ಶನಿವಾರ, ಫೆಬ್ರವರಿ 27, 2021
31 °C
ರಾಜ್ಯ ತಂಡದಲ್ಲಿ ಹೈಟೆಕ್‌ ಸಿಟಿ, ಹಳ್ಳಿಯ ಬಾಲೆಯರು

ವಾಲಿಬಾಲ್‌: ರಾಜ್ಯ ಬಾಲೆಯರ ಬಣ್ಣದ ಕನಸು

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಾಲಿಬಾಲ್‌: ರಾಜ್ಯ ಬಾಲೆಯರ ಬಣ್ಣದ ಕನಸು

ವಿಜಾಪುರ: ‘ಮೈದಾನ ಬಿಟ್ಟರೆ ನಮ್ಮ ಶಾಲೆಯಲ್ಲಿ ಮತ್ತೆ ಯಾವ ಕ್ರೀಡಾ ಸೌಲಭ್ಯ–ಸಲಕರಣೆಗಳಿಲ್ಲ. ಜಿಮ್‌ ಇಲ್ಲವೇ ಇಲ್ಲ. ದೈಹಿಕ ಕಸರತ್ತು ನಡೆಸಲು ಇಟ್ಟಿಗೆಗಳೇ ಆಸರೆ. ನಿತ್ಯವೂ ಓಟ ತಪ್ಪುವುದಿಲ್ಲ. ಶಾಲಾ ಅವಧಿಗೆ ಮುನ್ನ ಮತ್ತು ನಂತರ ಕಠಿಣ ತರಬೇತಿಯಿಂದ ನಾವು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆವು. ನೋಡ್ತಾ ಇರಿ, ಈಗ ಪದಕ ಗೆದ್ದುಕೊಂಡೇ ಹೋಗುತ್ತೇವೆ’.ಇಲ್ಲಿ ನಡೆಯುತ್ತಿರುವ ಪ್ರೌಢ ಶಾಲೆಗಳ 17 ವರ್ಷದೊಳಗಿನ ಬಾಲಕ–ಬಾಲಕಿಯರ ರಾಷ್ಟ್ರಮಟ್ಟದ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರೆಸಿರುವ ಕರ್ನಾಟಕ ಬಾಲಕಿಯರ ತಂಡದ ನಾಯಕಿ ಕಾವೇರಿ ಬೆಳಗಾವಿ ಅವರ ಆತ್ಮವಿಶ್ವಾಸದ ಮಾತುಗಳಿವು.ಮೊದಲ ದಿನ ನವೋದಯ ಶಾಲೆಯ ತಂಡ, ಎರಡನೇ ದಿನ ಗೋವಾ ಹಾಗೂ ಮೂರನೇ ದಿನ ಗುಜರಾತ್‌ ತಂಡಗಳನ್ನು 2:0 ಸೆಟ್‌ಗಳಿಂದ ಮಣಿಸಿ ಈ ಟೂರ್ನಿಯಲ್ಲಿ ನಾಕೌಟ್‌ಗೆ ಪ್ರವೇಶ ಪಡೆದ ಮೊದಲ ತಂಡ ಇದು.ಕರ್ನಾಟಕ ತಂಡದಲ್ಲಿ ಬೆಂಗಳೂರು ಜಯನಗರದ ಕಾರ್ಮೆಲ್‌ ಕಾನ್ವೆಂಟ್‌ ಶಾಲೆಯ ಐವರು, ಪೂರ್ಣಪ್ರಜ್ಞಾ ಶಾಲೆಯ ಒಬ್ಬರು, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ಬೈಲೂರಿನ ಸರ್ಕಾರಿ ಪ್ರೌಢ ಶಾಲೆಯ ಆರು ಜನ ಬಾಲಕಿಯರಿದ್ದಾರೆ. ಉಡುಗೆ–ತೊಡುಗೆ, ಜೀವನ ಶೈಲಿ, ಹಾವ–ಭಾವ, ಕಲಿಯುವ ಭಾಷೆಯಲ್ಲಿ ವ್ಯತ್ಯಾಸವಿದ್ದರೂ ತಂಡದ ಗೆಲುವಿಗಾಗಿ ಈ ಹೈಟೆಕ್‌ಸಿಟಿಯ ಹುಡುಗಿಯರು ಮತ್ತು ಬೈಲೂರಿನ ಹಳ್ಳಿ ಹುಡುಗಿಯರೆಲ್ಲ ಒಟ್ಟಾಗಿ ಆಡುತ್ತಿದ್ದಾರೆ.