ಮಂಗಳವಾರ, ಮೇ 11, 2021
25 °C

ವಿಟ್ಲ: ಹದಗೆಟ್ಟ ರಸ್ತೆ- ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಮಂಗಿಲಪದವು-ಅನಂತಾಡಿ-ನೇರಳಕಟ್ಟೆ ಸಂಪರ್ಕ ರಸ್ತೆ ಹದಗೆಟ್ಟು ವಾಹನ ಚಾಲಕರು ಹಾಗೂ ಸಾರ್ವಜನಿಕರು ನಡೆದಾಡಲೂ ಪರದಾಡುವಂತಾಗಿದೆ.ಕೇರಳ-ಕರ್ನಾಟಕ ಅಂತರರಾಜ್ಯ ಹೆದ್ದಾರಿಯಿಂದ ಮಂಗಿಲಪದವಿನಲ್ಲಿ ಈ ರಸ್ತೆ ತಿರುವು ಪಡೆಯುತ್ತದೆ. ಇದು  ಸುಮಾರು 7 ಕಿಮೀ ಉದ್ದವಿದೆ. ಅಗಲ ಕಿರಿದಾಗಿದೆ. ರಸ್ತೆ ಹೊಂಡಮಯವಾಗಿದೆ. ರಸ್ತೆಯಲ್ಲಿ ವಾಹನ ಸಂಚರಿಸುವುದಿಲ್ಲ. ಬೈಕ್, ಕಾರುಗಳ ಗುಡ್ಡಗಾಡು ರೇಸಿಗೆ ಈ ರಸ್ತೆ ಸೂಕ್ತವಾಗಿದೆ. ರಸ್ತೆ ಡಾಂಬರೀಕರಣ ಎಂದೋ ಆಗಿದೆ. ಅನೇಕ ವರ್ಷಗಳ ಬಳಿಕವೂ ಈ ರಸ್ತೆಯನ್ನು ಮರು ಡಾಂಬರೀಕರಣ ಮಾಡಿಲ್ಲ ಎಂಬ ಅಳಲು ಈ ಪ್ರದೇಶದ ಜನರದ್ದಾಗಿದೆ.ವೀರಕಂಬ, ವಿಟ್ಲಕಸಬಾ, ಅನಂತಾಡಿ, ನೆಟ್ಲಮೂಡ್ನೂರು, ಮಾಣಿ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಿದು. ನೇರಳಕಟ್ಟೆಯಿಂದ ಬಾಬನಕಟ್ಟೆ-ಅನಂತಾಡಿ ತನಕ ಎರಡು ಕಿಮೀ ವ್ಯಾಪ್ತಿಯಲ್ಲಿ  ಡಾಂಬರೀಕರಣವಾಗಿದೆ. ಆದರೆ ರಸ್ತೆಯ ಎರಡೂ ಬದಿಯಿರುವ ಸಾಲು ಮರಗಳ ನೀರುಬಿದ್ದು ರಸ್ತೆ ಗುಣಮಟ್ಟ ಉಳಿದಿಲ್ಲ. ಮಂಗಿಲಪದವಿನಿಂದ ಅನಂತಾಡಿ ತನಕವೂ ಈ ರಸ್ತೆ ಕೆಟ್ಟುಹೋಗಿದೆ. ಏರು ತಗ್ಗುಗಳಿಂದ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಳ್ಳಿ ರಸ್ತೆಯೆಂಬ ಕಾರಣಕ್ಕೆ ಕಡೆಗಣಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.ರಸ್ತೆಯುದ್ದಕ್ಕೂ ದೊಡ್ಡ ಹೊಂಡಗಳಿವೆ. ವಾಹನಗಳು ರಸ್ತೆಯನ್ನು ಬಿಟ್ಟು ಬದಿಯಲ್ಲಿ ಸಂಚರಿಸುತ್ತಿವೆ. ಒಕ್ಕೆತ್ತೂರು ಮಾಡ ಮಲರಾಯ ದೈವಸ್ಥಾನದ ಬಳಿ ಭಾರಿ ಹೊಂಡ ಉಂಟಾಗಿದೆ. ಆ ಹೊಂಡಗಳಿಗೆ ಮಣ್ಣು ಹಾಕಲಾಗಿದ್ದು ಕೆಸರಗದ್ದೆಯಂತಾಗಿದೆ. ಇದೇ ಜಾಗದಲ್ಲಿ ಭಾರೀ ಅಪಾಯಕಾರಿ ತಿರುವು ಕೂಡಾ ಇದೆ.ಅವೈಜ್ಞಾನಿಕವಾದ ಈ ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ಪೂರ್ತಿ ರಸ್ತೆಯನ್ನು ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ಮರು ನಿರ್ಮಿಸಬೇಕಾಗಿದೆ. ನೇರಳಕಟ್ಟೆ ಸಮೀಪದಲ್ಲಿ ರೈಲುಹಳಿ ಮೇಲೆ ಸೇತುವೆಯೊಂದಿದೆ. ಅದು ಕೂಡಾ ಇಂದಿನ ಕಾಲಕ್ಕೆ ತಕ್ಕುದಾಗಿಲ್ಲ. ಅಗಲ ಕಿರಿದಾಗಿದೆ. ಆದರೂ ಸಂಚಾರಕ್ಕೆ ಯೋಗ್ಯವಾಗಿಯೇ ಇದೆ. ಹೆಚ್ಚು ಉದ್ದವಾಗಿಲ್ಲ ಮತ್ತು ನಿರಂತರ ವಾಹನ ಸಂಚಾರವಿಲ್ಲದೇ ಇರುವುದರಿಂದ ಬಹಳ ದೊಡ್ಡ ಸಮಸ್ಯೆಯೇನೂ ಇಲ್ಲ ಎಂದು ಜನರು ಹೇಳುತ್ತಾರೆ.