ಭಾನುವಾರ, ಜೂನ್ 13, 2021
25 °C

ವಾರಾಣಸಿ ಟಿಕೆಟ್‌ ಪೈಪೋಟಿಗೆ ಆರ್‌ಎಸ್‌ಎಸ್‌ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಷಯದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ನಡುವೆ ನಡೆದಿದೆ ಎನ್ನಲಾದ ಪೈಪೋಟಿ ಕುರಿತು ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್),  ಪಕ್ಷದ ನಾಯಕರೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ.ನಗರದ ಥಣಿಸಂದ್ರದಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಅಂತಿಮ ದಿನ­ವಾದ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸುರೇಶ್‌ ಜೋಷಿ, ‘ಈ ವಿಷಯ­ದಲ್ಲಿ ಒಂದು ರೀತಿಯಲ್ಲಿ ಕಳವಳ ಇದೆ. ಇನ್ನೊಂದು ರೀತಿಯಲ್ಲಿ ನಿರುಮ್ಮಳವಾಗಿ ಇದ್ದೇವೆ. ಹಿಂದೆ ಬಿಜೆಪಿ ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪಕ್ಷದ ನಾಯಕರು ಸಮರ್ಥರಾಗಿದ್ದಾರೆ’ ಎಂದರು.ಬಿಜೆಪಿ ಒಂದು ರಾಜಕೀಯ ಪಕ್ಷ. ಅದರ ಆಂತರಿಕ ವಿಚಾರಗಳಲ್ಲಿ ಆರ್‌ಎಸ್‌ಎಸ್‌ ನೇರವಾಗಿ ನಿರ್ದೇಶನ ನೀಡುವುದಿಲ್ಲ ಮತ್ತು ಹಸ್ತಕ್ಷೇಪ ಮಾಡುವುದಿಲ್ಲ. ಅಗತ್ಯ ಎನಿಸಿದ ಸಂದರ್ಭದಲ್ಲಿ ಪಕ್ಷದ ನಾಯಕರಿಗೆ ಸಲಹೆ, ಸೂಚನೆ ಕೊಡುವ ಕೆಲಸ ಮಾತ್ರ ಸಂಘ ಮಾಡು­ತ್ತದೆ ಎಂದು ಹೇಳಿದರು.ವಾರಾಣಸಿ ಕ್ಷೇತ್ರದಲ್ಲಿ ಮುರಳಿ ಮನೋಹರ ಜೋಷಿ ಅವರ ಬದಲಿಗೆ ಮೋದಿ ಅವರನ್ನು ಕಣಕ್ಕಿಳಿಸುವ ಸುದ್ದಿಗಳ ಕುರಿತು ಸ್ಪಷ್ಟನೆ ನೀಡುವಂತೆ ಸುಷ್ಮಾ ಸ್ವರಾಜ್‌ ಮತ್ತಿತರರು ಶನಿವಾರ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂಬ ವರದಿಗಳ ಕುರಿತು ಗಮನ ಸೆಳೆದಾಗ, ‘ರಾಜಕೀಯ ಪಕ್ಷದಲ್ಲಿ ಇರುವ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಅವಕಾಶ ಇರುತ್ತದೆ. ಅದನ್ನು ತಪ್ಪು ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದರು.ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಚುನಾವಣೆಗೆ ಸ್ಪರ್ಧಿಸುವ ವಿಷಯದಲ್ಲಿ ಆರ್‌ಎಸ್‌ಎಸ್‌ ನಿಲುವು ಏನು ಎಂದು ಕೇಳಿದಾಗ, ‘ಇಂತಹ ವಿಷಯಗಳಲ್ಲಿ ಪಕ್ಷಕ್ಕೆ ಸಂಘವು ನಿರ್ದೇಶನ­ಗಳನ್ನು ನೀಡುವುದಿಲ್ಲ. ಆದರೆ, ಯುವಕರಿಗೆ ರಾಜಕೀಯ­ದಲ್ಲಿ ಹೆಚ್ಚಿನ ಅವಕಾಶ ನೀಡಬೇಕು. ಹಿರಿಯರ ಅನುಭವಗಳನ್ನೂ ಬಳಸಿಕೊಳ್ಳಬೇಕು’ ಎಂದರು.ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ವಿರೋಧ: ‘ಜೈನ ಧರ್ಮೀಯರಿಗೆ ಅಲ್ಪ­ಸಂಖ್ಯಾತರ ಸ್ಥಾನಮಾನ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ. ಅದನ್ನು ಆರ್‌ಎಸ್‌ಎಸ್‌ ಬಲವಾಗಿ ವಿರೋಧಿಸುತ್ತದೆ. ಜೈನರು ಹಿಂದೂ ಧರ್ಮದ ಭಾಗವೇ ಆಗಿದ್ದಾರೆ. ಪೂಜಾ ವಿಧಾನ ಮತ್ತಿತರ ವಿಚಾರಗಳಲ್ಲಿ ವ್ಯತ್ಯಾಸ ಇರಬಹುದು. ಆದರೆ, ಸಾಂಸ್ಕೃತಿಕವಾಗಿ ಭಿನ್ನತೆ ಇಲ್ಲ’ ಎಂದರು.‘ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ಧರ್ಮ­­ಗಳನ್ನು ವಿಭಜಿಸುವುದು ದೇಶದ ಹಿತದೃಷ್ಟಿ­ಯಿಂದ ಒಳ್ಳೆಯದಲ್ಲ. ಇಂತಹ ತೀರ್ಮಾನಗಳಿಂದ ದೇಶದ ಮೇಲೆ ಪ್ರತಿಕೂಲ ಪರಿಣಾಮಗಳು ಆಗುತ್ತವೆ’ ಎಂದು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.