ಪ್ರೌಢ ಶಾಲೆಗಳ 17 ವರ್ಷದೊಳಗಿನ ವಾಲಿಬಾಲ್‌ ಟೂರ್ನಿಯಲ್ಲಿ ಬೈಲೂರು ಶಾಲೆ ಪ್ರಥಮ, ಬೆಂಗಳೂರಿನ ಕಾರ್ಮೆಲ್‌ ಶಾಲೆ ರನ್ನರ್‌ ಅಪ್‌ ಸ್ಥಾನ ಪಡೆದಿದ್ದವು. ರಾಷ್ಟ್ರಮಟ್ಟದ ತಂಡಕ್ಕೆ ವಿಜೇತ ಮತ್ತು  ರನ್ನರ್‌ ಅಪ್‌ ತಂಡದ ತಲಾ ಅರ್ಧ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದು ಬಾಡಿಕೆ. ಹೀಗಾಗಿ ಬೈಲೂರು ಮತ್ತು ಬೆಂಗಳೂರು ಹುಡುಗಿಯರು ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಬೈಲೂರು ಶಾಲೆಯ ಕವಿತಾ ಬೆಳಗಾವಿ (ನಾಯಕಿ), ಲಕ್ಷ್ಮಿ ಮರೆಪ್ಪಗೋಳ, ದೀಪಾ ಅಂಬವ್ವಗೋಳ, ನೀಲಮ್ಮ ಹುಲ್ಲೂರ, ಸುಮಿತ್ರಾ ಹಂಚಿನಮನಿ, ಖಾನಾಪುರ ತಾಲ್ಲೂಕು ಮಂಗೆನಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ನಿರ್ಮಲಾ ಪಾಟೀಲ ಎಲ್ಲರೂ ಬಡ ರೈತ–ಕೃಷಿ ಕೂಲಿ ಕಾರ್ಮಿಕರ ಮಕ್ಕಳು. ಇವರಲ್ಲಿ ಕಾವೇರಿ, ನಿರ್ಮಲಾ ಅವರು ಈ ವರೆಗೆ ಆರು ಬಾರಿ ರಾಷ್ಟ್ರೀಯ ಟೂರ್ನಿಗಳಲ್ಲಿ ಸಬ್‌ ಜೂನಿಯರ್‌ ವಿಭಾಗದಲ್ಲಿ ಭಾಗವಹಿಸಿದ್ದಾರೆ. ನೀಲಮ್ಮ ಮತ್ತು ಲಕ್ಷ್ಮಿ ಐದು ಬಾರಿ, ದೀಪಾ ಮೂರು ಬಾರಿ ಪಾಲ್ಗೊಂಡ ಅನುಭವಿ ಆಟಗಾರರು.ಒಟ್ಟಾಗಿ ಪ್ರವೇಶಕ್ಕೆ ನಿರ್ಧಾರ: ‘ತಂಡದಲ್ಲಿರುವ ಹೆಚ್ಚಿನವರು 10ನೇ ತರಗತಿಯಲ್ಲಿದ್ದೇವೆ. ಎಲ್ಲರೂ ಒಟ್ಟಾಗಿ ಕಿತ್ತೂರು ಇಲ್ಲವೆ ಬೇರೆ ಕಾಲೇಜುಗಳಲ್ಲಿ ಪಿಯುಸಿಗೆ ಪ್ರವೇಶ ಪಡೆದು ಅಲ್ಲಿ ವಾಲಿಬಾಲ್‌ ಆಟ ಮುಂದುವರೆಸಲು ನಿರ್ಧರಿಸಿದ್ದೇವೆ’ ಎಂದಳು ಕಾವೇರಿ.‘ನಮ್ಮ ಕಾಲೇಜಿನಲ್ಲಿ ಜಿಮ್‌ ಇಲ್ಲದಿದ್ದರೂ ಕ್ರೀಡಾ ಸಾಮಗ್ರಿಗಳಿಗೆ ಕೊರತೆ ಇಲ್ಲ. ನಾವೆಲ್ಲರೂ ಕ್ರೀಡಾ ತರಬೇತಿ ಕ್ಲಬ್‌ನಲ್ಲಿ ನಿತ್ಯ ಸಂಜೆ ಎರಡು ಗಂಟೆ ತರಬೇತಿ ಪಡೆಯು ತ್ತಿದ್ದೇವೆ’ ಎಂದು ಬೆಂಗಳೂರು ಕಾರ್ಮೆಲ್‌ ಕಾನ್ವೆಂಟ್‌ ಶಾಲೆಯ ಆಟಗಾರ್ತಿಯರಾದ ಉಮೆ ಹನ್ನನ್‌, ಚೈತ್ರಾ ಚಂದ್ರಶೇಖರ, ಸುಮಯ್ಯ ಹಿದಾಯತ್‌, ಸೌದಾ ಹಿದಾಯತ್‌, ನಿದಾ ಹುಸೇನ್‌ ಹೇಳಿದರು.ಬೆಂಗಳೂರು ಪೂರ್ಣಪ್ರಜ್ಞಾ ಪ್ರೌಢ ಶಾಲೆಯ ಗಿರಿಜಾ ಬಿ.ಎನ್‌. ಎಂಬ ವಿದ್ಯಾರ್ಥಿನಿ ಸಹ ಕರ್ನಾಟಕ ತಂಡದಲ್ಲಿದ್ದಾಳೆ.

