ಭಾನುವಾರ, ಜೂನ್ 13, 2021
20 °C
ಸಿ.ಎಂ ಪ್ರವಾಸ ಮೊಟಕು: ತಹಶೀಲ್ದಾರ್‌ಗೆ ಘೇರಾವ್‌

ವಾಹನಕ್ಕೆ ಬೆಂಕಿ ಹಚ್ಚಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ): ಮುಖ್ಯ­ಮಂತ್ರಿಗಳ ಪ್ರವಾಸವನ್ನು ತಹ­ಶೀಲ್ದಾರ್‌ ಉದ್ದೇಶಪೂರ್ವಕವಾಗಿ ಮೊಟ­ಕು­­ಗೊಳಿಸಿದ್ದಾರೆ ಎಂದು ಆರೋ­ಪಿಸಿ ರೈತರು ಪಟ್ಟಣದ ಹೊರ ವಲಯ­ದಲ್ಲಿ ತಹಶೀಲ್ದಾರ್‌ ವಾಹನಕ್ಕೆ ಶುಕ್ರ­ವಾರ ಘೇರಾವ್‌ ಹಾಕಿ ಸುಮಾರು ಮೂರು ತಾಸು ಪ್ರತಿಭಟನೆ ನಡೆಸಿದರು.ಕೆಲವರು ಜೀಪ್‌ ಮೇಲೆ ಕಲ್ಲು ತೂರಾಟ ನಡೆಸಿದರು. ಮುಖಂಡರೊಬ್ಬರು ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾದಾಗ ರೈತರೇ ಅವರನ್ನು ತಡೆದರು. ಬೆರಳೆಣಿಕೆ­ಯಷ್ಟಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವ­ಂತಾ­ಯಿತು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ತಕ್ಷಣ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ನಿಯಂತ್ರಿಸಲಾಯಿತು.ಪ್ರವಾಸ ಪಟ್ಟಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಗಾಂವ, ಯಲಿಹಡಲಗಿ ಜೊತೆ ರಡ್ಡೇರಹಟ್ಟಿ, ಅವರಖೋಡ ಮತ್ತು ಸಂಕೋನಹಟ್ಟಿ ಗ್ರಾಮಗಳಿಗೆ ಭೇಟಿ ನೀಡಬೇಕಿತ್ತು. ಆದರೆ ನಂದಗಾಂವ ಮತ್ತು ಯಲಿಹಡಲಗಿ ಗ್ರಾಮಗಳಿಗೆ ಮಾತ್ರ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಸಂಗತಿ ರೈತರ ಗಮನಕ್ಕೆ ಬಂದಾಗ ಗದ್ದಲ ಆರಂಭವಾಯಿತು.ನಂದಗಾಂವದಲ್ಲಿ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ, ಹಾನಿ ಕುರಿತು ಪರಿಶೀಲಿಸಿದ ನಂತರ ಸಿದ್ದರಾಮಯ್ಯ ಯಲಿಹಡಲಗಿ ಕಡೆಗೆ ಹೊರಟಿದ್ದನ್ನು ಗಮನಿಸಿದ ರೈತ ಮುಖಂಡರು ತಹಶೀಲ್ದಾರ್‌ ಅವರ ಜೀಪ್‌ ಅನ್ನು ಬೆನ್ನಟ್ಟಿ ಮಾರ್ಗ ಮಧ್ಯ ತಡೆದು ಪ್ರತಿಭಟಿಸಿದರು.ಸ್ಥಳಕ್ಕೆ ಧಾವಿಸಿದ ಸಚಿವ ಪ್ರಕಾಶ ಹುಕ್ಕೇರಿ ಪ್ರತಿಭಟನಾಕಾರರ ಮನ­ವೊಲಿ­ಸಲು ಸಾಕಷ್ಟು ಪ್ರಯತ್ನಿ­ಸಿದರೂ ಸಫಲ­ರಾಗಲಿಲ್ಲ. ನಂತರ ಜಿಲ್ಲಾಧಿಕಾರಿ­ಯೊಡನೆ ಫೋನಿನಲ್ಲಿ ಮಾತನಾಡಿದ ಸಚಿವರು, ತಹಶೀಲ್ದಾರರ ಈ ವರ್ತನೆ­ಯಿಂದ ರೈತರು ಹತಾಶ­ರಾಗಿದ್ದು, ಶನಿವಾರ ಸಂಜೆಯೊಳಗಾಗಿ ತಹ­ಶೀಲ್ದಾ­ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆಗ ರೈತರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.