ಮಳೆಯಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪನದಿಗಳು ಮೈದುಂಬಿ ಹರಿಯುತ್ತಿವೆ. ಕೊಡಗು ಜಿಲ್ಲೆಯಲ್ಲಿಯೂ ಮಳೆ ಸುರಿಯುತ್ತಿದೆ.ಸಕಲೇಶಪುರ ವರದಿ:  ಶುಕ್ರವಾರ ಮಧ್ಯಾಹ್ನದವರೆಗೆ ಸರಾಸರಿ 250 ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗರಹಳ್ಳಿ ಗ್ರಾಮದ ರೈತ ಬಸವರಾಜ್ (60) ಗುರುವಾರ ರಾತ್ರಿ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದ ಪಾಲಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಹಳ್ಳದಲ್ಲಿ ಅವರ ಶವ ಪತ್ತೆಯಾಗಿದೆ.ಪಶ್ಚಿಮಘಟ್ಟದ ಕೆಂಪುಹೊಳೆ, ಕೆಂಚನಕುಮರಿ, ಕಾಗಿನಹರೆ ರಕ್ಷಿತ ಅರಣ್ಯಗಳ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆವರೆಗೆ ಸುಮಾರು 350 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಈ ರಕ್ಷಿತ ಅರಣ್ಯಗಳಲ್ಲಿ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್‌ನಲ್ಲಿ 10ಕ್ಕೂ ಹೆಚ್ಚು ಕಡೆ ಮಣ್ಣು, ಬಂಡೆ, ಮರಗಳು ರಸ್ತೆಗೆ ಉರುಳಿ ಹೆದ್ದಾರಿಯಲ್ಲಿ ಸುಮಾರು 8 ಗಂಟೆಗಳ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಮಾರನಹಳ್ಳಿ ಪೊಲೀಸ್ ಔಟ್‌ಪೋಸ್ಟ್‌ನಿಂದ ಗುಂಡ್ಯ ಗಡಿವರೆಗಿನ ಶಿರಾಡಿಘಾಟ್‌ನಲ್ಲಿ ಉಂಟಾಗಿರುವ ಭೂ ಕುಸಿತದಲ್ಲಿ ಎರಡು ಕಡೆ ಗುಡ್ಡಗಳೇ ಕುಸಿದು ರಸ್ತೆಯ ಮೇಲೆ ಮಣ್ಣು ಬಿದ್ದ ಪರಿಣಾಮ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 4 ರಿಂದ ಮಧ್ಯಾಹ್ನ 12ರ ವರೆಗೆ ಘಾಟ್‌ನ ಕಾಡು ರಸ್ತೆಯಲ್ಲಿಯೇ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಧಾವಿಸಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.ಧಾರಾಕಾರ ಮಳೆ (ಮಡಿಕೇರಿ ವರದಿ) ನಗರವೂ ಸೇರಿದಂತೆ ಭಾಗಮಂಡಲ, ಸಂಪಾಜೆ ಪ್ರದೇಶದಲ್ಲಿ ಶುಕ್ರವಾರ ಮಳೆ ಬಿರುಸಾಗಿ ಸುರಿದಿದೆ. ಇನ್ನುಳಿದಂತೆ ಕುಶಾಲನಗರ, ಸೋಮವಾರ ಪೇಟೆ, ನಾಪೋಕ್ಲು, ಶ್ರೀಮಂಗಲ, ಅಮ್ಮತ್ತಿ, ಶನಿವಾರಸಂತೆ, ಶಾಂತಳ್ಳಿ ಹಾಗೂ ಇತರ ಪ್ರದೇಶಗಳಲ್ಲಿಯೂ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 39.85 ಮಿ.ಮೀ ಮಳೆಯಾಗಿದ್ದು, ಯಾವುದೇ ಅವಘಡಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಭಾಗಮಂಡಲದ ತ್ರಿವೇಣಿ ಸಂಗಮ, ಚಿಕ್ಲಿಹೊಳೆ, ಹಾರಂಗಿ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಸೋಮವಾರ ಪೇಟೆ ಸೇರಿದಂತೆ ಇತರ ಪ್ರದೇಶಗಳಲ್ಲಿ ರೈತರು ಬತ್ತ ನಾಟಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಹಾರಂಗಿ ಜಲಾಶಯ: ಜಲಾಶಯದಲ್ಲಿ ನೀರಿನ ಮಟ್ಟವು 2,845.29 ಅಡಿಗೆ ತಲುಪಿದೆ (ಗರಿಷ್ಠ ಮಟ್ಟ 2,859 ಅಡಿ). ಇಂದಿನ ನೀರಿನ ಒಳ ಹರಿವು 5,789 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 3,517 ಕ್ಯೂಸೆಕ್ ಇತ್ತು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಸೇತುವೆ, ಹೆದ್ದಾರಿ ಜಲಾವೃತ  (ಉಪ್ಪಿನಂಗಡಿ ವರದಿ): ಗುಂಡ್ಯ ಹೊಳೆ ಉಕ್ಕಿ ಹರಿದ ಪರಿಣಾಮ ಉಪ್ಪಿನಂಗಡಿ- ಕಡಬ ಸಂಪರ್ಕ ರಸ್ತೆಯಲ್ಲಿರುವ ಹೊಸ್ಮಠ ಸೇತುವೆ ಬೆಳಿಗ್ಗೆ 6ರಿಂದ ಸಂಜೆವರೆಗೂ ಸಂಪೂರ್ಣ ಮುಳುಗಡೆ ಯಾಗಿತ್ತು. ಸೇತುವೆ ಮೇಲೆ ಆರು ಅಡಿಯಷ್ಟು ನೀರು ಹರಿಯುತ್ತಿತ್ತು. ಇದರಿಂದಾಗಿ ಉಪ್ಪಿನಂಗಡಿಯಿಂದ ಕಡಬ ಹಾಗೂ ಸುಬ್ರಹ್ಮಣ್ಯ ನಡುವಿನ ವಾಹನ ಸಂಪರ್ಕ ಕಡಿತಗೊಂಡಿದ್ದು, ಸುಬ್ರಹ್ಮಣ್ಯಕ್ಕೆ ತೆರಳುವ ಪ್ರವಾಸಿಗರು ಪುತ್ತೂರು- ಕಾಣಿಯೂರು ಮೂಲಕ ಸುತ್ತುಬಳಸಿ ಸಂಚರಿಸಬೇಕಾಯಿತು. ಗುಂಡ್ಯ ಹೊಳೆಯ ಆಸುಪಾಸಿನಲ್ಲಿರುವ ಹೊಸ್ಮಠ, ವಾಳ್ಯ, ಉಳಿಪು, ಕುಟ್ರುಪ್ಪಾಡಿ ಮೊದಲಾದ ಗ್ರಾಮಗಳಲ್ಲಿ ಅಡಿಕೆ ತೋಟ, ಗದ್ದೆಗಳು ಜಲಾವೃತವಾಗಿವೆ.

ಉದನೆ ಎಂಬಲ್ಲಿ ಗುಂಡ್ಯ ಹೊಳೆ ಉಕ್ಕಿ ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಹೆದ್ದಾರಿ ಮೇಲೆ ಬೆಳಿಗ್ಗೆ 11.30ರಿಂದ ಸಂಜೆ 4.30ರವರೆಗೂ ನಾಲ್ಕು ಅಡಿಗೂ ಹೆಚ್ಚು ನೀರು ಇತ್ತು.ಗುಡ್ಡ ಕುಸಿತ ಹಾಗೂ ಉದನೆಯಲ್ಲಿ ಹೆದ್ದಾರಿ ಜಲಾವೃತಗೊಂಡಿದ್ದರಿಂದ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಸಕಲೇಶಪುರ-ಚಾರ್ಮಾಡಿ- ಉಜಿರೆ ಘಾಟಿ ಮೂಲಕ ಸಂಚರಿಸಿದವು. ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ಕಡೆಗೆ ತೆರಳುವ ಪ್ರವಾಸಿಗರೂ ಸಮಸ್ಯೆ ಎದುರಿಸಿದರು. ತುಂಬಿ ಹರಿದ ನೇತ್ರಾವತಿ: ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ನೇತ್ರಾವತಿ ಮತ್ತು ಕುಮಾರಧಾರ ನದಿಗಳೂ ತುಂಬಿ ಹರಿದಿವೆ. ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಲು (26.5 ಮೀ.) ಕೇವಲ ಅರ್ಧ ಅಡಿ ಮಾತ್ರ ಬಾಕಿ ಇತ್ತು. ನದಿ ದಂಡೆಯಲ್ಲಿರುವ ಕೂಟೇಲು, ವಳಾಲು, ಬಜತ್ತೂರು ಗ್ರಾಮಗಳು ಜಲಾವೃತವಾಗಿವೆ.ಕುಮಾರಧಾರ ನದಿ ಉಕ್ಕಿ ಹರಿದ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದ ಸಮೀಪದ ಬಟ್ಟೆ ಬದಲಿಸುವ ಕೊಠಡಿ ಜಲಾವೃತವಾಗಿದೆ. ಶುಕ್ರವಾರ ಬೆಳಿಗ್ಗೆವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ 95.4 ಮಿ.ಮೀ., ಬಂಟ್ವಾಳ ತಾಲ್ಲೂಕಿನಲ್ಲಿ 32 ಮಿ.ಮೀ., ಉಪ್ಪಿನಂಗಡಿಯಲ್ಲಿ 25.2ಮಿ.