ಭಾನುವಾರ, ಮೇ 16, 2021
22 °C

ವಾಡಿಕೆ ಮುಂಗಾರು ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರದಲ್ಲಿ ಈ ಬಾರಿ ವಾಡಿಕೆ ಮುಂಗಾರು ಮಳೆ ನಿರೀಕ್ಷಿಸಲಾಗಿದೆ. ಶೇ 99ರಷ್ಟು ಪ್ರಮಾಣ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಅಂದಾಜಿಸಿದೆ.

ಕೇಂದ್ರ ವಿಜ್ಞಾನ ಸಚಿವ ವಿಲಾಸ್‌ರಾವ್ ದೇಶ್‌ಮುಖ್ ಗುರುವಾರ ಈ ವಿಷಯ ಪ್ರಕಟಿಸಿ, ಈ ಅಂದಾಜಿನಲ್ಲಿ ಶೇ 5ರಷ್ಟು ಹೆಚ್ಚುಕಡಿಮೆ ಆಗಬಹುದೆಂದು ಹೇಳಿದರು.ರಾಷ್ಟ್ರದ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿಯು (ಎಲ್‌ಪಿಎ) 89 ಸೆಂ.ಮೀ. ಇದೆ. ಇದನ್ನು ಆಧಾರವಾಗಿಟ್ಟುಕೊಂಡು ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಅರ್ಥೈಸಿದರೆ ರಾಷ್ಟ್ರದಲ್ಲಿ ಜೂನ್-ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಸರಾಸರಿ 88 ಸೆಂ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಭೂವಿಜ್ಞಾನಗಳ ಇಲಾಖೆಯ ಕಾರ್ಯದರ್ಶಿ ಶೈಲೇಶ್ ನಾಯಕ್ ವಿವರಿಸಿದ್ದಾರೆ.ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರಗಳ ಮೇಲಿನ ವಾತಾವರಣದ ಸ್ಥಿತಿಗತಿ ಹಾಗೂ ಯೂರೋಪ್‌ನಲ್ಲಿರುವ ಮಂಜಿನ ಮಟ್ಟವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಇಲಾಖೆಯು ಈ ಮುನ್ಸೂಚನೆ ಪ್ರಕಟಿಸಿದೆ.ಸದ್ಯಕ್ಕೆ ಹಿಂದೂ ಮಹಾಸಾಗರದ ಮೇಲಿನ ಸ್ಥಿತಿ ಸಾಧಾರಣ ಮುಂಗಾರಿಗೆ ಪೂರಕವಾಗಿದ್ದರೆ ಉತ್ತರ ಅಟ್ಲಾಂಟಿಕ್ ಸಾಗರದ ಮೇಲಿನ ಸ್ಥಿತಿ ವ್ಯತಿರಿಕ್ತವಾಗಿದೆ. ಉಳಿದ ಅಂಶಗಳು ಸಮತೋಲನದಲ್ಲಿವೆ ಎಂದು ಹವಾಮಾನ ಇಲಾಖೆಯ ತಜ್ಞ ಡಿ.ಎಸ್.ಪೈ ವಿವರಿಸಿದ್ದಾರೆ.ಆದರೆ ಒಂದೊಮ್ಮೆ ಪೆಸಿಫಿಕ್ ಸಾಗರದಲ್ಲಿ ಹಠಾತ್ ಎಲ್ ನೈನೊ ಚಂಡಮಾರುತ ಎದ್ದರೆ ಈ ಅಂದಾಜು ತಲೆಕೆಳಗಾಗಬಹುದು ಎಂದೂ ಹವಾಮಾನ ಇಲಾಖೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.