ವಿಟ್ಲದಿಂದ ಈ ರಸ್ತೆ ಮೂಲಕ ಉಪ್ಪಿನಂಗಡಿಗೆ ಕೆಎಸ್‌ಆರ್‌ಟಿಸಿ ಬಸ್ ದಿನಕ್ಕೆರಡು ಬಾರಿ ಸಂಚರಿಸುತ್ತಿತ್ತು. ಈ ರಸ್ತೆಯ ಅವ್ಯವಸ್ಥೆಯಿಂದ ಇದೀಗ ಅದು ಮಾಯವಾಗಿದೆ. ಇಲಾಖೆ ಲೆಕ್ಕಾಚಾರ ಪ್ರಕಾರ ನಷ್ಟವೇ ಇದಕ್ಕೆ ಕಾರಣ. ಆದರೆ ಹೊತ್ತುಗೊತ್ತಿಲ್ಲದೇ ಸಮಯಕ್ಕೆ ಸರಿಯಾಗಿ ಸಂಚರಿಸದೇ ಇದ್ದಲ್ಲಿ ಲಾಭ ಹೇಗಾದೀತು? ಈ ಭಾಗದ ಜನತೆ ರಿಕ್ಷಾ, ಜೀಪು, ಸೈಕಲ್ ಮೂಲಕ ಅಥವಾ ನಡೆದುಕೊಂಡೇ ಸಾಗುವ ಪರಿಸ್ಥಿತಿ ಶೋಚನೀಯ ಎನಿಸುವುದಿಲ್ಲವೇ ಎಂಬ ಪ್ರಶ್ನೆ ಜನತೆಯದು.ವಿಟ್ಲಕಸಬಾ ಗ್ರಾಮದ ಬೊಳಂತಿಮೊಗರು, ಮಾಮೇಶ್ವರ, ನೆಲ್ಲಿಗುಡ್ಡೆ ಪ್ರದೇಶಗಳಿಗೆ ಇದೇ ಸಂಪರ್ಕ ರಸ್ತೆ ಅನಿವಾರ್ಯ. ಬೊಳಂತಿಮೊಗರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೂ ಇಲ್ಲಿವೆ. ಈ ರಸ್ತೆ ಇಲ್ಲದೇ ಹೋದಲ್ಲಿ ಈ ಭಾಗದ ಜನತೆ ವಿಟ್ಲಕಸಬಾ ಗ್ರಾಮದ ಸಂಪರ್ಕದಿಂದ ವಂಚಿತರಾಗುತ್ತಾರೆ. ದ್ವೀಪದಂತಾಗಿ ಬಿಡುತ್ತದೆ.ಈ ಪ್ರದೇಶವನ್ನು ಸಂಪರ್ಕಿಸಲು ಬೇರೆ ರಸ್ತೆಗಳಿಲ್ಲ. ಕಂಬಳಬೆಟ್ಟು ಕಡೆಯಿಂದ ರಸ್ತೆಯಿದ್ದರೂ ಬೊಳಂತಿಮೊಗರನ್ನು ತಲುಪಲಾಗುವುದಿಲ್ಲ. ಹತ್ತಿರದಲ್ಲಿ ಹರಿಯುವ ಒಕ್ಕೆತ್ತೂರು ಹೊಳೆಗೆ ಸೇತುವೆಯಿಲ್ಲ. ಸುಭದ್ರವಾದ ಕಾಲುಸಂಕವಿದೆ. ಪಾದಚಾರಿಗಳು ಮಾತ್ರ ಅತ್ತಿಂದಿತ್ತ ಸಂಚರಿಸುವುದಕ್ಕೆ ಸಾಧ್ಯ. ಜಾಕಿಮೂಲೆಯಲ್ಲಿ ಹೊಳೆಗೆ ಕಾಲುಸಂಕ ಬೇಕೆಂದು 15 ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.ಅತ್ಯಂತ ಪ್ರಸಿದ್ಧ ಅನಂತಾಡಿ, ಮಾಣಿ ಉಳ್ಳಾಲ್ತಿ ದೈವಸ್ಥಾನಗಳು, ಕರಿಂಕ, ಬಾಬನಕಟ್ಟೆ, ಸಂಕೇಶ ಮೊದಲಾದ ಭಾಗದ ಜನರಿಗೆ ಉಪಯುಕ್ತವಾದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಅನಂತಾಡಿಯಿಂದ ವೀರಕಂಬಕ್ಕೆ ತೆರಳಲು ಮತ್ತೊಂದು ರಸ್ತೆಯೂ ಇದೇ ರಸ್ತೆಗೆ ಸಂಪರ್ಕ ಕೊಂಡಿಯಾಗಿದೆ. ಅದು ಕೂಡಾ ಅಭಿವೃದ್ಧಿಯಾಗಬೇಕಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.