ಮೀ, ಪುತ್ತೂರಿನಲ್ಲಿ 15.2ಮಿ.ಮೀ., ಮಂಗಳೂರಿನಲ್ಲಿ 13.4 ಮಿ.ಮೀ.  ಸುಳ್ಯದಲ್ಲಿ 12.8 ಮಿ.ಮೀ. ಮಳೆಯಾಗಿದೆ.ತೀರ್ಥಹಳ್ಳಿಯಲ್ಲಿ ಅತ್ಯಧಿಕ ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದ್ದು, ತೀರ್ಥಹಳ್ಳಿಯಲ್ಲಿ ಅತ್ಯಧಿಕ 123.4 ಮಿ.ಮೀ. ಮಳೆ ಸುರಿದಿದೆ. ಸೊರಬ 93.6 ಮಿ.ಮೀ., ಸಾಗರ 73 ಮಿ.ಮೀ. ಹಾಗೂ ಹೊಸನಗರದಲ್ಲಿ 51.2 ಮಿ.ಮೀ. ಮಳೆಯಾಗಿದೆ. ಜಲಾಶಯಗಳ ಒಳಹರಿವಿನ ಮಟ್ಟ ಏರಿಕೆಯಾಗಿದೆ.ಲಿಂಗನಮಕ್ಕಿ ಜಲಾಶಯದ ಒಳಹರಿವು ಒಂದೇ ದಿನಕ್ಕೆ 36,761 ಕ್ಯೂಸೆಕ್‌ಗೆ ಏರಿದೆ. ಶುಕ್ರವಾರ ಬೆಳಿಗ್ಗೆ 8ಕ್ಕೆ ಜಲಾಶಯದ ನೀರಿನಮಟ್ಟ 1764.30 ಅಡಿ ಇದೆ. ಈ ಜಲಾನಯನ ಪ್ರದೇಶದಲ್ಲಿ 104 ಮಿ.ಮೀ. ಮಳೆಯಾಗಿದೆ.

 

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಮಳೆ ಗುರುವಾರದಿಂದ ಚುರುಕುಗೊಂಡಿದೆ. ಮಲೆನಾಡು ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ನಿರತವಾಗಲು ಮಳೆ ಅನುಕೂಲ ಮಾಡಿಕೊಟ್ಟಿದೆ. ಭದ್ರಾನದಿ ಒಳಹರಿವು ಹೆಚ್ಚಿರುವುದರಿಂದ ಕಳಸ, ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ. ತನಿಗೋಡು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 1526.1 ಮಿ.ಮೀ. ಮೀಟರ್ ಮಳೆಯಾಗಿದೆ. ಶೃಂಗೇರಿ ತಾಲ್ಲೂಕಿನ ಕಿಗ್ಗದಲ್ಲಿ ಗರಿಷ್ಠ 20.24 ಸೆ.ಮೀ. ಮಳೆ ಬಿದ್ದಿದೆ.ಕೃಷ್ಣೆಗೆ ಪ್ರವಾಹ (ಚಿಕ್ಕೋಡಿ ವರದಿ) : ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪನದಿಗಳು ಮೈದುಂಬಿಕೊಂಡು ಹರಿಯುತ್ತಿವೆ. ಇದರಿಂದಾಗಿ ತಾಲ್ಲೂಕಿನ ಕಲ್ಲೋಳ-ಯಡೂರ ಮತ್ತು ಸದಲಗಾ-ಬೋರಗಾಂವ ಗ್ರಾಮಗಳ ಮಧ್ಯದಲ್ಲಿರುವ ಕೆಳಮಟ್ಟದ ಸೇತುವೆ ಮತ್ತು ಬ್ಯಾರೇಜ್‌ಗಳು ಶುಕ್ರವಾರ ಜಲಾವೃತಗೊಂಡಿವೆ.ಚಿಕ್ಕೋಡಿ ತಾಲ್ಲೂಕು ಅನಾವೃಷ್ಟಿಯಿಂದ ಬಳಲುತ್ತಿದೆ. ಆದರೆ ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಉಗಮಸ್ಥಾನವಾಗಿರುವ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಬಿಡದೇ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿವೆ. ಕೃಷ್ಣಾ ನದಿಗೆ  ಕಲ್ಲೋಳ- ಯಡೂರ ಗ್ರಾಮಗಳ ಮಧ್ಯೆ  ಇರುವ ಕೆಳಮಟ್ಟದ ಸೇತುವೆ ಗುರುವಾರ ರಾತ್ರಿ  ಜಲಾವೃತ ಗೊಂಡಿದ್ದರೆ, ಸದಲಗಾ-ಬೋರಗಾಂವ ಗ್ರಾಮಗಳ ಮಧ್ಯೆ ದೂಧಗಂಗಾ ನದಿಗೆ ನಿರ್ಮಿಸಿರುವ ಕೆಳಮಟ್ಟದ ಸೇತುವೆ ಶುಕ್ರವಾರ ಸಂಜೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸುತ್ತುಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.