ಸೋಮವಾರ, ಮೇ 23, 2022
21 °C

ವಿಂಡೀಸ್ ಎಗೆ ಇನಿಂಗ್ಸ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಂಟ್ ಲೂಸಿಯಾ (ಪಿಟಿಐ): ಕೀರನ್ ಪೊವೆಲ್ (139) ಗಳಿಸಿದ ಆಕರ್ಷಕ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ `ಎ~ ತಂಡ ಭಾರತ `ಎ~ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಪಡೆದಿದೆ.ಬ್ಯುಸೆಜರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಆತಿಥೇಯರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 104 ಓವರ್‌ಗಳಲ್ಲಿ 8 ವಿಕೆಟ್‌ಗೆ 320 ರನ್ ಗಳಿಸಿದ್ದರು. ಪ್ರವಾಸಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳಿಗೆ ಆಲೌಟ್ ಮಾಡಿದ್ದ ವಿಂಡೀಸ್ ಇದೀಗ 90 ರನ್‌ಗಳ ಮುನ್ನಡೆ ಸಾಧಿಸಿದೆ.

14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 34 ರನ್‌ಗಳಿಂದ ಭಾನುವಾರ ಆಟ ಆರಂಭಿಸಿದ ವಿಂಡೀಸ್ ದಿನವಿಡೀ ಭಾರತದ ಬೌಲರ್‌ಗಳನ್ನು ಕಾಡಿತು.

 

ಕ್ರೆಗ್ ಬ್ರಾಥ್‌ವೈಟ್ (15) ಅವರನ್ನು ವಿಂಡೀಸ್ ಬೇಗನೇ ಕಳೆದುಕೊಂಡಿತು. ಆದರೆ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಕೀರನ್ ಪೊವೆಲ್ ಸೊಗಸಾದ ಇನಿಂಗ್ಸ್ ಕಟ್ಟಿದರು. 255 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟ್ಸ್‌ಮನ್ 10 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಡೆವೊನ್ ಥಾಮಸ್ (50) ಮತ್ತು ಡೊನೊವಾನ್ ಪಗೊನ್ (30) ಅವರಿಗೆ ಉತ್ತಮ ಬೆಂಬಲ ನೀಡಿದರು.ಜಲಜ್ ಎಸ್.ಸಕ್ಸೇನಾ (55ಕ್ಕೆ 3) ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಮಿ ಅಹ್ಮದ್ ಮತ್ತು ಪರ್ವಿಂದರ್ ಅವಾನಾ ತಲಾ ಎರಡು ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್: ಭಾರತ `ಎ~: ಮೊದಲ ಇನಿಂಗ್ಸ್: 74 ಓವರ್‌ಗಳಲ್ಲಿ 230 ವೆಸ್ಟ್‌ಇಂಡೀಸ್ `ಎ~: ಮೊದಲ ಇನಿಂಗ್ಸ್ 104 ಓವರ್‌ಗಳಲ್ಲಿ 8 ವಿಕೆಟ್‌ಗೆ 320 (ಕೀರನ್ ಪೊವೆಲ್ 139, ಡೆವೊನ್ ಥಾಮಸ್ 50, ಡೊನೊವಾನ್ ಪಗೊನ್ 30, ಕೈಲ್ ಕಾರ್ಬಿನ್ 26, ಜಲಜ್ ಎಸ್.ಸಕ್ಸೇನಾ 55ಕ್ಕೆ 3, ಶಮಿ ಅಹ್ಮದ್ 62ಕ್ಕೆ 2, ಪರ್ವಿಂದರ್ ಅವಾನಾ 78ಕ್ಕೆ 2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.