‘ಇವರಿಗೆ ದಾವಣಗೆರೆಯಲ್ಲಿ ಎಂಟು ದಿನಗಳ ತರಬೇತಿ ನೀಡಿದ್ದೇವೆ. ಕಳೆದ ಬಾರಿ ಗುಜರಾತ್‌ ರಾಜ್ಯದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ನಲ್ಲಿ ನಮ್ಮ ಬಾಲಕಿಯರ ತಂಡ ಲೀಗ್‌ ಹಂತಕ್ಕೆ ವಾಪಸ್ಸು ಬಂದಿತ್ತು. ಕಳೆದ ಬಾರಿಯ ಚಾಂಪಿಯನ್‌ ಗುಜರಾತ್‌ ರಾಜ್ಯದ ತಂಡವನ್ನೇ ಈಗ ನಮ್ಮವರು ಮಣಿಸಿದ್ದಾರೆ’ ಎಂದು ತರಬೇತುದಾರ ಸುಭಾಸ ಶಂಕರಗೌಡ, ವ್ಯವಸ್ಥಾಪಕಿ ಶ್ರುತಿ ಹೇಳಿದರು.ತಂಡದಲ್ಲಿ ಅವಳಿ ಸಹೋದರಿಯರು

ಕರ್ನಾಟಕ ಬಾಲಕಿಯರ ತಂಡದಲ್ಲಿ ಅವಳಿ ಸಹೋದರಿಯರು ಇದ್ದಾರೆ ಬೆಂಗಳೂರು ಕಾರ್ಮೆಲ್‌ ಕಾನ್ವೆಂಟ್‌ ಶಾಲೆಯ ಸುಮಯ್ಯ ಹಿದಾಯತ್‌, ಸೌದಾ ಹಿದಾಯತ್‌ ಈ ಅವಳಿ ಸಹೋದರಿಯರು.

‘ನಾವಿಬ್ಬರೂ ಒಂದೇ ತಂಡದಲ್ಲಿ ಒಟ್ಟಾಗಿ ಆಡುತ್ತಿದ್ದೇವೆ. ಇದು ಖುಷಿ ಕೊಡುತ್ತಿದೆ’ ಎಂದು ಸುಮಯ್ಯ ಹೇಳಿದರು.‘ನಾವು ಆರು ಜನ ಸಹೋದರಿಯರು. ನಮ್ಮ ಮನೆಯಲ್ಲಿ ಯಾರೂ ಕ್ರೀಡಾಪಟುಗಳು ಇಲ್ಲ. ತಂದೆ–ಅಸ್ಲಂ, ತಾಯಿ ಷರೀಫಾ ಅವರ ಬೆಂಬಲದಿಂದ ಒಂದನೇ ತರಗತಿಯಿಂದಲೇ ವಾಲಿಬಾಲ್‌ ಆಟ ಶುರುಮಾಡಿದ್ದೇನೆ’ ಎಂದರು ಸೌದಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.